

ಬೆಳ್ತಂಗಡಿ: ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು, ಲೋಕನಾಥೇಶ್ವರ ಭಜನಾ ಮಂಡಳಿ ಬದ್ಯಾರು, ಶ್ರೀ ದೇವಿ ಮಹಿಳಾ ಕೇಂದ್ರ ಬದ್ಯಾರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿರ್ಲಾಲು ಇದರ ಸಂಯುಕ್ತ ಆಶ್ರಯದಲ್ಲಿ ಬದ್ಯಾರು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಎ.15ರಂದು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಹಾಗೂ ಶ್ರೀ ದೇವಿ ಮಹಿಳಾ ಕೇಂದ್ರದ 25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಏಕಾಹ ಭಜನೆ ಮತ್ತು ಭಜನಾ ಕಮ್ಮಟೋತ್ಸವ ಜರಗಲಿದೆ ಎಂದು ಭಜನಾ ಮಂಡಳಿಯ ಅಧ್ಯಕ್ಷ ಜಗನ್ನಾಥ ಕುಲಾಲ್ ಬೈರೊಟ್ಟು ಹೇಳಿದರು.
ಅವರು ಎ.8ರಂದು ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಅಂದು ಬೆಳಿಗ್ಗೆ 7.30ರಿಂದ ಏಕಾಹ ಭಜನೆ ಪ್ರಾರಂಭವಾಗಲಿದೆ. ಅನಂತರ ಆಹ್ವಾನಿತ ಭಜನಾ ಮಂಡಳಿಗಳಿಂದ ಭಜನೆ, ಮದ್ಯಾಹ್ನ ಮಹಾ ಪೂಜೆ, ಅನ್ನ ಸಂತರ್ಪಣೆ, ಸಂಜೆ 4ರಿಂದ ಬೆಳ್ಳಿ ಹಬ್ಬದ ಸಭಾ ಕಾರ್ಯಕ್ರಮ, ಸಂಜೆ 6 ರಿಂದ ಭಜನಾ ಕಮ್ಮಟೋತ್ಸದ ಉದ್ಘಾಟನೆ ನಡೆಯಲಿದೆ. ಈ ಕಮ್ಮಟೋತ್ಸವದಲ್ಲಿ ತಾಲೂಕಿನ 38 ವಿವಿಧ ಭಜನಾ ಮಂಡಳಿಗಳು ಭಾಗವಹಿಸಲಿದೆ.
ರಾತ್ರಿ 10 ಕ್ಕೆ ರಂಗ ಪೂಜೆ, ಮರುದಿನ ಬೆಳಿಗ್ಗೆ 7.30 ಕ್ಕೆ ಮಹಾಪೂಜೆ ಮತ್ತು ಮಂಗಳೊತ್ಸವ ಜರಗಲಿದೆ.
ಬೆಳ್ಳಿ ಹಬ್ಬದ ಸಭಾ ಕಾರ್ಯಕ್ರಮದಲ್ಲಿ ಚಿತ್ರ ನಟ, ನಿರ್ದೇಶಕ ಸುಭಾಸ್ ಅರ್ವ, ಭಜನಾ ತರಬೇತಿದಾರ ವಿ. ಹರೀಶ್ ನೆರಿಯ ಹಾಗೂ ಭಜನಾ ಮಂಡಳಿಯಲ್ಲಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಗುವುದು ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಭಜನಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸದಾಶಿವ ಶಿವಗಿರಿ, ಮಾಜಿ ಅಧ್ಯಕ್ಷರುಗಳಾದ ಅಶೋಕ ಬುಡೆಂಗೊಟ್ಟು, ರಾಜೇಶ್ ಕುಲಾಲ್ ಬೈರೊಟ್ಟು ಉಪಸ್ಥಿತರಿದ್ದರು.