ಯುವತಿಗೆ ಮೆಸೆಜ್ ಮಾಡುತ್ತಿದ್ದ ವಿಚಾರ: ಜಾತಿ ನಿಂದನೆ ಮಾಡಿ ಕೊಲೆಗೆ ಯತ್ನ: ನೌಷದ್ ನಾವೂರು ಬಂಧನ

0

ಬೆಳ್ತಂಗಡಿ: ಜಾತಿ ನಿಂದನೆ ಮಾಡಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಂಬುಲೆನ್ಸ್ ಚಾಲಕನಾಗಿರುವ ನಾವೂರು ನಿವಾಸಿ ನೌಷದ್ ಎಂಬಾತನನ್ನು ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

ಪ್ರಕರಣ: ಡಿ.೨೧ರಂದು ರಾತ್ರಿ ೯ರ ವೇಳೆಗೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಶಾಲೆಯೊಂದರ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಇಂದಬೆಟ್ಟು ನಿವಾಸಿ ದಯಾನಂದ ಹಾಗೂ ಸ್ನೇಹಿತರಾದ ಆರೀಫ್ ಕಲ್ಲಾಜೆ, ಆಸೀಫ್ ಇಂದಬೆಟ್ಟು ಮತ್ತು ಸ್ವಾಲಿ ನಾವೂರ ಅವರು ತೆರಳಿದ್ದರು. ರಾತ್ರಿ ೯:೩೦ರ ವೇಳೆಗೆ ಆರೀಫ್ ಎಂಬವರ ಜೊತೆ ಆಂಬುಲೆನ್ಸ್ ಚಾಲಕ ನೌಷದ್ ಸ್ಥಳಕ್ಕೆ ಬಂದು ಕ್ಷುಲ್ಲಕ ವಿಚಾರದಲ್ಲಿ ಜಗಳವಾಡಿ ಕೈಯಿಂದ ಹಲ್ಲೆ ನಡೆಸಿದಾಗ ದಯಾನಂದರವರು ನೌಷದ್‌ಗೆ ಬುದ್ಧಿವಾದ ಹೇಳಿದ್ದರು. ಆ ವೇಳೆ ದಯಾನಂದರವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಬಳಿಕ ಜಾತಿ ನಿಂದನೆ ಮಾಡಿ ನೌಷಾದ್ ಜೀವಬೆದರಿಕೆ ಒಡ್ಡಿದ್ದಾನೆ. ಇದನ್ನು ದಯಾನಂದ ಅವರು ಅಕ್ಷೇಪಿಸಿದಾಗ ಕೋಪಗೊಂಡ ನೌಷದ್ ಕೈಯಲ್ಲಿದ್ದ ಚಾಕುವಿನಿಂದ ಕೊಲೆ ಮಾಡುವ ಉzಶದಿಂದ ಚುಚ್ಚಲು ಬಂದಾಗ ಎಡ ಕೈಯಿಂದ ತಡೆಯುವಾಗ ದಯಾನಂದರವರ ಎಡಕೈಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಬಳಿಕ ಸ್ನೇಹಿತರು ಸೇರಿ ದಯಾನಂದ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಯುವತಿಗೆ ಮೆಸೇಜ್ ಮತ್ತು ಜಾತಿ ಬಗ್ಗೆ ತಮಾಷೆ ಮಾಡಿದ್ದ ನೌಷದ್: ಸುಮಾರು ೩ ವರ್ಷದಿಂದ ತನ್ನ ಸಮುದಾಯದ ಯುವತಿಗೆ ನೌಷಾದ್ ಮೆಸೇಜ್ ಮಾಡುತ್ತಿದ್ದ. ಈ ವಿಚಾರದಲ್ಲಿ ತಾನು ನೌಷದ್‌ಗೆ ಬುದ್ಧಿವಾದ ಹೇಳಿದ್ದೆ. ಇತ್ತೀಚೆಗೆ ನನ್ನ ಜಾತಿಯ ಬಗ್ಗೆ ನೌಷಾದ್ ತಮಾಷೆ ಮಾಡಿದ್ದ. ಅಲ್ಲದೆ ಶಾಲಾ ವಾರ್ಷಿಕೋತ್ಸವದ ವೇಳೆ ನೌಷಾದ್ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಡಿ.೨೨ರಂದು ದಯಾನಂದ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಠಾಣಾ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ ಮತ್ತು ಸಿಬಂದಿಗಳು ಆಂಬುಲೆನ್ಸ್ ಚಾಲಕ ನೌಷದ್‌ನನ್ನು ಡಿ.೨೩ರಂದು ಸಂಜೆ ಮಂಗಳೂರಲ್ಲಿ ಬಂಧಿಸಿ ಮಂಗಳೂರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರು ಆರೋಪಿ ನೌಷಾದ್‌ಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ. ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಸುಬ್ಬಪುರಮಠ ನೇತೃತ್ವದಲ್ಲಿ ಸಬ್ ಇನ್ಸ್‌ಪೆಕ್ಟರ್ ಆನಂದ್ ಎಮ್ ಮತ್ತು ಸಿಬ್ಬಂದಿಗಳು ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಆಸ್ಪತ್ರೆಗೆ ದಾಖಲಾಗಿದ್ದ ನೌಷಾದ್: ಘಟನೆ ನಡೆದ ಬಳಿಕ ತನ್ನ ಮೇಲೆ ಸುಮಾರು ೮ ಮಂದಿ ಹಣದ ವಿಚಾರವಾಗಿ ಹಲ್ಲೆ ಮಾಡಿ ಆಂಬುಲೆನ್ಸ್ ವಾಹನಕ್ಕೆ ಕಲ್ಲು ಹಾಕಿರುವುದಾಗಿ ಹೇಳಿ ಬಂಗೇರ ಬ್ರಿಗೇಡ್ ಇಂದಬೆಟ್ಟು ವಾಟ್ಸಾಪ್ ಗ್ರೂಪ್‌ನಲ್ಲಿ ಸಾರ್ವಜನಿಕರಿಗೆ ವಾಯ್ಸ್ ಮೆಸೇಜ್ ಮೂಲಕ ಸುದ್ದಿ ಹಬ್ಬಿಸಿದ್ದ ನೌಷಾದ್ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿ ಬಳಿಕ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲದೆ ನೌಷದ್ ಬೆಳ್ತಂಗಡಿ ಠಾಣಾ ಪೊಲೀಸರಿಗೆ ದೂರು ನೀಡಿದ್ದ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here