






ಬೆಳ್ತಂಗಡಿ: ತಾಲೂಕಿನಲ್ಲಿ ಜ.೧೪ರಂದು ಬೆಳಿಗ್ಗೆ ಮನೆ ಮಾಡಿದ್ದ ಮಕರ ಸಂಕ್ರಾಂತಿಯ ಸಂಭ್ರಮ ಏಕಾಏಕಿ ಮಾಯವಾಗಿತ್ತು. ಧನುಪೂಜೆಗೆ ಹೊರಟಿದ್ದ ೯ನೇ ತರಗತಿಯ ವಿದ್ಯಾರ್ಥಿ ನಾಪತ್ತೆ ಎಂಬ ಸುದ್ದಿ ಗೇರುಕಟ್ಟೆಯ ಸಂಬೋಳ್ಯದಿಂದ ಕಾಡ್ಗಿಚ್ಚಿನಂತೆ ಹರಡಿತ್ತು. ಕಾಸರಗೋಡಿನ ಬಾಯಾರಿನಿಂದ ಕಳೆದ ೧೩ ವರ್ಷಗಳ ಹಿಂದೆ ಆಗಮಿಸಿ ಕುವೆಟ್ಟು ಗ್ರಾಮದ ಸಂಭೋಳ್ಯದಲ್ಲಿ ನೆಲೆಸಿ ಕೃಷಿ ಚಟುವಟಿಕೆ ಮಾಡುತ್ತಿರುವ ಸುಬ್ರಹ್ಮಣ್ಯ ನಾಯಕ್ ಮತ್ತು ರತ್ನ ದಂಪತಿಯ ಎರಡನೇ ಪುತ್ರ ಸುಮಂತ್ (೧೫) ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಕರ ಸಂಕ್ರಮಣದ ಧನುಪೂಜೆಗೆಂದು ಮನೆಯಿಂದ ಮುಂಜಾನೆ ತೆರಳಿದಾತ ನಾಪತ್ತೆಯಾಗಿದ್ದ. ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಸುಮಂತ್ಗಾಗಿ ಹುಡುಕಾಟ ನಡೆಸುತ್ತಿದ್ದಂತೆಯೇ ಮನೆ ಸಮೀಪದಲ್ಲಿ ಇರುವ ಶ್ಯಾಮಲಾ ಎಂಬವರಿಗೆ ಸೇರಿದ ಜಮೀನಿನ ಕೆರೆಯಲ್ಲಿ ಆತ ಶವವಾಗಿ ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಸಕ ಹರೀಶ್ ಪೂಂಜ, ಪಶ್ಚಿಮ ವಲಯ ಐಜಿಪಿ ಅಮಿತ್ಸಿಂಗ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್, ಡಿವೈಎಸ್ಪಿ ಸಿ.ಕೆ. ರೋಹಿಣಿ, ತಹಶೀಲ್ದಾರ್ ಪ್ರಥ್ವಿ ಸಾನಿಕಂ, ಇನ್ಸ್ಪೆಕ್ಟರ್ ಸುಬ್ಬಾಪುರ ಮಠ್, ಎಸ್.ಐ. ಆನಂದ್, ಬಿಇಓ ತಾರಕೇಸರಿ, ಆರ್ಎಫ್ಒ ತ್ಯಾಗರಾಜ್, ಅಗ್ನಿಶಾಮಕದಳದ ಸುರಕ್ಷತಾಧಿಕಾರಿ ವೆಂಕಟೇಶ್ ರೆಡ್ಡಿ ಸೇರಿದಂತೆ ಸಾವಿರಾರು ಮಂದಿ ಭೇಟಿ ನೀಡಿದ್ದರು. ಘಟನೆಯ ಕುರಿತು ತೀವ್ರ ತನಿಖೆ ನಡೆಯುತ್ತಿದೆ.
ಧನುಪೂಜೆಗೆ ಬರ್ತಾನೆಂದು ಕಾಯುತ್ತಿದ್ದ ಸ್ನೇಹಿತರು: ಸುಮಂತ್ ತನ್ನ ಸ್ನೇಹಿತರಾದ ಪಕ್ಕದ ಮನೆಯ ಮನ್ವಿತ್, ತನುಷ್, ಕಾರ್ತಿಕ್ ಮತ್ತು ಇತರರೊಂದಿಗೆ ಸೇರಿಕೊಂಡು ನಿತ್ಯವೂ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಧನುಪೂಜೆಗೆ ತೆರಳುತ್ತಿದ್ದರು. ಅದರಂತೆ ಸುಮಂತ್ ತನ್ನ ಮನೆಯಿಂದ ಕಾಲು ದಾರಿಯ ಮೂಲಕ ಕೆಲ ದೂರ ಸಾಗಿ ನಂತರ ತನ್ನ ಸ್ನೇಹಿತನ ಮನೆಯ ಪಕ್ಕ ನಿಲ್ಲಿಸಿದ್ದ ಸೈಕಲ್ನಲ್ಲಿ ತೆರಳುತ್ತಿದ್ದರು. ಜ.೧೪ರ ಮಕರ ಸಂಕ್ರಾಂತಿಯಂದು ಕೂಡ ಬೆಳಗ್ಗೆ ಸುಮಂತ್ ಬರುತ್ತಾನೆಂದು ಕಾಯುತ್ತಿದ್ದ ಸ್ನೇಹಿತರು ಕಾದು ಕಾದು ನಂತರ ಅವರು ದೇವಸ್ಥಾನಕ್ಕೆ ತೆರಳಿದ್ದರು. ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಸುಮಂತ್ ಅವರ ಮನೆಗೆ ಸುಮಾರು ೩.೫ ಕಿಲೋ ಮೀಟರ್ ಅಂತರ ಇದೆ.
ಪೂಜೆ ನಂತರ ಸುಮಂತ್ ಮನೆಯವರನ್ನು ವಿಚಾರಿಸಿದ ಸ್ನೇಹಿತರು: ಧನುಪೂಜೆ ನಂತರ ಮನೆಗೆ ವಾಪಾಸಾದ ಸುಮಂತ್ ಸ್ನೇಹಿತರು ಸುಬ್ರಹ್ಮಣ್ಯರಿಗೆ ಕರೆ ಮಾಡಿದಾಗ ಸುಮಂತ್ ಧನುಪೂಜೆಗೂ ಹೋಗದೆ ಮನೆಗೂ ವಾಪಾಸಾಗದೇ ಇರುವುದು ಗೊತ್ತಾಗಿದೆ. ಸುಮಂತ್ ಎಲ್ಲಿ ಹೋದ ಎಂದು ಆತಂಕಗೊಂಡ ಮನೆಯವರು ಮತ್ತು ಸ್ಥಳೀಯರು ಆತ ಹೋದ ದಾರಿಯಲ್ಲಿ ಹುಡುಕಾಟ ನಡೆಸಿದರು. ಈ ವೇಳೆ, ಅವರು ಕಾಲುದಾರಿಯಲ್ಲಿ ಸಾಗುವಾಗ ಸಿಗುವ ಶ್ಯಾಮಲಾ ಎಂಬವರ ಜಮೀನಿನಲ್ಲಿ ರಕ್ತದ ಕಲೆ ಪತ್ತೆಯಾಗಿದೆ. ಅದರಲ್ಲೂ ಜಮೀನಿನಲ್ಲಿದ್ದ ಕೆರೆಯ ಪಕ್ಕದಲ್ಲೇ ರಕ್ತದ ಕಲೆ ಪತ್ತೆಯಾಗಿದ್ದು ತೀವ್ರ ಆತಂಕಕ್ಕೆ ಕಾರಣವಾಯಿತು.
ಚಿರತೆ ದಾಳಿ ಎಂದು ಹರಡಿದ ವದಂತಿ: ಧನುಪೂಜೆಗೆ ಹೋಗಿದ್ದ ಬಾಲಕ ನಾಪತ್ತೆಯಾಗಿದ್ದಾನೆ. ರಕ್ತದ ಕಲೆ ಪತ್ತೆಯಾಗಿದೆ ಅನ್ನುವ ಸುದ್ದಿಯ ಬೆನ್ನಲ್ಲೇ ಚಿರತೆ ದಾಳಿಯ ಶಂಕೆಯೂ ವ್ಯಕ್ತವಾಗಿತ್ತು. ಅದೇ ರೀತಿಯ ವದಂತಿಯೂ ಕೂಡ ಹಬ್ಬಿತ್ತು.
ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ-ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರಿಂದ ರಕ್ತದ ಕಲೆ ಸಂಗ್ರಹ: ಕೂಡಲೇ ಸ್ಥಳಕ್ಕೆ ಬೆಳ್ತಂಗಡಿ ಠಾಣೆಯ ಪೊಲೀಸ್ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಆಗಮಿಸಿದರು. ಅಲ್ಲದೇ ಸ್ಥಳದಲ್ಲಿದ್ದ ರಕ್ತದ ಕಲೆಗಳನ್ನು ವಿಧಿವಿಜ್ಞಾನ ಇಲಾಖೆಯ ಅಧಿಕಾರಿಗಳು ಸಂಗ್ರಹಿಸಿದರು. ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹುಡುಕಾಟ ಆರಂಭವಾಯಿತು.
ಕೆರೆಯಲ್ಲಿ ಒಂಬತ್ತನೇ ಪ್ರಯತ್ನದಲ್ಲಿ ಗರುಡ ಪಾತಾಳ ಉಪಯೋಗಿಸಿ ಶವ ಪತ್ತೆ: ಬಾಲಕ ಕೆರೆಗೆ ಏನಾದರೂ ಬಿದ್ದಿದ್ದಾನಾ ಎಂಬ ಅನುಮಾನದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕದಳದವರು ಗರುಡ ಪಾತಾಳ ಉಪಯೋಗಿಸಿ ಪತ್ತೆ ಕಾರ್ಯಕ್ಕೆ ಮುಂದಾದರು. ಸತತವಾಗಿ ಪ್ರಯತ್ನಿಸಿದರೂ ಕೂಡ ಹುಲ್ಲು ಕಡ್ಡಿಗಳು ಹೊರತುಪಡಿಸಿ ಬೇರೆನೂ ಪತ್ತೆಯಾಗಿಲ್ಲ. ೯ನೇ ಪ್ರಯತ್ನದಲ್ಲಿ ಗರುಡ ಪಾತಾಳ ಉಪಯೋಗಿಸಿದಾಗ ಶವ ಪತ್ತೆಯಾಗಿದೆ.
ಕಾಲಿನಲ್ಲಿ ಚಪ್ಪಲಿ, ಕೈಯಲ್ಲಿ ಕಡೆ ಕ್ಷಣದಲ್ಲಿ ಹಿಡಿದಿರಬಹುದಾದ ಹುಲ್ಲುಕಡ್ಡಿ: ಕಪ್ಪು ಪ್ಯಾಂಟ್ ಮತ್ತು ಕೆಂಪು ಟೀಶರ್ಟ್ ಧರಿಸಿದ್ದ ಸುಮಂತ್ ಅವರ ಶವ ಪತ್ತೆಯಾದಾಗ ಕಾಲಿನಲ್ಲಿ ಚಪ್ಪಲಿ ಹಾಗೂ ಕೈಯಲ್ಲಿ ಕಡೆ ಕ್ಷಣದಲ್ಲಿ ಹಿಡಿದಿರಬಹುದಾದ ಹುಲ್ಲುಕಡ್ಡಿ ಪತ್ತೆಯಾಗಿದೆ. ಕೂಡಲೇ ಶವವನ್ನು ಹೊರತೆಗೆದ ಪೊಲೀಸರು ಪರಿಶೀಲನೆ ನಡೆಸಿದರು.
ಶ್ವಾನದಳದ ಆಗಮನ, ಚುರುಕುಗೊಂಡ ತನಿಖೆ,ತಲೆಗೆ ಏಟು ಬಿದ್ದಿರುವ ಬಗ್ಗೆ ಅನುಮಾನ: ಘಟನಾ ಸ್ಥಳಕ್ಕೆ ಶ್ವಾನದಳವೂ ಆಗಮಿಸಿದ್ದು, ತನಿಖೆ ಚುರುಕುಗೊಂಡಿದೆ. ಇದೇ ವೇಳೆ, ಸುಮಂತ್ ತಲೆಗೆ ಏಟು ಬಿದ್ದಿದೆ ಎಂಬುದೇ ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ ಅಲ್ಲಿ ಸಿಕ್ಕಿರುವ ರಕ್ತದ ಕಲೆ ಜನರಲ್ಲಿ ಅನುಮಾನಗಳನ್ನು ಹೆಚ್ಚಿಸಿದೆ.
ಸ್ಥಳಕ್ಕೆ ಎಸ್ಪಿ ಡಾ. ಅರುಣ್ ಭೇಟಿ: ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಭೇಟಿ ನೀಡಿ ಬೆಳ್ತಂಗಡಿ ಪೊಲೀಸ್ ಇನ್ಸ್ಪೆಕ್ಟರ್ ಸುಬ್ಬಾಪುರ್ ಮಠ್ರವರಿಂದ ಮಾಹಿತಿ ಕಲೆ ಹಾಕಿದರು. ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಹರೀಶ್ ಪೂಂಜ ಸಮಗ್ರ ತನಿಖೆಗೆ ಒತ್ತಾಯಿಸಿದರು. ಇದೇ ವೇಳೆ ಸುದ್ದಿ ಬಿಡುಗಡೆಯೊಂದಿಗೆ ಶಾಸಕರು ಮಾತನಾಡಿದರು.
ಮಾವನೊಂದಿಗೆ ಕ್ರಿಕೆಟ್ ಆಡಿದ್ದ ಸುಮಂತ್: ಸುಮಂತ್ ಅವರ ಮಾವ ನರಸಿಂಹ ಅವರು ಜ.೧೩ರಂದು ಸುಮಂತ್ ಮನೆಗೆ ಆಗಮಿಸಿದ್ದರು. ಸಾಯಂಕಾಲ ಅವರೊಂದಿಗೆ ಸುಮಂತ್ ಕ್ರಿಕೆಟ್ ಆಡಿದ್ದ. ಇದನ್ನು ಘಟನಾ ಸ್ಥಳದಲ್ಲಿ ಮಾವ ಸುದ್ದಿಯೊಂದಿಗೆ ನೆನಪಿಸಿಕೊಂಡರು. ಸುಮಂತ್ ಮೃತದೇಹ ಕೆರೆಯಲ್ಲಿ ಪತ್ತೆಯಾದಾಗ ಸ್ಥಳದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಸುಮಂತ್ ಅವರು ತಂದೆ ಸುಬ್ರಹ್ಮಣ್ಯ ನಾಯಕ್,ತಾಯಿ ರತ್ನ, ಇಂಜಿನಿಯರಿಂಗ್ ಓದುತ್ತಿರುವ ಅಣ್ಣ ಸುದರ್ಶನ್ ಮತ್ತು ೩ನೇ ತರಗತಿ ಕಲಿಯುತ್ತಿರುವ ತಂಗಿ ಸ್ವರ್ಣಗೌರಿ ಅವರನ್ನು ಅಗಲಿದ್ದಾರೆ.


ಸಮಗ್ರ ತನಿಖೆಯಾಗಬೇಕು: ಇದೊಂದು ಬಹಳ ದುರದೃಷ್ಟಕರ ಘಟನೆ. ೯ನೇ ಕ್ಲಾಸ್ನಲ್ಲಿ ಓದುತ್ತಿದ್ದ ಸುಮಂತ್ ಎನ್ನುವ ವಿದ್ಯಾರ್ಥಿ ಮನೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತೇನೆಂದು ತೆರಳಿ ನಂತರ ಈಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಇದರ ಸಮಗ್ರ ತನಿಖೆ ಮಾಡಬೇಕೆಂದು ನಿರ್ದೇಶನ ಕೊಟ್ಟಿzನೆ. ಜಿಲ್ಲಾ ವರಿಷ್ಠಾಧಿಕಾರಿಯವರಲ್ಲಿ ಮನವಿ ಮಾಡುತ್ತೇನೆ. ಇದರ ಸಮಗ್ರ ತನಿಖೆ ಮಾಡಬೇಕೆಂದು ಆಗ್ರಹಿಸುತ್ತೇನೆ. -ಹರೀಶ್ ಪೂಂಜ, ಶಾಸಕರು
ಗಾಯಗಳಾಗಿವೆ ತನಿಖೆ ನಡೆಯುತ್ತಿದೆ: ಬೆಳ್ತಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗೇರುಕಟ್ಟೆಯಲ್ಲಿ ಸುಮಂತ್ ಎಂಬ ೧೫ ವರ್ಷದ ಹುಡುಗ ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ಹೋಗುತ್ತೇನೆಂದು ಹೋಗಿದ್ದಾನೆ. ಅವರು ನಾಪತ್ತೆಯಾದರೆಂದು ಹುಡುಕಾಡಿದಾಗ ಮನೆಯಿಂದ ೫೦೦ ಮೀಟರ್ ದೂರದ ಬಾವಿಯಲ್ಲಿ ಶವ ಪತ್ತೆಯಾಗಿದೆ. ಅದರ ಪಕ್ಕದಲ್ಲೇ ರಕ್ತದ ಕಲೆಗಳು ಸಿಕ್ಕಿವೆ. ಬೆಳಗ್ಗೆ ಮಿಸ್ಸಿಂಗ್ ಕೇಸ್ ದಾಖಲಾಗಿದೆ. ಅದರ ಮೇಲೆ ಪೋಸ್ಟ್ಮಾಟಂ ಮಾಡಲಿದ್ದೇವೆ. ಅವರಿಗೆ ಗಾಯಗಳಾಗಿವೆ. ಅದು ಏನು ಗಾಯ ಅನ್ನುವುದು ತನಿಖೆಯಿಂದ ಗೊತ್ತಾಗಲಿದೆ. -ಅರುಣ್ ಕುಮಾರ್, ಎಸ್ಪಿ ದ.ಕ.ಜಿಲ್ಲೆ
ನಾವು ಕಾದು ಕಾದು ದೇವಸ್ಥಾನಕ್ಕೆ ತೆರಳಿದೆವು: ನಾವು ಅವನು ಬರ್ತಾನೆ ಎಂದು ಕಾಯುತ್ತಿದ್ದೆವು. ಬೆಳಗ್ಗೆ ೫ ಗಂಟೆಗೆ ಬರುತ್ತಾನೆ ಎಂದು ಕಾಯುತ್ತಿದ್ದೆವು. ಧನುಪೂಜೆಗೆ ಆತ ಬರಲೇ ಇಲ್ಲ. ನಾವು ಕಾದು ಕಾದು ಪೂಜೆಗೆ ತೆರಳಿದೆವು. ಪೂಜೆಯಿಂದ ಮರಳಿ ಬಂದ ನಂತರ ಅವನ ತಾಯಿಗೆ ಕರೆ ಮಾಡಿದೆವು. ನಂತರ ಅವರು ನಾವು ಹುಡುಕಾಟಕ್ಕೆ ಆರಂಭಿಸಿದೆವು. -ಮನ್ವಿತ್, ಸುಮಂತ್ ಸ್ನೇಹಿತ
ತಲೆಗೆ ಏಟು ಬಿದ್ದಿದೆ-ಕೆರೆಯ ನೀರು ಕುಡಿದಂತೆ ಇಲ್ಲ-ಅದಕ್ಕೆ ಅನುಮಾನವಿದೆ: ನಾಳ ದೇವಸ್ಥಾನಕ್ಕೆ ವಾರಕ್ಕೊಂದು ಬಾರಿ ಧನುಪೂಜೆಗೆ ಹೋಗುತ್ತಾನೆ. ಮಕರ ಸಂಕ್ರಾಂತಿಯಂದು ಕೂಡ ಪೂಜೆಗೆ ಹೋಗುತ್ತೇನೆಂದು ಹೇಳಿ ಅದಕ್ಕೆ ಬೇಕಾದ ಡ್ರೆಸ್ ತೆಗೆದಿಟ್ಟು ಮಲಗಿದ್ದಾನೆ. ಬೆಳಗ್ಗೆ ಧನುಪೂಜೆಗೆ ಹೋದಾಗ ಆತ ನಮಗೆ ಉಪದ್ರವಾಗುತ್ತದೆ ಅಂತ ಕರೆಯುವುದಿಲ್ಲ. ಆತನೇ ಎದ್ದು ಹೋಗಿದ್ದಾನೆ. ಬೆಳಗ್ಗೆ ಆತ ದೇವಸ್ಥಾನಕ್ಕೆ ಪೂಜೆಗೆ ಬಂದಿಲ್ಲ ಯಾಕೆ ಎಂದು ಅವನ ಸ್ನೇಹಿತ ಫೋನ್ ಮಾಡಿದ. ನಾವು ಮನೆಯಿಂದ ಹೊರಟಿದ್ದಾನೆ ಎಂದು ಹೇಳಿದೆವು. ನಿಮ್ಮ ಜೊತೆ ಬಂದಿಲ್ವಾ ಎಂದು ಹೇಳಿ ನಂತರ ಹುಡುಕಾಡುವಾಗ ಕೆರೆಯ ಬದಿಯಲ್ಲಿ ರಕ್ತದ ಕಲೆಗಳು ಕಂಡುಬಂತು. ತಲೆಯಲ್ಲಿ ಗಾಯವಿದ್ದ ಕಾರಣ ನನಗೆ ಅನುಮಾನವಿದೆ. ಅವನು ತಲೆಬಿಸಿ ಮಾಡುವ ಹುಡುಗನಲ್ಲ. ಎಲ್ಲವನ್ನೂ ತಮಾಷೆಯಾಗಿ ತೆಗೆದುಕೊಳ್ಳುವ ಹುಡುಗ ಅವನು. ಕೆರೆಯ ಆಚೆಕಡೆ ರಕ್ತದ ಕಲೆಗಳು ಉಂಟು. ಕೆರೆಯ ಪಕ್ಕದಲ್ಲಿ ಇಲ್ಲ. ಜಾರಿದ ಕಡೆಯಲ್ಲಿ ರಕ್ತದ ಕಲೆಯಿಲ್ಲ. ಕೆರೆಯಿಂದ ಮೇಲೆತ್ತಿದ ದೇಹವನ್ನು ನೋಡಿದಾಗ ನೀರು ಕೂಡ ಕುಡಿದಂತೆ ಕಾಣುತ್ತಿಲ್ಲ. ಸಾಧಾರಣವಾಗಿ ತಲೆಗೆ ಏಟು ಇರುವುದರಿಂದ ಕೊಂಡು ಹೋಗಿ ಹಾಕಿದಂತೆ ಮೇಲ್ನೋಟಕ್ಕೆ ನನಗೆ ಕಾಣುತ್ತಿದೆ. -ಸುಬ್ರಹ್ಮಣ್ಯ ನಾಯಕ್, ಸುಮಂತ್ ತಂದೆ
ಮುಂದೆ ವಿಜ್ಞಾನಿ ಆಗುತ್ತಾನೆ ಅಂತ ಹೇಳುತ್ತಿದ್ದೆ` ಆತನದ್ದು ತುಂಬಾ ಬೋಲ್ಡ್ ವ್ಯಕ್ತಿತ್ವ. ನದಿಯಿಂದ ಕಸ ತೆಗೆಯುವ ಯಂತ್ರ ಕಂಡು ಹಿಡಿಯುವ ಪ್ರಾಜೆಕ್ಟ್ ಮಾಡುತ್ತಿದ್ದ. ಅದಾನಿ ಅಂತರಾಷ್ಟ್ರೀಯ ಶಾಲೆ ಅಹಮದಾಬಾದ್ನಲ್ಲಿ ಫೆ. ೬,೭,೮ರಂದು ಸ್ಪರ್ಧೆಯಿತ್ತು. ಅದಕ್ಕೆ ತೆರಳುವುದಕ್ಕೆ ವಿಮಾನ ಮತ್ತು ರೈಲು ಟಿಕೆಟ್ ಕೂಡ ಬುಕ್ ಆಗಿತ್ತು. ಕಲಿಕೆಯಲ್ಲಿ ೮೦% ಇದ್ದರೂ ಅಪಾರ ಚುರುಕು. ಆತ ವಿಜ್ಞಾನಿಯಾಗುತ್ತಾನೆ ಅಂತ ಹೇಳುತ್ತಿದ್ದೆ. ಆದರೆ ಈಗ ಪರಿಸ್ಥಿತಿ ಹೀಗಾಯ್ತು.
-ಕೃಷ್ಣಪ್ರಸಾದ್, ಸುಮಂತ್ ಶಿಕ್ಷಕ
ಪೊಲೀಸ್ ಪ್ರಕಟಣೆ: ದಿನಾಂಕ ೧೪-೦೧-೨೦೨೬ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೇರುಕಟ್ಟೆಯ ಸುಮಂತ್ (೧೫) ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದ್ದು ಸದರಿ ಹುಡುಗ ವಾರಕ್ಕೊಮ್ಮೆ ಬೆಳ್ಳಂ ಬೆಳಗ್ಗೆ ದೇವಸ್ಥಾನಕ್ಕೆ ಹೋಗುವ ಅಭ್ಯಾಸವಿದ್ದು ಅದೇ ರೀತಿ ಈ ದಿನ ಬೆಳಗ್ಗೆ ೫:೦೦ ಗಂಟೆಗೆ ಮನೆಯಿಂದ ತೆರಳಿದ್ದು ವಾಪಸ್ ಮನೆಗೆ ಬರದೇ ಇದ್ದಾಗ ಹುಡುಕಾಡಿದಲ್ಲಿ ಮನೆಯಿಂದ ೫೦೦ ಮೀಟರ್ ದೂರದಲ್ಲಿ ಇರುವ ಬಾವಿಯಲ್ಲಿ ಆತನ ಶವ ಪತ್ತೆಯಾಗಿರುತ್ತದೆ. ಮೃತದೇಹದ ಮೇಲೆ ಕೆಲವು ಗಾಯಗಳಿದ್ದು ಆ ಗಾಯಗಳು ಹೇಗೆ ಉಂಟಾಗಿವೆ ಎಂಬ ಕಾರಣವು ಪೋಸ್ಟ್ಮಾಟಂ ವರದಿ ಬಂದ ನಂತರ ಸ್ಪಷ್ಟವಾಗುತ್ತದೆ. ಈ ಬಗ್ಗೆ ತನಿಖೆ ಮುಂದುವರಿದಿದ್ದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.








