ಪತ್ರಿಕಾಗೋಷ್ಠಿ: ರಾಜ್ಯದಲ್ಲಿ 25 ಸ್ಥಾನ, ದೇಶದಲ್ಲಿ 400ಕ್ಕೂ ಅಧಿಕ ಸ್ಥಾನಗಳೊಂದಿಗೆ ಮೋದಿ 3ನೇ ಬಾರಿ ಪ್ರಧಾನಿಯಾಗುವುದು ಖಚಿತ- ದ.ಕ. ಬಿ.ಜೆ.ಪಿ ಅಭ್ಯರ್ಥಿ ಗೆಲುವಿನ ಜಯಭೇರಿ: ಪ್ರಭಾಕರ ಬಂಗೇರ

0

ಬೆಳ್ತಂಗಡಿ: ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭಾರಿ ಮುನ್ನಡೆಯಿಂದ ಗೆಲುವಿನ ಜಯಭೇರಿ ಬಾರಿಸಲಿದ್ದಾರೆ. ದೇಶದಲ್ಲಿ ಬಿಜೆಪಿ 400ರ ಗಡಿ ದಾಟಲಿದೆ ಎಂದು ಮಾಜಿ ಶಾಸಕ ಕೆ.ಪ್ರಭಾಕರ ಬಂಗೇರ ಹೇಳಿದರು.

ಅವರು ಎ.24ರಂದು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಭ್ರಷ್ಟಾಚಾರ ರಹಿತ ಪರಿಶುದ್ಧ, ಪರಿಶುಭ್ರ, ಪಾರದರ್ಶಕ ಆಡಳಿತ ಈ ದೇಶಕ್ಕೆ ನೀಡಿದೆ. ದೇಶದೆಲ್ಲೆಡೆಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗಳಲ್ಲೂ ಮೋದಿ ಹವಾ ಗೋಚರಿಸುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಜಿಲ್ಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಾದ ಅಭಿವೃದ್ಧಿಯೂ ಸೇರಿಕೊಂಡಿರುವುದರಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅಭೂತಪೂರ್ವವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನರೇಂದ್ರ ಮೋದಿ ಮುತ್ಸದ್ದಿತನದಿಂದ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಿಂತಿವೆ. ಶತ್ರುರಾಷ್ಟ್ರಗಳು ಆರ್ಥಿಕ ಪತನ ಹೊಂದಿವೆ. ವಿದೇಶಾಂಗ ನೀತಿಯಿಂದ ವಿಶ್ವದೆಲ್ಲೆಡೆ ಭಾರತದ ಗೌರವ ಹೆಚ್ಚಾಗಿ ಭಾರತ ವಿಶ್ವಗುರುವಾಗುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ಸಂಸದ ನಳಿನ್ ಮುಖಾಂತರ ಕೇಂದ್ರ ಸರ್ಕಾರದ ಯೋಜನೆಗಳಿಂದ ಮೂಲಸೌಕರ್ಯ ವೃದ್ಧಿಯಾಗಿದೆ. ಜಿಲ್ಲೆಯನ್ನು ಸಂಪರ್ಕಿಸುವ ವಿವಿಧ ರಸ್ತೆಗಳು ಮೇಲ್ದರ್ಜೆಗೇರಿವೆ. ಯುವ ಜನತೆಗೆ ಉದ್ಯೋಗಾವಕಾಶ ಹೇರಳವಾಗಿ ದೊರಕಿದ್ದು, ಸಂಸದರು ದೊರಕಿಸಿದ ಸಿ.ಎಸ್.ಆರ್. ಫಂಡ್‌ನಿಂದಾಗಿ ಆರೋಗ್ಯ ಕ್ಷೇತ್ರಗಳಲ್ಲಿ ಬಹಳಷ್ಟು ಸುಧಾರಣೆಯಾಗಿವೆ. ಇವುಗಳ ಫಲಶ್ರುತಿ ನಮ್ಮ ಕಣ್ಣೆದುರು ಗೋಚರಿಸುತ್ತದೆ. ಜಿಲ್ಲೆಯ ಅಸಂಖ್ಯಾತ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಬಿಮಾ ಯೋಜನೆ ಹಾಗೂ ಮಧ್ಯಮ ವರ್ಗದ ಫಲಾನುಭವಿಗಳಿಗೆ ಆಯುಷ್ಮಾನ್ ಯೋಜನೆ, ಉಜ್ವಲಾ ಗ್ಯಾಸ್, ಮುದ್ರಾ ಯೋಜನೆ ಕೇಂದ್ರ ಸರ್ಕಾರದಿಂದ ದೊರೆತಿದೆ. ಈ ಎಲ್ಲ ಫಲಾನುಭವಿಗಳು, ನರೇಂದ್ರ ಮೋದಿಯವರಿಗೆ ಕೃತಜ್ಞತೆಯ ರೂಪದಲ್ಲಿ ಬಹುಮತದ ಉಡುಗೊರೆಯನ್ನೇ ನೀಡಲಿದ್ದಾರೆ ಎಂದು ಹೇಳಿದರು.

ದೇಶದ ಗಡಿ ರಕ್ಷಣೆ ಮಾಡಿದ ಯೋಧ ಕ್ಯಾಪ್ಟನ್ ಬ್ರಿಜೇಶ್ ಚೌಟ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವುದು ಜಿಲ್ಲೆಯ ಎಲ್ಲ ವರ್ಗದ ಜನತೆಯಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ. ಸೈನ್ಯದ ಮನೋಬಲ ಹೆಚ್ಚಿಸಿದ ಭಾರತದ ಕ್ಯಾಪ್ಟನ್ ನರೇಂದ್ರ ಮೋದಿಗೆ ಜಿಲ್ಲೆಯ ಜನತೆ ಸೇನೆಯ ಕ್ಯಾಪ್ಟನ್ ಆಗಿದ್ದ ಬ್ರಿಜೇಶ್ ಚೌಟರನ್ನು ಭಾರಿ ಅಂತರದಿಂದ ಚುನಾಯಿಸುತ್ತಾರೆ. ಕರ್ನಾಟಕದಲ್ಲಿ 25 ಸ್ಥಾನ ಗಳಿಸುವ ಮೂಲಕ ದೇಶದ ಜನತೆ ಬಿಜೆಪಿಯನ್ನು 400ರ ಗಡಿ ದಾಟಿಸಲಿದ್ದು, ಮೋದಿ 3ನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಕಚೇರಿ ಕಾರ್ಯದರ್ಶಿ ಜಯಾನಂದ ಕಲ್ಲಾಪು, ರಾಜೇಶ್ ಪೆರ್ಮುಡ ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here