ಒಂದೇ ತಿಂಗಳಲ್ಲಿ ಮತ್ತೊಂದು ಚಿರತೆ ಸೆರೆ: ಸವಣಾಲು ಗ್ರಾಮಸ್ಥರು ನಿರಾಳ

0

ಬೆಳ್ತಂಗಡಿ: ಸವಣಾಲಿನಲ್ಲಿ ಇತ್ತೀಚಿಗಷ್ಟೇ ಗ್ರಾಮಸ್ಥರ ನಿದ್ದೆ ಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಯಶಸ್ವಿಯಾಗಿ ಸೆರೆ ಹಿಡಿದಿದ್ದರು. ಇದೀಗ ಅದೇ ಸುತ್ತಳತೆಯಲ್ಲಿ ಮತ್ತೊಂದು‌ ಚಿರತೆ‌ ಬೋನಿಗೆ ಬಿದ್ದಿದ್ದು ಸವಣಾಲು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಗುರಿಕಂಡ ಆನಂದ ಶೆಟ್ಟಿ ಅವರ ಮನೆ ಬಳಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನೊಳಗೆ ಸೆ.20ರಂದು ಮಧ್ಯರಾತ್ರಿ ಚಿರತೆ ಸೆರೆಯಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಗುರಿಕಂಡ ಪರಿಸರದಲ್ಲಿ ಚಿರತೆಯಿಂದಾಗಿ ಕೋಳಿ ಸೇರಿದಂತೆ ಸಾಕು ಪ್ರಾಣಿಗಳಿಗೆ ತೊಂದರೆ ಆಗುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮನೆ ಮಂದಿ ಮಾಹಿತಿ ನೀಡಿದ್ದರು. ಈ ಬಗ್ಗೆ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಚಿರತೆ ಸೆರೆ ಹಿಡಿಯಲು ಒಂದು ವಾರದ ಹಿಂದೆ ಬೋನ್ ಆಳವಡಿಸಿದ್ದರು. ಇದೀಗ ಅರಣ್ಯ ಇಲಾಖೆಯ ಆಪರೇಷನ್ ಚಿರತೆ ಯಶಸ್ವಿಯಾಗಿದ್ದು ಶುಕ್ರವಾರ ಮಧ್ಯರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಬೋನಿನೊಳಗೆ ಚಿರತೆ ಸೆರೆಯಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮನೆಯವರು ಮಾಹಿತಿ ನೀಡಿದ್ದು ಅಧಿಕಾರಿಗಳ ಬಂದು ಪರಿಶೀಲನೆ ನಡೆಸಿದ್ದಾರೆ.

ಈ‌ ಹಿಂದೆ ಸುಮಾರು 3 ತಿಂಗಳ ಕಾಲ ಚಿರತೆಯ ಕಾಟ ಸವಣಾಲು ಗ್ರಾಮಸ್ಥರಿಗೆ ದೊಡ್ಡ ತಲೆನೋವಾಗಿತ್ತು. ಆ ಚಿರತೆ ಸೆಪ್ಟೆಂಬರ್ 1ರಂದು ಮಧ್ಯರಾತ್ರಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿನೊಳಗೆ ಬಿದ್ದಿತ್ತು. ಆ ನಂತರ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿತ್ತು. ಆದರೆ ಒಂದೇ ವಾರದೊಳಗೆ ಮತ್ತೊಂದು ಚಿರತೆ ಈ ಪರಿಸರದಲ್ಲಿ ಸುತ್ತಾಡಿದ್ದಲ್ಲದೇ ಗ್ರಾಮಸ್ಥರ ಕೋಳಿಯನ್ನು ಹಿಡಿದಿತ್ತು. ಇದರಿಂದ ಮತ್ತಷ್ಟು ಆತಂಕಕ್ಕೊಳಗಾದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು. ಅದರಂತೆ ಮತ್ತೆ ಕಳೆದ ಒಂದು ವಾರಗಳ ಹಿಂದೆ ಬೋನ್ ಅಳವಡಿಸಲಾಗಿತ್ತು. ಈ ಮೂಲಕ ಒಂದೇ ತಿಂಗಳಲ್ಲಿ ಎರಡು ಚಿರತೆಗಳು ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಂತಾಗಿದೆ.

LEAVE A REPLY

Please enter your comment!
Please enter your name here