ಶಿಕ್ಷಣ ಲೋಕದ ಧ್ರುವತಾರೆ ಪ್ರೊ. ಪ್ರಭಾಕರ್ ಅಸ್ತಂಗತ

0

ಉಜಿರೆ: ಹಿರಿಯ ಶಿಕ್ಷಣ ತಜ್ಞ ಹಾಗೂ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಪ್ರೊ. ಎಸ್. ಪ್ರಭಾಕರ್ (೯೦) ಡಿ.೨೪ರಂದು ಉಜಿರೆಯ ಸ್ವಗೃಹದಲ್ಲಿ ನಿಧನರಾದರು. ಮೃತರು ಲಂಡನ್‌ನಲ್ಲಿರುವ ಮಗಳು ಶರ್ಮಿಳಾ ಮತ್ತು ಅಳಿಯ ಡಾ. ನರೇಂದ್ರರವರನ್ನು ಅಗಲಿದ್ದಾರೆ.

ಡಿ.೨೫ರಂದು ಸಂಜೆ ಆರು ಗಂಟೆಗೆ ಅವರ ಅಂತ್ಯಸಂಸ್ಕಾರ ಉಜಿರೆಯಲ್ಲಿ ನಡೆಸಲಾಗುವುದು. ಮೃತರ ಸ್ಮರಣಾರ್ಥ ಬುಧವಾರ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿತ್ತು. ಕೀರ್ತಿಶೇಷ ರತ್ನವರ್ಮ ಹೆಗ್ಗಡೆಯವರು ೧೯೬೬ ರಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜು ಪ್ರಾರಂಭಿಸಿದಾಗ ಅವರ ಅಪೇಕ್ಷೆಯಂತೆ ಪ್ರಭಾಕರ್ ಸರ್ಕಾರಿ ಕಾಲೇಜಿನ ಹುದ್ದೆಗೆ ರಾಜಿನಾಮೆ ನೀಡಿ ಉಜಿರೆ ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ ಸೇರಿದರು.

೨೭ ವರ್ಷಗಳ ಸೇವೆ ಬಳಿಕ ೧೯೯೩ರಲ್ಲಿ ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತರಾದರು. ಪ್ರಾಂಶುಪಾಲರಾಗಿರುವಾಗಲೇ ಎಸ್.ಡಿ.ಎಂ. ಎಜ್ಯುಕೇಶನಲ್ ಟ್ರಸ್ಟ್ ಮತ್ತು ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತರಾದ ಬಳಿಕ ಪೂರ್ಣಕಾಲಿಕ ಕಾರ್ಯದರ್ಶಿಯಾಗಿ ಸೇವೆ ನೀಡಿದ್ದಾರೆ. ಮಂಜುವಾಣಿ ಮಾಸಪತ್ರಿಕೆಯ ಸಂಪಾದಕರಾಗಿ ಹಾಗೂ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾಗಿಯೂ ಅವರು ಸೇವೆ ಮಾಡಿದ್ದಾರೆ.

ರತ್ನಮಾನಸ ವಿದ್ಯಾರ್ಥಿ ನಿಲಯ, ರುಡ್‌ಸೆಟ್ ಸಂಸ್ಥೆ, ಮಂಗಳೂರಿನಲ್ಲಿ ಕಾನೂನು ಕಾಲೇಜು, ಉಡುಪಿಯಲ್ಲಿ ಆಯುರ್ವೇದ ಕಾಲೇಜಿನ ಆಡಳಿತ, ಧಾರವಾಡದಲ್ಲಿ ಜನತಾ ಶಿಕ್ಷಣ ಸಮಿತಿ ಆಡಳಿತ ವಹಿಸಿಕೊಳ್ಳುವಾಗ ಪ್ರೊ. ಎಸ್. ಪ್ರಭಾಕರ್ ವಿಶೇಷ ಆಸಕ್ತಿ ಮತ್ತು ಶ್ರಮವಹಿಸಿದ್ದಾರೆ. ಧರ್ಮಸ್ಥಳದಲ್ಲಿ ಪ್ರತಿವರ್ಷ ಲಕ್ಷದೀಪೋತ್ಸವ ಸಂದರ್ಭದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳ ಕಾರ್ಯದರ್ಶಿಯಾಗಿಯೂ ವಿಶೇಷ ಸೇವೆ ಸಲ್ಲಿಸಿದ್ದಾರೆ.

ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ವಿಶೇಷ ಭಾಷಾಪ್ರಭುತ್ವ ಹೊಂದಿದ್ದ ಅವರು ಉತ್ತಮ ವಾಗ್ಮಿಯಾಗಿಯೂ, ಶಿಸ್ತಿನ ಸಿಪಾಯಿಯಾಗಿ, ದಕ್ಷ ಆಡಳಿತದಾರರಾಗಿ, ಆದರ್ಶ ಅಧ್ಯಾಪಕರಾಗಿ ಚಿರಪರಿಚಿತರಾಗಿದ್ದರು. ಅವರು ಜೈನ ಧರ್ಮದ ವೃತ-ನಿಯಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಹೃದಯಶ್ರೀಮಂತಿಕೆಯೊಂದಿಗೆ ತಮ್ಮ ಇತಿ-ಮಿತಿಯೊಳಗೆ ಎಲ್ಲರಿಗೂ ಶಿಕ್ಷಣ ಹಾಗೂ ಉದ್ಯೋಗ ಪಡೆಯಲು ಸಹಕರಿಸುತ್ತಿದ್ದರು. ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಪ್ರೊ. ಪ್ರಭಾಕರ್ ನಿಧನಕ್ಕೆ ಗಾಢ ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಂತಾಪ: ಧರ್ಮಸ್ಥಳದ ವತಿಯಿಂದ ನಾವು ಹೊಸ ಸಂಸ್ಥೆಗಳನ್ನು ಪ್ರಾರಂಭಿಸುವಾಗ, ಇತರ ಸಂಸ್ಥೆಗಳ ಆಡಳಿತವನ್ನು ವಹಿಸಿಕೊಳ್ಳುವಾಗ, ಶಿಕ್ಷಣತಜ್ಞರೂ, ಆಡಳಿತ ಪರಿಣತರೂ ಆದ ಪ್ರೊ. ಎಸ್. ಪ್ರಭಾಕರ್ ಅವರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯಪ್ರವೃತ್ತರಾಗುತ್ತಿದ್ದೆವು. ಧಾರವಾಡದ ಜನತಾ ಶಿಕ್ಷಣ ಸಮಿತಿಯ ಆಡಳಿತ ವಹಿಸಿಕೊಳ್ಳುವಾಗ, ಉಡುಪಿ ಆಯುರ್ವೇದ ಕಾಲೇಜಿನ ಆಡಳಿತ ವಹಿಸುವಾಗ, ಮಂಗಳೂರಿನಲ್ಲಿ ಕಾನೂನು ಕಾಲೇಜು ಪ್ರಾರಂಭ, ಮೈಸೂರಿನಲ್ಲಿ ಎಸ್.ಡಿ.ಎಂ. ಐ.ಎಂ.ಡಿ. ಪ್ರಾರಂಭಿಸುವಾಗ, ರುಡ್‌ಸೆಟ್ ಸಂಸ್ಥೆಗಳ ಪ್ರಾರಂಭ, ಎಂ.ಎಂ.ಕೆ. ಮಹಿಳಾ ಕಾಲೇಜು ಆಡಳಿತ ವಹಿಸುವಾಗ ಪ್ರೊ. ಪ್ರಭಕರ್‌ರೊಂದಿಗೆ ಸಮಾಲೋಚನೆ ನಡೆಸಿರುವುದಲ್ಲದೆ, ಅನೇಕ ಬಾರಿ ನಾವು ಜೊತೆಯಾಗಿ ಧಾರವಾಡ, ಮೈಸೂರು, ಉಡುಪಿಗೆ ಹೋಗಿ ಪರಿಶೀಲನೆ ನಡೆಸಿ, ವಿಚಾರ, ವಿಮರ್ಶೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದ್ದೆವು.

ನಮ್ಮ ಸಂಸ್ಥೆಗಳಿಗೆ ಅರ್ಹ ಪ್ರಾಂಶುಪಾಲರು, ನಿರ್ದೇಶಕರು, ಉಪನ್ಯಾಸಕರ ಆಯ್ಕೆ ಮತ್ತು ನೇಮಕಾತಿಯಲ್ಲಿಯೂ ಪ್ರೊ. ಎಸ್. ಪ್ರಭಾಕರ್ ಸಹಕಾರ ನೀಡಿರುತ್ತಾರೆ. ಧರ್ಮಸ್ಥಳಕ್ಕೆ ಪ್ರಧಾನಿ ಇಂದಿರಾಗಾಂಧಿ, ರಾಷ್ಟ್ರಪತಿ ವಿ.ವಿ. ಗಿರಿ ಮೊದಲಾದ ಗಣ್ಯವ್ಯಕ್ತಿಗಳ ಭೇಟಿ ಸಂದರ್ಭದಲ್ಲಿ ಕಾರ್ಯಕ್ರಮ ಸಂಯೋಜನೆಯಲ್ಲಿ, ಲಕ್ಷದೀಪೋತ್ಸವ ಸಂದರ್ಭ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನಗಳಿಗೆ ಉದ್ಘಾಟಕರು, ಅಧ್ಯಕ್ಷರು ಹಾಗೂ ಸಾಹಿತಿಗಳು ಮತ್ತು ಕಲಾವಿದರನ್ನು ಆಹ್ವಾನಿಸುವಲ್ಲಿಯೂ ಅವರು ವಿಶೇಷ ಪಾತ್ರವಹಿಸಿದ್ದಾರೆ. ಶಿಸ್ತುಬದ್ಧವಾಗಿ ಎಲ್ಲಾ ಕಾರ್ಯಕ್ರಮಗಳ ಸಂಘಟನೆಯಲ್ಲಿ ಅವರು ಸಹಕರಿಸುತ್ತಿದ್ದರು. ಅವರ ನಿಧನ ನಮ್ಮ ಸಂಸ್ಥೆಗಳಿಗೆ ತುಂಬಲಾರದ ನಷ್ಟವೇ ಸರಿ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಎಂದು ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ ಲೋಕದ ದಾರ್ಶನಿಕ ಅಜರಾಮರ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಿದ್ಯಾದಾನಕ್ಕೆ ಪ್ರಾಶಸ್ತ್ಯ. ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಸಿದ್ದವನ ಗುರುಕುಲ ಪ್ರಾರಂಭಗೊಂಡಿದ್ದರೆ, ರತ್ನವರ್ಮ ಹೆಗ್ಗಡೆಯವರು ೧೯೬೬ರಲ್ಲಿ ಉಜಿರೆಯಲ್ಲಿ ಪದವಿ ಶಿಕ್ಷಣವನ್ನು ಪ್ರಾರಂಭಿಸಿ, ಗ್ರಾಮೀಣ ಮಕ್ಕಳ ಭವಿ?ಕ್ಕೆ ಭದ್ರಬುನಾದಿ ಹಾಕಿದರು. ಡಾ. ವೀರೇಂದ್ರ ಹೆಗ್ಗಡೆಯವರು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ರೀತಿಯ ಪ್ರಯೋಗಗಳನ್ನು ಮಾಡಿದರು. ಹೆಗ್ಗಡೆಯವರ ಈ ಶಿಕ್ಷಣ ಪ್ರೇಮಕ್ಕೆ ನೀರೆರೆದು ಪೋಷಣೆ ಮಾಡಿದವರು ಪ್ರೊಫೆಸರ್ ಪ್ರಭಾಕರ್‌ರವರು.

ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಪ್ರೊಫೆಸರ್ ಸೂರಾಲು ಪ್ರಭಾಕರ್ ಖ್ಯಾತಿವೆತ್ತ ಹೆಸರು. ಪದವಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಭಾಕರ್‌ರವರ ಹೆಸರನ್ನು ಗೌರವಾದರಗಳಿಂದ ಉಲ್ಲೇಖಿಸಲಾಗುತ್ತದೆ. ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಚಿನ್ನದ ಪ್ರಶಸ್ತಿ ಪಡೆದಿದ್ದ ಅವರು, ನಗರ ಪ್ರದೇಶದಲ್ಲಿಯೇ ಮುಂದುವರಿದಿದ್ದರೆ ಮತ್ತು ಡಾಕ್ಟರೇಟ್ ಪದವಿ ಪಡಕೊಂಡಿದ್ದರೆ, ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹುದ್ದೆ ಗಳಿಸಲು ಸಾಧ್ಯವಿತ್ತು. ತಮ್ಮ ವೃತ್ತಿಪರ ಜೀವನವನ್ನು ಬೆಂಗಳೂರಿನ ಸರಕಾರಿ ಮಹಾರಾಣಿ ಕಾಲೇಜಿನಲ್ಲಿ ಪ್ರಾರಂಭಿಸಿದ್ದ ಪ್ರೊ. ಪ್ರಭಾಕರ್‌ರಿಗೆ ಪಾಂಡಿತ್ಯ, ಗತ್ತು, ಗಾಂಭೀಯ, ಆಕಷಕ ವ್ಯಕ್ತಿತ್ವ, ಮಾತುಗಾರಿಕೆ ಎಲ್ಲವೂ ಇತ್ತು. ಆದರೆ ಅವರು ತನ್ನ ಹತ್ತಿರದ ಸಂಬಂಧಿಗಳಾದ ಶ್ರೀ ರತ್ನವರ್ಮ ಹೆಗ್ಗಡೆಯವರು ಹಾಕಿದ ಗೆರೆಯನ್ನು ದಾಟದೇ ಉಜಿರೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಪದವಿ ಕಾಲೇಜಿಗೆ ಪ್ರಾಚಾರ್ಯರಾದರು.
ನಗರದ ನೌಕರಿಯನ್ನು ಬಿಟ್ಟು ಧರ್ಮಸ್ಥಳಕ್ಕೆ ಬಂದು ಮನೆ ಮಾಡಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್.ಡಿ.ಎಂ.) ಶಿಕ್ಷಣ ಟ್ರಸ್ಟ್‌ಗೆ ಮತ್ತು ನಂತರದಲ್ಲಿ ಪ್ರಾರಂಭಗೊಂಡ ಎಸ್.ಡಿ.ಎಂ. ಸೊಸೈಟಿಗೆ ಜೀವ ತುಂಬಿದರು. ವೀರೇಂದ್ರ ಹೆಗ್ಗಡೆಯವರಿಗಿಂತ ಹದಿಮೂರು ವಷ ಹಿರಿಯರಾಗಿ, ಕೆಲ ಕಾಲ ಅವರಿಗೆ ಪೋಷಕರಾಗಿ, ಅವರ ಮಾರ್ಗದರ್ಶಿಯಾಗಿ, ನಿಕಟವರ್ತಿಯಾಗಿ ಕೊನೆಯಲ್ಲಿ ಹೆಗ್ಗಡೆಯವರ ಅಭಿಮಾನಿಯಾಗಿ ೫೦ ವರ್ಷಗಳ ಕಾಲ ಎಸ್.ಡಿ.ಎಂ. ಸಂಸ್ಥೆಗಳನ್ನು ಪೋಷಿಸಿದರು. ಧರ್ಮಸ್ಥಳದಲ್ಲಿ ಕೆಲಸ ಮಾಡಿದ್ದರಿಂದ ಹೊರಜಗತ್ತಿನಲ್ಲಿ ಅವರ ಸಂಪರ್ಕ ಬಹಳಷ್ಟು ಹೆಚ್ಚಿತು. ವಿವಿಧ ಕ್ಷೇತ್ರಗಳ ದಿಗ್ಗಜರನ್ನು ಅವರು ಗೆಳೆಯರನ್ನಾಗಿ ಸಂಪಾದಿಸಿದರು.

ಹುಟ್ಟಿದ್ದು ಉಡುಪಿಯ ಸೂರಾಲಿನಲ್ಲಿ: ಪ್ರೊ. ಪ್ರಭಾಕರ್‌ರವರ ತಂದೆ ಪದ್ಮನಾಭಯ್ಯ, ಸೂರಾಲು ಅರಮನೆಯ ನಾಗೇಂದ್ರ ತೋಳಾರವರ ಅಳಿಯ. ಇವರು ಅಳಿಯಕಟ್ಟಿನವರು. ಇವರ ತಾಯಿ ಪು?ವತಿಯಮ್ಮ. ಪ್ರೊ. ಪ್ರಭಾಕರ್‌ರು ೨೮ನೇ ಜೂನ್ ೧೯೩೫ರಂದು ಜನಿಸಿದರು. ಅವರು ತಮ್ಮ ೨೨ನೇ ವಯಸ್ಸಿನವರೆಗೂ ಸೂರಾಲು ಅರಮನೆಯಲ್ಲಿಯೇ ಬೆಳೆದರು. ಅಕ್ಕ ಲೀಲಾವತಿಯವರು ಸೂರಾಲು ಅರಮನೆಯಲ್ಲಿಯೇ ಚಂದ್ರಶೇಖರಯ್ಯನವರನ್ನು ವಿವಾಹವಾದರು. ಲೀಲಾವತಿಯವರ ೫ ಮಂದಿ ಮಕ್ಕಳಲ್ಲಿ ೩ ಹುಡಗರು ಮತ್ತು ೨ ಹುಡುಗಿಯರು. ಪ್ರಭಾಕರರವರ ಪ್ರಾಥಮಿಕ ವಿದ್ಯಾಭ್ಯಾಸ ಸೂರಾಲು ಅರಮನೆಯವರೇ ನಡೆಸುತ್ತಿದ್ದ ಶಾಲೆಯಲ್ಲಿ ೨ ವರ್ಷ ನಡೆಯಿತು. ಆಮೇಲೆ ೬ ತಿಂಗಳು ಮಾವನ ಮನೆಯಲ್ಲಿ, ಮಂಗಳೂರಿನಲ್ಲಿ ವಿದ್ಯಾಭ್ಯಾಸ. ಆ ಸಮಯದಲ್ಲಿ ೨ನೇ ಮಹಾಯುದ್ಧ ಆರಂಭವಾಗಿತ್ತು. ಬಾಂಬ್ ಬೆದರಿಕೆ ಮಂಗಳೂರನ್ನು ತಲುಪಿತ್ತು. ಆಗ ವಿಮಾನ ಹೋಗುವಾಗ ಎಲ್ಲರೂ ಕಣಿಯಲ್ಲಿ ಮಲಗಿ ಎಂದು ಟೀಚರ್ ಹೇಳಿ, ಕಣಿಯಲ್ಲಿ ಮಲಗಿದ್ದನ್ನು ಪ್ರಭಾಕರರವರು ನೆನಪಿಸಿಕೊಳ್ಳುತ್ತಿದ್ದರು. ಆರು ತಿಂಗಳ ಬಳಿಕ ಪ್ರಭಾಕರ್‌ರು ಪುನಃ ಸೂರಾಲಿಗೆ ಬಂದರು. ಅಲ್ಲಿಂದ ಎರ್ಮಾಳಿಗೆ ಹೋದರು.

ಓದಿನಲ್ಲಿ ಚುರುಕು: ಹಿಂದಿನ ಹೆಗ್ಗಡೆಯವರ (ರತ್ನವರ್ಮ ಹೆಗ್ಗಡೆ) ತಾಯಿ ಕಮಲಾವತಿಯಮ್ಮ ಎರ್ಮಾಳಿನವರು. ಪ್ರೊ. ಪ್ರಭಾಕರ್‌ರವರು ರತ್ನಮ್ಮ ಹೆಗ್ಗಡೆಯವರ ಚಿಕ್ಕಮ್ಮನ ಮಗ, ಹಾಗೆ ರತ್ನಮ್ಮನವರ ಸಹೋದರ. ವೀರೇಂದ್ರ ಹೆಗ್ಗಡೆಯವರಿಗೆ ಸೋದರಮಾವ. ಹೆಗ್ಗಡೆಯವರ ತಾಯಿ ರತ್ನಮ್ಮ ಹೆಗ್ಗಡೆ ಎರ್ಮಾಳಿನ ನಾಭಿರಾಜ ಅರಸರ ಮಗಳು. ನಾಭಿರಾಜ ಅರಸರಿಗೆ ಸೂರಾಲಿನಲ್ಲಿ ಆಸ್ತಿ ಇತ್ತು. ಸೂರಾಲಿಗೆ ಬಂದರೆ ಇವರ ಮನೆಯಲ್ಲೇ ಉಳಿಯುತ್ತಿದ್ದರು. ಪ್ರಭಾಕರರ ತಾಯಿಯ ಮೇಲೆ ಅವರಿಗೆ ತುಂಬ ಅಕ್ಕರೆ, ಪ್ರೀತಿ. ನಂತರ ಮೂಡಬಿದ್ರಿಯ ಬೆಟ್ಕೇರಿಯಲ್ಲಿ ಮಾವನ ಮನೆಯಲ್ಲಿ ಉಳಿದುಕೊಂಡು ಮೂಡಬಿದ್ರಿ ಜೈನ ಹೈಸ್ಕೂಲಿನಲ್ಲಿ ಓದಿದರು. ಇಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದ ನಂತರ ಪಿಯುಸಿಯನ್ನು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಓದಿದರು. ಓದುವುದರಲ್ಲಿ ಪ್ರಭಾಕರರವರು ಚುರುಕಾಗಿದ್ದರು. ಆ ಸಮಯದಲ್ಲಿ ಇವರ ತಂದೆಯವರು ತೀರಿಕೊಂಡದ್ದರಿಂದ ಒಂದು ವಷ ವಿದ್ಯಾಭ್ಯಾಸಕ್ಕೆ ತಡೆಯಾದರೂ ಮುಂದಕ್ಕೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ.(ರಾಜ್ಯ ಶಾಸ್ತ್ರ) ಪದವಿ ಶಿಕ್ಷಣವನ್ನು ಪಡೆದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ೧೯೬೧ರಲ್ಲಿ ಮಾನಸ ಗಂಗೋತ್ರಿಯ ಮೊದಲ ಬ್ಯಾಚ್‌ನಲ್ಲಿ ಎಂ.ಎ. (ರಾಜ್ಯಶಾಸ್ತ್ರ) ಶಿಕ್ಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ್‍ಯಾಂಕ್ ಗಳಿಸಿದರು.

ಮೈಸೂರಿನ ಜೈನ್ ಬೋಡಿಂಗ್‌ನಲ್ಲಿ ಉಳಿದುಕೊಂಡಿದ್ದರು. ಅಲ್ಲಿಯ ಬೋಡಿಂಗಿನಲ್ಲಿ ಮಧ್ಯದಲ್ಲಿ ಬಸದಿ ಇತ್ತು. ಸುತ್ತಲು ರೂಮುಗಳಿದ್ದವು. ಜೈನ ಬಾಂಧವರು ಯಾರು ಬಂದರೂ ಅಲ್ಲಿ ಉಚಿತವಾಗಿ ಉಳಕೊಳ್ಳಬಹುದಿತ್ತು.

ಇಂಗ್ಲಿಷ್‌ನಲ್ಲಿ ಪ್ರಾವೀಣ್ಯತೆ: ಪ್ರಭಾಕರರು ರಾಜ್ಯಶಾಸ್ತ್ರದಲ್ಲಿ ಎಂ.ಎ. (ಸ್ನಾತಕೋತ್ತರ) ಮಾಡಿದರೂ ಇಂಗ್ಲೀಷಿನಲ್ಲಿ ಸಾಕಷ್ಟು ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಯೌವ್ವನದಲ್ಲಿ ಪ್ರಭಾಕರದ್ದು ಆಕಷಕ ವ್ಯಕ್ತಿತ್ವ. ವಿದ್ವಾಂಸರಿಗೆ ತಕ್ಕಂತೆ ವೇಷಭೂಷಣ, ಒಪ್ಪ ಓರಣವಾಗಿ ಬಾಚಿದ ತಲೆಕೂದಲು, ಸೊಗಸಾದ ಮಾತುಗಾರಿಕೆ. ಆ ಸಮಯದಲ್ಲಿ ರತ್ನವರ್ಮರವರು ಎಂ.ಎಲ್.ಎ. ಆಗಿದ್ದು, ಮಕ್ಕಳ ಶಿಕ್ಷಣಕ್ಕಾಗಿ ಬೆಂಗಳೂರಿನಲ್ಲಿ ಮನೆ ಮಾಡಿದ್ದರು. ನೌಕರಿ ಹುಡುಕಿಕೊಂಡು ಬೆಂಗಳೂರಿಗೆ ಹೋದ ಪ್ರಭಾಕರ್‌ರವರು ಹೆಗ್ಗಡೆಯವರ ಮನೆಯಲ್ಲಿಯೇ ಉಳಿದು ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಪ್ರಾಧ್ಯಾಪಕ ಕೆಲಸ ಪಡಕೊಂಡರು. ಬೆಂಗಳೂರಿನಲ್ಲಿ ಓದುತ್ತಿದ್ದ ಹೆಗ್ಗಡೆಯವರ ಮಕ್ಕಳಿಗೆ ಪೋಷಕರೂ ಆದರು.

ವೀರೇಂದ್ರ ಹೆಗ್ಗಡೆಯವರದ್ದು ಬಹಳ ಸೌಮ್ಯ ಸ್ವಭಾವ. ಅವರು ವಿದ್ಯಾರ್ಥಿಯಾಗಿ ಬೆಂಗಳೂರಿನಲ್ಲಿದ್ದಾಗ ನಾಲ್ಕೈದು ಮಂದಿ ಕೆಲಸಕ್ಕಿದ್ದರು. ಹೆಗ್ಗಡೆಯವರು ಯಾವತ್ತೂ ಯಾರಿಗೂ ಗದರಿದವರೇ ಅಲ್ಲ. ಎಲ್ಲರನ್ನೂ ಪ್ರೀತಿಯಿಂದಲೇ ಮಾತನಾಡಿಸುತ್ತಾರೆ. ಸುರೇಂದ್ರ ಕುಮಾರ್ ಮತ್ತು ಹಷೇಂದ್ರ ಕುಮಾರ್ ಆಗ ಚಿಕ್ಕವರಾಗಿದ್ದರು. ಒಂದರ್ಥದಲ್ಲಿ ಪ್ರಭಾಕರರವರು ಅವರ ಪಾಲಕರಾಗಿದ್ದರು. ಸುರೇಂದ್ರ ಕುಮಾರ್ ಮಾತುಗಾರ, ಅವರು ಎಲ್ಲಿಯೂ ಬದುಕಿಯಾರು ಎನ್ನುವುದು ಹೆಗ್ಗಡೆಯವರಿಗೆ ಗೊತ್ತಿತ್ತು. ಆದರೆ ಹಷೇಂದ್ರ ಕುಮಾರ್‌ಗೆ ಮುಂಗೋಪ, ಅವರ ಬಗ್ಗೆ ಜಾಗ್ರತೆ ಮಾಡುವಂತೆ ಹೆಗ್ಗಡೆಯವರು ಸೂಚಿಸುತ್ತಿದ್ದರು. ಹೀಗೆ ೧೯೬೧ರಿಂದ ಇಲ್ಲಿಯವರೆಗೆ ಪ್ರಭಾಕರರವರು ವೀರೇಂದ್ರ ಹೆಗ್ಗಡೆಯವರ ಜೊತೆಯಲ್ಲಿಯೇ ಇದ್ದರು. ಮಹಾರಾಣಿ ಕಾಲೇಜಿನಲ್ಲಿ ಎರಡು ವಷ ಸೇವೆ ಸಲ್ಲಿಸಿದ ನಂತರ ಮಂಡ್ಯಕ್ಕೆ ವರ್ಗಾವಣೆಯಾಯಿತು. ಅಲ್ಲಿಯೂ ಎರಡು ವಷ ಕೆಲಸ ಮಾಡಿದ್ದರು.

೧೯೬೬ರಲ್ಲಿ ಪ್ರಾಚಾರ್ಯ ಹುದ್ದೆ: ೧೯೬೬ರಲ್ಲಿ ರತ್ನವರ್ಮ ಹೆಗ್ಗಡೆಯವರು ಉಜಿರೆಯಲ್ಲಿ ಪದವಿ ಶಿಕ್ಷಣ ಪ್ರಾರಂಭಿಸಿದಾಗ ರತ್ನವರ್ಮ ಹೆಗ್ಗಡೆಯವರ ಸೂಚನೆಯಂತೆ ಪ್ರಭಾಕರರವರು ಕಾಲೇಜಿನ ಪ್ರಾಚಾರ್ಯರಾಗಿ ಸೇರಿದರು. ಪ್ರಭಾಕರರು ಉಜಿರೆ ಕಾಲೇಜಿಗೆ ಪ್ರಾಚಾರ್ಯರಾಗಿ ಬಂದಾಗ ಕಾಲೇಜು ಕಟ್ಟಡವಿರಲಿಲ್ಲ. ಸಿದ್ಧವನದಲ್ಲಿ ತರಗತಿಗಳನ್ನು ಮಾಡಲಾಗುತ್ತಿತ್ತು. ಪ್ರಭಾಕರರವರು ಧರ್ಮಸ್ಥಳದಲ್ಲಿಯೇ ವಾಸ್ತವ್ಯವಿದ್ದು, ಉಜಿರೆಗೆ ಬಂದು ಹೋಗುತ್ತಿದ್ದು ಮೂರು ವಷಗಳ ಬಳಿಕ ಉಜಿರೆಗೆ ವಾಸ್ತವ್ಯವನ್ನು ಬದಲಾಯಿಸಿದರು. ಇವರ ಈಗಿನ ಮನೆಯ ಪಕ್ಕದ ಕಟ್ಟಡವು ಹಿಂದೆ ಧರ್ಮಸ್ಥಳಕ್ಕೆ ಹೋಗಲು ಯಾವುದೇ ಸೌಕರ್ಯಗಳಿಲ್ಲದಿದ್ದಾಗ, ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಕಟ್ಟಿಸಿದ ಛತ್ರವಾಗಿತ್ತು. ಘಟ್ಟದಿಂದ ಬಂದವರಿಗೆ ಧರ್ಮಸ್ಥಳಕ್ಕೆ ಹೋಗಲು ಉಜಿರೆ ಒಂದು ದ್ವಾರದ ಹಾಗೆ. ಮುಂಬಯಿ ಕಡೆಗೆ ಹೋಗಬೇಕಾದರೆ ಕಡೂರಿಗೆ ಹೋಗಿ ಅಲ್ಲಿಂದ ರೈಲಿನಲ್ಲಿ ಪ್ರಯಾಣಿಸಬೇಕಿತ್ತು. ಹಾಗಾಗಿ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಈ ಛತ್ರವನ್ನು ಯಾತ್ರಿಕರಿಗಾಗಿ ಕಟ್ಟಿಸಲಾಯಿತು. ಈ ಛತ್ರದಲ್ಲಿ ೬-೭ ರೂಮುಗಳಿದ್ದವು. ರತ್ನವರ್ಮ ಹೆಗ್ಗಡೆಯವರು ನೇತ್ರಾವತಿ ನದಿಗೆ ಸೇತುವೆ ಕಟ್ಟಿಸಿದ ನಂತರ ಈ ಛತ್ರದ ಉಪಯೋಗ ಕಡಿಮೆಯಾಯಿತು. ನಂತರದಲ್ಲಿ ಅದೇ ಛತ್ರವನ್ನು ರಿಪೇರಿ ಮಾಡಿಸಿಕೊಂಡು ಪ್ರಭಾರಕರವರು ಮನೆ ಮಾಡಿಕೊಂಡರು.

೧ ವರ್ಷದಲ್ಲಿ ಕಾಲೇಜು ಕಟ್ಟಡ ಪೂರ್ಣ: ಉಜಿರೆ ಕಾಲೇಜು ವೀರೇಂದ್ರ ಹೆಗ್ಗಡೆಯವರು ಕಟ್ಟಿಸಿದ ಪ್ರಥಮ ಕಟ್ಟಡ. ಹೆಗ್ಗಡೆಯವರು ಅಲ್ಲಿಗೆ ಬಂದು ಸ್ವತಃ ಅವರೇ ಕುಳಿತುಕೊಂಡು ಅದರ ಮೇಲ್ವಿಚಾರಣೆಯನ್ನು ನೋಡುತ್ತಿದ್ದರು. ಅವರಿಗೆ ಕಟ್ಟಡ ನಿರ್ಮಾಣದಲ್ಲಿ ಬಹಳ ಆಸಕ್ತಿಯಿತ್ತು. ಒಂದೇ ವಷದಲ್ಲಿ ಉಜಿರೆ ಕಾಲೇಜು ಕಟ್ಟಡವನ್ನು ನಿರ್ಮಿಸಿದರು. ಇದರ ಶಂಕುಸ್ಥಾಪನೆಗೆ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಕರೆಸಿದ್ದರು. ಅವರು ಬಹಳ ಚೆನ್ನಾಗಿ ಆಶೀರ್ವಾದ ಮಾಡಿದ್ದರು. ಕಟ್ಟಡ ಕೆಲಸ ಒಂಭತ್ತು ತಿಂಗಳಲ್ಲೇ ಪೂರ್ಣಗೊಂಡಿತು. ಅದನ್ನು ಸ್ವಾಮೀಜಿಯವರೇ ಬಂದು ಉದ್ಘಾಟಿಸಬೇಕೆಂದು ತೀರ್ಮಾನಿಸಿದಂತೆ ಅವರ ಸಮಯ ಸಿಗಲು ತಡವಾದುದರಿಂದಾಗಿ ಎರಡು ತಿಂಗಳಿನಷ ಮುಂದಕ್ಕೆ ಹೋಯಿತು. ೧೯೬೯ರಲ್ಲಿ ಕಟ್ಟಡ ತಯಾರಾಯಿತು. ಅದೇ ವಷ ಪೆರಾಡಿ ಬೀಡಿನ ಹೇಮಾವತಿಯವರು ಬಂದು ಉಜಿರೆ ಕಾಲೇಜಿಗೆ ಸೇರಿದರು. ನೂತನ ಕಟ್ಟಡದ ಪ್ರಥಮ ಬ್ಯಾಚಿನ ವಿದ್ಯಾರ್ಥಿ ಹೇಮಾವತಿಯವರು ಪ್ರಭಾಕರರ ಮನೆಯಲ್ಲಿಯೇ ವಾಸ್ತವ್ಯವಿದ್ದು ಪದವಿ ಮುಗಿಸಿದರು. ಮುಂದಕ್ಕೆ ಹೆಗ್ಗಡೆಯವರನ್ನು ವಿವಾಹವಾದರು.

ದೊಡ್ಡವರು ಬಂದಾಗ ಧರ್ಮಸ್ಥಳಕ್ಕೆ : ಕಾಲೇಜಿಗೆ ಬಂದ ಪ್ರಭಾಕರ್‌ರವರ ಆಂಗ್ಲ ಭಾಷಾ ಪಾಂಡಿತ್ಯದಿಂದ ಧರ್ಮಸ್ಥಳದಲ್ಲಿ ಗಣ್ಯವ್ಯಕ್ತಿಗಳ ಆರೈಕೆಗೆ ಸುಲಭವಾಯಿತು. ಭಾಸ್ಕರನ್ ಶೇಷಾಚಾರ್ಯರನ್ನು ಮತ್ತು ಉಜಿರೆ ಶಾಲೆಯ ಹೆಡ್ಮಾಸ್ಟರ್ ಆಗಿದ್ದ ಭಿಡೆಯವರನ್ನು ಬಿಟ್ಟರೆ ಇಂಗ್ಲೀಷ್ ಬರುವವರು ಯಾರೂ ಇರಲಿಲ್ಲ. ಯಾರಾದರೂ ದೊಡ್ಡ ದೊಡ್ಡ ವ್ಯಕ್ತಿಗಳು ಬಂದರೆ ಪ್ರಭಾಕರ್‌ರವರು ಧರ್ಮಸ್ಥಳಕ್ಕೆ ಹೋಗುತ್ತಿದ್ದರು. ಕಾಲೇಜು ಪ್ರಾರಂಭದೊಂದಿಗೆ ರತ್ನವರ್ಮ ಹೆಗ್ಗಡೆಯವರು ಎಜ್ಯುಕೇಶನ್ ಟ್ರಸ್ಟ್‌ನ್ನು ಸ್ಥಾಪಿಸಿದರು. ಮೊದಲು ನರಸಿಂಹ ಭಟ್ ಎನ್ನುವವರು ಇದರ ಕಾರ್ಯದರ್ಶಿಯಾಗಿದ್ದರು. ೧೯೭೨ರ ನಂತರ ಪ್ರಭಾಕರ್‌ರವರು ಅದರ ಕಾರ್ಯದರ್ಶಿಯಾದರು. ೧೯೭೩ರಲ್ಲಿ ಮಂಗಳೂರಿನಲ್ಲಿ ಲಾ ಕಾಲೇಜು, ಉಡುಪಿಯಲ್ಲಿ ಆಯುರ್ವೇದ ಕಾಲೇಜನ್ನೂ ಸ್ಥಾಪಿಸುವಲ್ಲಿ ಇವರು ಶ್ರಮಿಸಿದರು. ಧಾರವಾಡದ ಜನತಾ ಶಿಕ್ಷಣವನ್ನು ವಹಿಸಿಕೊಳ್ಳುವ ಸೂಚನೆ ಬಂದಾಗ ಹೆಗ್ಗಡೆಯವರು ಪ್ರಭಾಕರರವರಲ್ಲಿ ಧಾರವಾಡಕ್ಕೆ ಹೋಗಿ ಅಲ್ಲಿಯ ಪರಿಸ್ಥಿತಿಯನ್ನು ನೋಡಿಕೊಂಡು ಬರುವಂತೆ ಸೂಚಿಸಿದರು.

ಅಲ್ಲಿನ ವ್ಯವಸ್ಥೆಗಳನ್ನು ಸರಿಪಡಿಸಲು ಕನಿಷ ಐದು ವಷಗಳಾದರೂ ಬೇಕು ಮತ್ತು ಸುಮಾರು ರೂ. ೨೫ ಲಕ್ಷ ಬೇಕಾದೀತು ಎಂದು ಪ್ರಭಾಕರ್‌ರವರು ವರದಿ ಮಾಡಿದರು. ಹೆಗ್ಗಡೆಯವರು ಏನೂ ಹೇಳದೆ ಒಪ್ಪಿಕೊಂಡರು. ಹೆಗ್ಗಡೆಯವರ ಬಳಿ ಬರುವ ಬಡವಿದ್ಯಾರ್ಥಿಗಳು ಮೊದಲು ಪದವಿ ಪರೀಕ್ಷೆಗೆ ಓದಲು ಸಹಾಯ ಕೇಳಿಕೊಂಡು ಬರುತ್ತಿದ್ದರು. ಅದಾದ ಮೇಲೆ ಸ್ನಾತಕೋತ್ತರ ಪದವಿ. ಅದೂ ಮುಗಿದ ನಂತರ ನೌಕರಿ ಕೊಡಿಸಿರಿ ಎಂಬ ಬೇಡಿಕೆ. ಪರಾವಲಂಬಿಗಳನ್ನೇ ಸೃಷ್ಟಿಸುವ ವಿದ್ಯಾರ್ಥಿಗಳ ಮನೋಭಾವ ಹಾಗೂ ಶಿಕ್ಷಣ ಪದ್ಧತಿ ಹೆಗ್ಗಡೆಯವರನ್ನು ಚಿಂತೆಗೀಡುಮಾಡಿತು. ನೀವು ಏನು ಕಲಿಸುತ್ತೀರಿ ಮಾಮ? ಹದಿನೇಳು ವಷ ಓದಿದ ನಂತರವೂ ಈ ಮಕ್ಕಳಿಗೆ ಧೈರ್ಯ ಬರುವುದಿಲ್ಲವಲ್ಲ? ಮಕ್ಕಳಲ್ಲಿ ಸ್ವಾವಲಂಬನೆ, ಆತ್ಮವಿಶ್ವಾಸ ಮೂಡಿಸಲೋಸುಗವೇ ನಾವು ರತ್ನಮಾನಸ, ರುಡ್‌ಸೆಟ್ ಸಂಸ್ಥೆಯನ್ನು ಪ್ರಾರಂಭಿಸಿದೆವು. ಸಿಂಡಿಕೇಟ್ ಬ್ಯಾಂಕಿನ ಕೆ.ಎಂ. ಉಡುಪರೂ ಈ ಪ್ರಯೋಗಗಳಲ್ಲಿ ತೊಡಗಿಕೊಂಡರು. ಇದರಿಂದ ಯುವ ಪೀಳಿಗೆಯಲ್ಲಿ ಸ್ವಉದ್ಯೋಗದ ಕಲ್ಪನೆಯನ್ನು ಮೂಡಿಸಲು ಸಾಧ್ಯವಾಯಿತು.

ರುಡ್‌ಸೆಟ್‌ನಲ್ಲಿ ಉಪನ್ಯಾಸ: ಪ್ರೊ. ಪ್ರಭಾಕರ್‌ರವರು ರುಡೆಸೆಟ್ ಸಂಸ್ಥೆಯವರು ನಡೆಸುತ್ತಿದ್ದ ಎಲ್ಲ ತರಬೇತಿಗಳಿಗೂ ತಪ್ಪದೇ ಉಪನ್ಯಾಸ ನೀಡಿ ಹುರಿದುಂಬಿಸುತ್ತಿದ್ದರು. ರತ್ನಮಾನಸದ ದೈನಂದಿನ ದೇಖರೇಖೆ ಇವರ ಸುಪರ್ದಿನಲ್ಲಿ ಆಗುತ್ತಿತ್ತು. ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಅನೇಕ ಕಾರ್ಯಕ್ರಮಗಳಿಗೆ ಉಜಿರೆ ಕಾಲೇಜಿನ, ಪ್ರೊ. ಪ್ರಭಾಕರ್‌ರವರ ಸಹಕಾರ ಇದೆ. ಅತಿಥಿಗಣ್ಯರನ್ನು ಹುಡುಕುವುದರಿಂದ ಹಿಡಿದು ಅವರನ್ನು ಆಹ್ವಾನಿಸಿ, ಗಣ್ಯರು ಕ್ಷೇತ್ರಕ್ಕೆ ಬಂದಾಗ ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ಪ್ರೊ. ಪ್ರಭಾಕರ್ ಮತ್ತು ಉಜಿರೆ ಕಾಲೇಜಿನ ಶಿಕ್ಷಕ ವೃಂದದವರು ಮಾಡುತ್ತಾ ಬಂದಿದ್ದಾರೆ. ಇದರಿಂದ ಪ್ರಭಾಕರರವರಿಗೆ ಅನೇಕ ಸಾಹಿತಿಗಳ, ಗಣ್ಯರ ನಿಟಕ ಸಂಪರ್ಕ ದೊರೆಯಿತು. ಆ ಕಾಲದಲ್ಲಿ ರಾಷಕವಿ ಕುವೆಂಪುರವರಿಂದ ತೊಡಗಿ ಜ್ಞಾನಪೀಠ ಪ್ರಶಸ್ತಿ ವಿಜೇತ ದ.ರಾ.ಬೇಂದ್ರೆಯವರವರೆಗೆ ಹಲವು ಖ್ಯಾತನಾಮರ ಸಂಪರ್ಕವನ್ನೂ ಪ್ರೊಫೆಸರ್ ಪ್ರಭಾಕರ್ ಹೊಂದಿದ್ದರು.

ಸರೋಜಿನಿಯವರ ಜತೆ ವಿವಾಹ: ಪ್ರೊ. ಪ್ರಭಾಕರ್‌ರವರು ಉಜಿರೆಗೆ ಬಂದ ವಷ ಅಂದರೆ ೧೯೬೬ ಜೂನ್ ೧ ರಂದು. ಮೂಡಬಿದ್ರಿಯ ಬೆಟ್ಕೇರಿಯ ತನ್ನ ಸೋದರ ಮಾವನ ಮಗಳು ಸರೋಜಿನಿಯನ್ನು ವಿವಾಹವಾದರು. ಎಸ್.ಎಸ್.ಎಲ್.ಸಿ. ಓದಿರುವ ಸರೋಜಿನಿಯವರು ಉತ್ತಮ ಗೃಹಿಣಿ. ಅನುರೂಪದ ದಾಂಪತ್ಯ. ಸರೋಜಿನಿಯವರೂ ಶ್ರಮಜೀವಿಯೇ. ತಮ್ಮ ಸಂಬಂಧಿಗಳ ಅನೇಕ ಮಕ್ಕಳನ್ನು ಇವರು ತನ್ನ ಮನೆಯಲ್ಲಿಟ್ಟುಕೊಂಡು ವ್ಯಾಸಂಗ ಮಾಡಿಸಿದ್ದಾರೆ. ಸುತ್ತಮುತ್ತಲಿನ ಜೈನ ಮನೆತನದ ಮಕ್ಕಳಿಗೆ ಉಜಿರೆ ಕಾಲೇಜು ಮತ್ತು ಸರೋಜಿನಿಯಮ್ಮನವರ ಆತಿಥ್ಯ ವರವಾಗಿ ಪರಿಣಮಿಸಿದೆ. ಇವರ ಸುಪುತ್ರಿ ಶರ್ಮಿಳಾ ಜನಿಸಿದ್ದು ೧೯೬೯ರಲ್ಲಿ. ಉಜಿರೆಯಲ್ಲಿಯೆ ಪದವಿ ಪಡೆದು ನಂತರ ಡಾ| ನರೇಂದ್ರರನ್ನು ಮದುವೆಯಾಗಿ ಲಂಡನಿನಲ್ಲಿ ನೆಲೆಸಿದ್ದಾರೆ. ಸರೋಜಿನಿಯಮ್ಮನವರ ಮೊಮ್ಮಗ ಸೋಹನ್ ಲಂಡನಿನಲ್ಲಿ ಲೆಕ್ಕಪರಿಶೋಧಕ. ಮೊಮ್ಮಗಳು ಸು? ಪದವಿ ಕಾಲೇಜಿನ ವಿದ್ಯಾರ್ಥಿಯಾಗಿದ್ದರು.

೧೯೬೯ರಲ್ಲಿ ಪ್ರಭಾಕರ್‌ರವರ ಕುಟುಂಬ ಧರ್ಮಸ್ಥಳದಿಂದ ಕಾಲೇಜಿಗೆ ಹತ್ತಿರವಾಗುವಂತೆ ಉಜಿರೆಗೆ ತಮ್ಮ ಮನೆಯನ್ನು ಬದಲಾಯಿಸಿಕೊಂಡ ನಂತರ ಮನೆಯಲ್ಲಿ ಸಾಕುಪ್ರಾಣಿಗಳಾಗಿ ಜಾನುವಾರುಗಳು, ನಾಯಿಗಳನ್ನು ಸಾಕಿದರು. ನಾಲ್ಕಾರು ಹಸುಗಳನ್ನು ಸಾಕಿ, ಮನೆಯಲ್ಲಿ ಬಳಸಿ ಉಳಿದ ಹಾಲನ್ನು ಸಿದ್ಧವನ ಗುರುಕುಲಕ್ಕೆ ಪೂರೈಸಿದರು. ೧೯೮೭ರಲ್ಲಿ ಸುಸಜ್ಜಿತವಾದ ಮನೆಯನ್ನು ತಾವಿದ್ದ ಮನೆಯ ಪಕ್ಕ ಕಟ್ಟಿಸಿಕೊಂಡು ಸ್ಥಳಾಂತರಗೊಂಡರು. ಅವರೇ ಹೇಳುವಂತೆ ಉಜಿರೆ ಬಹಳ ಸಣ್ಣ ಪೇಟೆಯಾಗಿತ್ತು,. ಒಂದೆರಡು ಅಂಗಡಿ, ಹೋಟೆಲನ್ನು ಬಿಟ್ಟರೆ ಏನೂ ಇರಲಿಲ್ಲ. ಹೆಗ್ಗಡೆಯವರು ಪ್ರಾರಂಭಿಸಿದ ಕಾಲೇಜು, ರುಡ್ಸೆಟ್ ಸಂಸ್ಥೆಗಳು ಇಲ್ಲಿಯ ವಾಣಿಜ್ಯದ ಮೇಲೆ ಬಹಳಷ್ಟು ಪರಿಣಾಮ ಬೀರಿದೆ.

ಮಂಜುಶ್ರೀ ಪ್ರೆಸ್ ಪೋಷಕರು: ಉಜಿರೆಯಲ್ಲಿ ಮಂಜುಶ್ರೀ ಪ್ರೆಸ್ಸಿಗೂ ಪ್ರೊ. ಪ್ರಭಾಕರ್‌ರವರು ಪೋಷಕರಾಗಿದ್ದಾರೆ. ಧರ್ಮಸ್ಥಳದ ಮುಖವಾಣಿ ಮಂಜುವಾಣಿಯ ಪ್ರಕಟಣೆ ಪ್ರಾರಂಭವಾಯಿತು. ಪತ್ರಿಕೆಗೆ ರೂಪುರೇಷೆ ನೀಡಿ ಅಂದವಾಗಿ ಹೊರಬರಲು ಪ್ರೊ. ಪ್ರಭಾಕರ್ ಬಹಳಷ ಶ್ರಮಿಸಿದ್ದಾರೆ. ಉಜಿರೆ ಕಾಲೇಜಿನಲ್ಲಿ ೨೭ ವರ್ಷಗಳ ಸುದೀರ್ಘ ಸೇವೆಯ ಬಳಿಕ ೧೯೯೩ರಲ್ಲಿ ತಮ್ಮ ೫೮ನೇ ವಷ ವಯಸ್ಸಿನಲ್ಲಿ ಕಾಲೇಜು ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತಿ ಪಡೆದು ಎಸ್.ಡಿ.ಎಂ. ಸೊಸೈಟಿಯ ಪೂರ್ಣಕಾಲಿಕ ಕಾರ್ಯದರ್ಶಿಗಳಾದರು. ನಂತರ ಸಂಸ್ಥೆಯ ಉಪಾಧ್ಯಕ್ಷರಾದರು. ರಾಷದ ಪ್ರಮುಖ ಗಣ್ಯರನ್ನು, ರಾಷ್ಟ್ರಾಧ್ಯಕ್ಷರಿಂದ ಹಿಡಿದು ಎಲ್ಲರನ್ನೂ ನೋಡಿ ಮಾತನಾಡಿಸಿ ಆಮಂತ್ರಿಸಿದ ಹೆಗ್ಗಳಿಕೆ ಪ್ರಭಾಕರರದ್ದು. ರಾಷಪತಿ ವಿ.ವಿ ಗಿರಿ, ಇಂದಿರಾ ಗಾಂಧಿ, ರಾಜೀವ ಗಾಂಧಿಯವರು ಧರ್ಮಸ್ಥಳಕ್ಕೆ ಬಂದಾಗ ಪ್ರೊ.ಪ್ರಭಾಕರರವರು ನಿರ್ವಹಣೆ ಮಾಡಿದ್ದಾರೆ. ಪ್ರೊ. ಪ್ರಭಾಕರ್ ವೈಯಕ್ತಿಕ ಜೀವನದಲ್ಲಿ ಯಾವುದೇ ನಿರೀಕ್ಷೆಗಳನ್ನು ಇರಿಸಿಕೊಂಡವರಲ್ಲ. ಸ್ವಂತಿಕೆಗೆ ಬೆಲೆ ಕೊಡುವ ಸ್ವಾಭಿಮಾನಿ.

LEAVE A REPLY

Please enter your comment!
Please enter your name here