ದೇವರಾಣೆಗೂ ಆ ಪದ ಬಳಕೆಯಾಗಿತ್ತೇ…? – ಆಣೆ ಪ್ರಮಾಣಕ್ಕೆ ಧರ್ಮಸ್ಥಳಕ್ಕೆ ಕರೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್: ಅದು ಮುಗಿದ ವಿಚಾರ ಎಂದ ಸಿ.ಟಿ. ರವಿ

0

p>

ಬೆಳ್ತಂಗಡಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ನಡುವಿನ ರಾಜಕೀಯ ಸಂಘರ್ಷ ಬಿರುಸಾಗಿರುವ ನಡುವೆಯೇ ಧರ್ಮಸ್ಥಳ ಆಣೆ ಪ್ರಮಾಣ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಸಿ.ಟಿ. ರವಿ ತನ್ನ ವಿರುದ್ಧ ಆಕ್ಷೇಪಾರ್ಹ, ಅಶ್ಲೀಲ ಹೇಳಿಕೆ ನೀಡಿಲ್ಲ ಎನ್ನುವುದನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವರ ಎದುರು ಆಣೆ ಪ್ರಮಾಣ ಮಾಡಿ ಹೇಳಲಿ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು ಹಾಕಿರುವುದು ಚರ್ಚೆಗೆ ಮತ್ತು ಕುತೂಹಲಕ್ಕೆ ಗ್ರಾಸವಾಗಿದೆ. ರಾಮಾಯಣ, ಮಹಾಭಾರತ ಯುದ್ಧಗಳು ನಡೆದದ್ದು ಮಹಿಳೆಯನ್ನು ಅವಮಾನ ಮಾಡಿದ್ದಕ್ಕಾಗಿಯೇ. ಅಲ್ಲಿ ಅವಮಾನ ಮಾಡಿದ ಎಲ್ಲರಿಗೂ ಶಿಕ್ಷೆಯಾಗಿತ್ತು. ಇಲ್ಲಿಯೂ ಶಿಕ್ಷೆಯಾಗಬೇಕು. ಸಿ.ಟಿ. ರವಿ ನನ್ನ ವಿರುದ್ಧ ಅಂಥ ಮಾತನ್ನಾಡಿಲ್ಲ ಎನ್ನುವುದಾದರೆ ಧರ್ಮಸ್ಥಳಕ್ಕೆ ಬರಲಿ. ನಾನೂ ನನ್ನ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಬರುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಂದಿಟ್ಟಿರುವ ಸವಾಲನ್ನು ಬಿಜೆಪಿ ನಾಯಕ ಸಿ.ಟಿ. ರವಿ ಅವರು ಸ್ವೀಕರಿಸುತ್ತಾರಾ ಎಂದು ಪ್ರಶ್ನೆಗಳು ಉದ್ಬವವಾಗಿತ್ತು. ಈ ವೇಳೆ ಆ ಸವಾಲನ್ನು ತಳ್ಳಿ ಹಾಕಿರುದ ಸಿ.ಟಿ. ರವಿ ಅವರು ಸದ್ಯ ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಆಣೆ ಪ್ರಮಾಣದ ಪ್ರಶ್ನೆ ಬರುವುದಿಲ್ಲ. ಕೋರ್ಟ್ ಮೆಟ್ಟಿಲೇರುವ ಮುನ್ನ ಆಣೆ ಪ್ರಮಾಣದ ಬಗ್ಗೆ ಮಾತನಾಡಬೇಕಿತ್ತು. ಸದ್ಯ ಆಣೆ ಪ್ರಮಾಣ ಮುಗಿದ ಕಥೆ ಎಂದು ಉತ್ತರ ನೀಡಿದ್ದಾರೆ. ಸಿ.ಟಿ. ರವಿ ನನ್ನ ವಿರುದ್ಧ ಅಸಭ್ಯ ಪದ ಬಳಕೆ ಮಾಡಿ ಅವಮಾನ ಮಾಡಿದ್ದಾರೆ. ಇದಕ್ಕೆ ಬೇಕಾದ ಪುರಾವೆಗಳು ನನ್ನ ಬಳಿ ಇವೆ ಎಂದೇ ಹೆಬ್ಬಾಳ್ಕರ್ ಅವರು ಧರ್ಮಸ್ಥಳ ಆಣೆ ಪ್ರಮಾಣದ ಸವಾಲು ಹಾಕಿದ್ದಾರೆ. ಲಕ್ಷ್ಮಿ ಅವರ ಬಗ್ಗೆ ನಾನು ಫ್ರಸ್ಟೇಟೆಡ್ ಎಂಬ ಪದ ಬಳಕೆ ಮಾಡಿದ್ದೆಯೇ ವಿನಃ, ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ ಎಂದು ರವಿ ಹೇಳಿದ್ದರು. ಈ ಎಲ್ಲಾ ಬೆಳವಣಿಗೆಯ ಮಧ್ಯೆ ಈ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿ ಆದೇಶ ನೀಡಿದೆ.

ಆಣೆ ಪ್ರಮಾಣ ಹಿಂದೆಯೂ ಕರೆಯಲಾಗಿತ್ತು: ಅಂದಿನಿಂದ ಇಂದಿನವರೆಗೆ ರಾಜಕೀಯ ಸಂಘರ್ಷ, ಆರೋಪ/ಪ್ರತ್ಯಾರೋಪಗಳು ಜೋರಾದಗಲೆಲ್ಲಾ ರಾಜಕಾರಣಿಗಳು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಪರಸ್ಪರ ಸವಾಲೊಡ್ಡುವುದು ಹೊಸ ವಿಷಯವೇನಲ್ಲ. ಹಿಂದೆ ಮಾಜಿ ಸಿ.ಎಂ. ಬಿ.ಎಸ್. ಯಡಿಯೂರಪ್ಪನವರಿಂದ ಹಿಡಿದು ಈಗಿನ ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲೂ ಇದು ಮುಂದುವರಿದಿದೆ. 2011ರಲ್ಲಿ ಈಗಿನ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿ.ಎಂ. ಯಡಿಯೂರಪ್ಪನವರ ಮಧ್ಯೆ ಸಂಘರ್ಷ ತಾರಕಕ್ಕೇರಿದ್ದ ವೇಳೆ ಧರ್ಮಸ್ಥಳಕ್ಕೆ ಆಣೆ ಪ್ರಮಾಣಕ್ಕಾಗಿ ಬರಲಿ ಎಂದು ಎಚ್‌ಡಿಕೆ ಬಿಎಸ್‌ವೈಗೆ ಸವಾಲು ಹಾಕಿದ್ದರು. ನನ್ನೊಂದಿಗೆ ರಾಜಿ ಮಾಡಿಕೊಳ್ಳಲು ಯಡಿಯೂರಪ್ಪ ಯತ್ನಿಸಿದ್ದರು. ಇದಕ್ಕಾಗಿ ಹಣ ಮತ್ತಿತರ ಆಮಿಷಗಳನ್ನು ಒಡ್ಡಿದ್ದರು ಎಂಬ ಹೇಳಿಕೆಗೆ ನಾನು ಈಗಲೂ ಬದ್ಧ ಎಂದಿದ್ದ ಕುಮಾರಸ್ವಾಮಿ, ಧರ್ಮಸ್ಥಳಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ, ಹೈಕಮಾಂಡ್ ಸೂಚನೆಯಂತೆ ನಾನು ಆಣೆ ಪ್ರಮಾಣ ಮಾಡುವುದಿಲ್ಲ ಎಂದಿದ್ದ ಯಡಿಯೂರಪ್ಪ, ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಹೋಗಿದ್ದರು. ಭ್ರಷ್ಟಾಚಾರಕ್ಕೆ ಸಂಬಂಧಿಸಿ ಲೆಹರ್ ಸಿಂಗ್ ಮೂಲಕ ಯಡಿಯೂರಪ್ಪ ರಾಜಿ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ ಎನ್ನುವುದು ಕುಮಾರಸ್ವಾಮಿ ಆರೋಪವಾಗಿತ್ತು. ಮಾತಿಗೆ ಮಾತು ಬೆಳೆದು ಆಣೆ ಪ್ರಮಾಣದ ಹಂತಕ್ಕೆ ಹೋಗಿ ಇಡೀ ದೇಶ ಈ ವಿದ್ಯಮಾನ ವೀಕ್ಷಿಸಲು ಸಜ್ಜಾಗಿತ್ತು ಆದರೆ ಇಬ್ಬರೂ ನಾಯಕರು ಧರ್ಮಸ್ಥಳಕ್ಕೆ ಬಂದರೂ ಆಣೆ ಪ್ರಮಾಣ ಮಾಡಿರಲಿಲ್ಲ.

ವಸಂತ ಬಂಗೇರ ಅವರೂ ಹೇಳಿದ್ದರು: 2012ರಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಶಾಸಕರಾಗಿದ್ದ ವಸಂತ ಬಂಗೇರ ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದಾಗಿ ಸದನದಲ್ಲಿ ಹೇಳಿದ್ದರು. ಮಂಗಳೂರು ಹೋಂಸ್ಟೇ ದಾಳಿ ಘಟನೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಎಲ್ಲವೂ ಕಲ್ಲಡ್ಕ ಪ್ರಭಾಕರ್ ಭಟ್ ಸೂಚನೆಯಂತೆ ನಡೆಯುತ್ತಿದೆ ಎಂದು ಬಂಗೇರ ಹೇಳಿದ್ದರು. ಕಲ್ಲಡ್ಕ ಅವರ ಹೆಸರು ಹೇಳಿದ್ದಕ್ಕೆ ಸಿಟ್ಟಾಗಿದ್ದ ಮಾಜಿ ಸಿಎಂ ಯಡಿಯೂರಪ್ಪ, ಹೆಡ್ ಸೆಟ್‌ನ್ನು ನೆಲಕ್ಕೆ ಕುಕ್ಕಿದ್ದರು. ನನ್ನ ಹೇಳಿಕೆಗೆ ಬದ್ಧ ಎಂದು ಬಂಗೇರ ಧರ್ಮಸ್ಥಳದಲ್ಲಿ ಪ್ರಮಾಣ ಮಾಡುವುದಾಗಿ ಸವಾಲು ಹಾಕಿದ್ದರು.

ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇ ಗೌಡರು ಓರ್ವ ರಾಗಿಕಳ್ಳ ಎಂದು ೨೦೨೨ರಲ್ಲಿ ಬಿಜೆಪಿ ಮುಖಂಡರು ಆರೋಪಿಸಿದ್ದರು. ಇದರಿಂದ ಬೇಸರಗೊಂಡಿದ್ದ ಶಿವಲಿಂಗೇಗೌಡ, ಧರ್ಮಸ್ಥಳಕ್ಕೆ ಬಂದು, ನೇತ್ರಾವತಿಯಲ್ಲಿ ಸ್ನಾನ ಮಾಡಿ ದೇವರ ಮುಂದೆ ಪ್ರಮಾಣ ಮಾಡಿದ್ದರು. ನಂತರ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದರು. 2023ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ, ಕುಮಾರಸ್ವಾಮಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಎಚ್‌ಡಿಕೆ, ಸಿದ್ದರಾಮಯ್ಯ ಸರ್ಕಾರ ಆರಂಭದಿಂದ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ವರ್ಗಾವಣೆಯಲ್ಲಿ ಹಣದ ವ್ಯವಹಾರ ನಡೆಸಿಲ್ಲ ಎಂದು ಬಾಲಕೃಷ್ಣ, ಸಿಎಂ ಸಿದ್ದರಾಮಯ್ಯ, ಅವರ ಪುತ್ರ ಯತೀಂದ್ರ ಧರ್ಮಸ್ಥಳ ಮಂಜುನಾಥನ ಮುಂದೆ ಪ್ರಮಾಣ ಮಾಡಲಿ ಎಂದು ಎಚ್‌ಡಿಕೆ ಸವಾಲು ಹಾಕಿದ್ದರು.

ಹಾಲಪ್ಪ-ಬೇಳೂರು ಜಟಾಪಟಿ: 2022ರಲ್ಲಿ ಬಿಜೆಪಿ ನಾಯಕ ಹರತಾಳು ಹಾಲಪ್ಪ ಮತ್ತು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ಮಧ್ಯೆ ಆಣೆ ಪ್ರಮಾಣದ ಕದನ ಏರ್ಪಟ್ಟಿತ್ತು. ಸಾಗರದ ಹೊಸನಗರ ತಾಲೂಕಿನ ಮರಳು ಸಾಗಾಟದ ಲಾರಿ ಮಾಲೀಕರಿಂದ ಹಾಲಪ್ಪ ಕಮಿಷನ್ ಪಡೆದಿದ್ದಾರೆ ಎಂದು ಬೇಳೂರು ಆರೋಪ ಮಾಡಿದ್ದರು. ಹಣ ಪಡೆದಿಲ್ಲ ಎನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ಬೇಳೂರು ಸವಾಲು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಸವಾಲು ಸ್ವೀಕರಿಸಿದ್ದ ಅವರು ಧರ್ಮಸ್ಥಳಕ್ಕೆ ಬಂದು, ದೇವರ ಸಮ್ಮುಖದಲ್ಲಿ ನನ್ನ ಆತ್ಮಶುದ್ಧಿ ಮತ್ತು ಪ್ರಾಮಾಣಿಕತೆಯನ್ನು ಪ್ರದರ್ಶಿಸುವ ಸಲುವಾಗಿ, ಲಾರಿ ಮಾಲೀಕರಿಂದ ಲಂಚದ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿದ್ದೇನೆ ಎಂದು ಮಾಧ್ಯಮಕ್ಕೆ ಧರ್ಮಸ್ಥಳದಲ್ಲಿ ತಿಳಿಸಿದ್ದರು. ಬೇಳೂರು ಕೂಡ ದೇವಸ್ಥಾನಕ್ಕೆ ಬಂದು, ದರ್ಶನ ಮಾಡಿ, ಪೂಜೆ ಸಲ್ಲಿಸಿದ್ದರು. ಇಬ್ಬರೂ ಪ್ರತ್ಯೇಕವಾಗಿ ಪ್ರಾರ್ಥಿಸಿದ್ದರು.

ಮಾರಿಗುಡಿಯಲ್ಲಿ ಪೂಂಜ ಆಣೆ: ಬೆಳ್ತಂಗಡಿ ಪ್ರವಾಸಿ ಬಂಗಲೆ ನಿರ್ಮಾಣ ಮತ್ತು ಹೆದ್ದಾರಿ ಕಾಮಗಾರಿಯಲ್ಲಿ ಶಾಸಕ ಹರೀಶ್ ಪೂಂಜ ಭ್ರಷ್ಟಾಚಾರ ಎಸಗಿದ್ದಾರೆ. ಶಾಸಕರಿಗೆ 3 ಕೋಟಿ ಕಿಕ್ ಬ್ಯಾಕ್ ತಲುಪಿದೆ. ರೂ.7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಬೆಳ್ತಂಗಡಿ ಪ್ರವಾಸಿ ಮಂದಿರದ ಕಾಮಗಾರಿ ಮುಗಿದ ಬಳಿಕ ವರ್ಕ್ ಆರ್ಡರ್ ಆಗಿದೆ. ಅಲ್ಲದೆ ಪ್ರವಾಸಿ ಮಂದಿರದ ಅನುದಾನವನ್ನು ಚುನಾವಣೆ ಪ್ರಚಾರಕ್ಕೆ ಬಳಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಆರೋಪಿಸಿದ್ದರು. ನಾನು ಭ್ರಷ್ಟಾಚಾರ ಮಾಡಿಲ್ಲ ಎಂದು ಪ್ರತಿಪಾದಿಸಿದ್ದ ಹರೀಶ್ ಪೂಂಜ, ಬೆಳ್ತಂಗಡಿಯ ಸಂತೆಕಟ್ಟೆಯಲ್ಲಿರುವ ಮಾರಿಗುಡಿ ಸನ್ನಿಧಾನಕ್ಕೆ ಬಂದು, ತಾನು ಒಂದು ರೂಪಾಯಿ ಮುಟ್ಟಿಲ್ಲ, ಭ್ರಷ್ಟಾಚಾರ ಮಾಡಿಲ್ಲ. ಒಂದು ವೇಳೆ ಭ್ರಷ್ಟಾಚಾರ ಮಾಡಿದ್ದು ಹೌದೇ ಆದಲ್ಲಿ ಮಾರಿಗುಡಿಯ ಮಹಾದೇವಿ ತಕ್ಕ ಶಿಕ್ಷೆ ನೀಡಲಿ ಎಂದು ಪ್ರಮಾಣ ಮಾಡಿದ್ದರು.

LEAVE A REPLY

Please enter your comment!
Please enter your name here