ಬಳಂಜ: ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೊಲ್ಲಾಜೆ ಕಡೆಂಗಾಲು ಕೂಡು ರಸ್ತೆಯ ಬದಿ ಮಣ್ಣು ಸವೆತಗೊಂಡು ಬೀಳುವ ಹಂತದಲ್ಲಿದ್ದ ವಿದ್ಯುತ್ ಕಂಬವನ್ನು ಇಂದು ಮೆಸ್ಕಾಂ ಇಲಾಖೆಯವರು ಅಂತೂ ಇಂತೂ ಸ್ಥಳಾಂತರ ಮಾಡಿದರು.ಇಲ್ಲಿನ ಅಪಾಯಕಾರಿ ಸ್ಥಿತಿಯಲ್ಲಿದ್ದ ವಿದ್ಯುತ್ ಕಂಬವನ್ನು ತೆರೆವು ಮಾಡಲು ಹಲವು ಸಮಯದಿಂದ ಅಳದಂಗಡಿಯ ಮೆಸ್ಕಾಂ ಇಲಾಖೆಗೆ ಸ್ಥಳೀಯ ಗ್ರಾಮಸ್ಥರು ದೂರನ್ನು ನೀಡಿದ್ದರೂ ಮೆಸ್ಕಾಂ ಇಲಾಖೆಯವರು ಗಮನ ಹರಿಸಿಲ್ಲ.ಸ್ಥಳೀಯ ಲೈನ್ ಮ್ಯಾನ್ ಹತ್ತಿರ ತಿಳಿಸಿದರೂ ಅಸಂಬದ್ದ ಉತ್ತರ ನೀಡುತ್ತಾರೆ.
ದಿನ ನಿತ್ಯ ಈ ಭಾಗದಲ್ಲಿ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಸಂಚಾರ ಮಾಡುತ್ತಿದ್ದು ಒಂದು ವೇಳೆ ಈ ವಿದ್ಯುತ್ ಕಂಬ ಬಿದ್ದು ಹೋದರೆ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಮನಗಂಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಉತ್ತಮ ಸೇವೆ ನೀಡುತ್ತಿರುವ ಯಶೋಧರ ಶೆಟ್ಟಿ ಹಾಗೂ ಬಳಂಜ ನಾಲ್ಕೂರಿನ ಜ್ವಲಂತ ಸಮಸ್ಯೆಗಳನ್ನು ತನ್ನ ಪ್ರಖರ ಹೋರಾಟದ ಮೂಲಕ ಅಧಿಕಾರಿಗಳಿಗೆ ತಲುಪಿಸಿ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನ ಪಡುತ್ತಿರುವ ಯುವ ಸಾಮಾಜಿಕ ಹೋರಾಟಗಾರರಾಗಿರುವ ಸುನಿಲ್ ಶೆಟ್ಟಿ ನಾಲ್ಕೂರು ಇವರ ಗಮನಕ್ಕೆ ತಂದಾಗ ಇವರಿಬ್ಬರೂ ತಕ್ಷಣವೇ ಸ್ಪಂದಿಸಿ ಮೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅಪಾಯವನ್ನು ಮನದಟ್ಟು ಮಾಡಿ ಇಂದು ಕಂಬವನ್ನು ಬೇರೆಡೆಗೆ ಸ್ಥಳಾಂತರ ಮಾಡುವಲ್ಲಿ ಯಶಸ್ವಿಯಾಗಿದ್ದು ಕಡೆಂಗಾಲು ಬೊಲ್ಲಾಜೆ ಪರಿಸರದ ಗ್ರಾಮಸ್ಥರು ಇವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.