






ಬೆಳ್ತಂಗಡಿ: ಜ. 26 2026ರಂದು ಬೆಂಗಳೂರಿನ ಮಾಣಿಕ್ ಷಾ ಕ್ರೀಡಾಂಗಣದಲ್ಲಿ ನಡೆಯುವ ಕರ್ನಾಟಕ ರಾಜ್ಯ ಗಣರಾಜ್ಯೋತ್ಸವ ಪಥಸಂಚನ ಕಾರ್ಯಕ್ರಮದಲ್ಲಿ ಭಾಗವಹಿಸುವ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ತಂಡದ ಕಾರ್ಯಕ್ರಮ ಅಧಿಕಾರಿಯಾಗಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು (ಸ್ವಾಯತ್ತ) ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಮುಖ್ಯಸ್ಥ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್ ಅವರು ಆಯ್ಕೆಯಾಗಿದ್ದಾರೆ.


ಕಾಲೇಜಿನಿಂದ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಿಂದ ರಾಜ್ಯ ಗಣರಾಜ್ಯೋತ್ಸವ ಪಥಸಂಚಲನ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸೇವಾ ಯೋಜನಾ ವಿಭಾಗದಿಂದ ಪ್ರತಿನಿಧಿಸುತ್ತಿರುವ ಮೊದಲ ಕಾರ್ಯಕ್ರಮ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ಇವರು ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಒಂದು ವಾರದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
ಕಳೆದ ಮೂರು ವರ್ಷಗಳಿಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ವಿಭಾಗದ ಮುಖ್ಯಸ್ಥರಾಗಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ಕಾಲೇಜಿಗೆ ಮತ್ತು ವಿಶ್ವವಿದ್ಯಾನಿಲಯಕ್ಕೆ ಹಿರಿಮೆಯನ್ನು ತಂದಿರುವ ಅವರಿಗೆ ಎಸ್. ಡಿ. ಎಂ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ. ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿ ಡಾ. ಶೇಷಪ್ಪ ಕೆ. ಅಭಿನಂದಿಸಿ ಶುಭ ಹಾರೈಸಿದ್ದಾರೆ.









