
ಬೆಳ್ತಂಗಡಿ: ಅಬ್ದುಲ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಂಸ್ಥೆ ಮೈಸೂರು ಇದರ ವತಿಯಿಂದ ಆ.16ರಿಂದ ಆ.18ರವರೆಗೆ ಮೈಸೂರಿನಲ್ಲಿ ನಡೆಯಲಿರುವ ‘ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕರ ಸಬಲೀಕರಣ’ ತರಬೇತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅನಿತಾ ಕೆ. ಅವರು ಆಯ್ಕೆಯಾಗಿದ್ದಾರೆ. ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಂಸ್ಥೆಯು ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕರ ಸಬಲೀಕರಣ ವಿಷಯದ ಕುರಿತು ನಾಲ್ಕು ದಿನಗಳ ತರಬೇತಿಯನ್ನು ನೀಡಲಿದ್ದು, ಸೆದರಿ ತರಬೇತುದಾರರ ತರಬೇತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ತರಬೇತಿ ನೀಡುವ ಸಾಮರ್ಥ್ಯ ಹೊಂದಿರುವ ಮತ್ತು ಸಂವಹನ ಕೌಶಲ್ಯವಿರುವ ಒಬ್ಬರು ಗ್ರಾಮ ಪಂಚಾಯತಿ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ದ.ಕೆ ಜಿಲ್ಲಾ ಪಂಚಾಯತಿಗೆ ಪತ್ರ ಬಂದಿದ್ದು, ದ.ಕ ಜಿಲ್ಲಾ ಪಂಚಾಯತ್ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅನಿತಾ ಕೆ. ಅವರನ್ನು ಆಯ್ಕೆ ಮಾಡಿದೆ. ದ.ಕ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಮಹಿಳಾ ಅಧ್ಯಕ್ಷೆ ಎಂಬ ಕೀರ್ತಿಗೆ ಅನಿತಾ ಕೆ. ಅವರು ಪಾತ್ರರಾಗಿದ್ದು, ಅವರು ತರಬೇತಿಯಲ್ಲಿ ಭಾಗವಹಿಸಲಿದ್ದಾರೆ.