ಉಜಿರೆ: “ಗೆಲುವು ಒಬ್ಬರದ್ದಾಗಿದ್ದರೂ ನೀವೆಲ್ಲರೂ ಒಗ್ಗಟ್ಟಿನಿಂದ ಈ ರೀತಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಬಹಳ ಸಂತೋಷವನ್ನು ನೀಡಿದೆ.ಹಿರಿಯ ಸ್ವಯಂಸೇವಕರು ಕೊಟ್ಟ ತರಬೇತಿ, ಸ್ಫೂರ್ತಿ ಹಾಗೂ ಅವರ ಸಹಾಯಗಳಿಂದ ಈ ಸಾಧನೆ ಸಾಧ್ಯವಾಗಿದೆ.ತರಬೇತಿಯ ಪ್ರಾರಂಭದಲ್ಲಿ ಮೈದಾನದಲ್ಲಿ ನಾಲ್ಕಾರು ಸುತ್ತು ಓಡುವಾಗ ಇನ್ನೂ ಜಾಸ್ತಿ ಓಡಲು ಸಾಧ್ಯವಿಲ್ಲ ಎನಿಸುತ್ತಿತ್ತು.ಆದರೆ ನನ್ನಿಂದ ಸಾಧ್ಯ ಎಂದು ಮನಸ್ಸಿನಲ್ಲಿ ಭದ್ರವಾಗಿಸಿಕೊಳ್ಳಲು ಶುರು ಮಾಡಿದಾಗ ಏನು ಬೇಕಾದರೂ ಮಾಡಬಲ್ಲೆ ಎಂಬ ನಂಬಿಕೆ ಮೂಡಿತು.ಪಟ್ಟ ಪರಿಶ್ರಮಕ್ಕೆ ಪ್ರತಿಫಲವೆಂಬಂತೆ ರಾಜ್ಯ ಪಥಸಂಚಲನಕ್ಕೆ ಆಯ್ಕೆಯಾಗಿ ಮಾಣಿಕ್ ಷಾ ಮೈದಾನದಲ್ಲಿ ಪಥ ಸಂಚಲನ ಮಾಡಿದ್ದು ತುಂಬಾ ಆನಂದವಾಯಿತು.ರಾಜ್ಯಪಾಲರೊಂದಿಗೆ ಭಾವಚಿತ್ರ ತೆಗೆಸಿಕೊಳ್ಳುವ ಅಭೂತಪೂರ್ವ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಹೆಮ್ಮೆಯ ವಿಷಯ. ಇದೆಲ್ಲ ಸಾಧ್ಯವಾಗಿದ್ದು ಏನ್.ಎಸ್.ಎಸ್ ನಿಂದ.” ಎಂದು ಕರ್ನಾಟಕ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗವಹಿಸಿದ ಎನ್.ಎಸ್.ಎಸ್ ನ ಸ್ವಯಂಸೇವಕಿ ಕು.ಚಂದ್ರಿಕಾ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆಯ ಸಮ್ಯಗ್ದರ್ಶನ ಸಭಾಂಗಣದಲ್ಲಿ ಫೆ.14 ರಂದು ಕು.ಚಂದ್ರಿಕಾ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಅವರು ಪಡೆದ ತರಬೇತಿ, ಗಣರಾಜ್ಯೋತ್ಸವ ಪಥಸಂಚಲನಕ್ಕೆ ಆಯ್ಕೆಯಾದ ಬಗ್ಗೆ, ಕ್ಯಾಂಪ್ ನಲ್ಲಿ ಕಳೆದ ದಿನಗಳು, ಪಡೆದ ಅನುಭವಗಳು, ಕಲಿತ ಹೊಸ ವಿಚಾರಗಳ ಕುರಿತು ಮಾತನಾಡಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆಯ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷಿಯ ನುಡಿಗಳನ್ನಾಡುತ್ತಾ “ಎನ್.ಎಸ್.ಎಸ್. ಗೆ ಸ್ವಯಂಸೇವಕರೇ ನಿಜವಾದ ಆಸ್ತಿ . ಎನ್.ಎಸ್.ಎಸ್. ಕಿರೀಟಕ್ಕೆ ಪ್ರಶಸ್ತಿ ಗೌರವಗಳೆಂಬ ಗರಿಗಳು ಸೇರಿದರೆ ಅದು ಸ್ವಯಂಸೇವಕರ ನಿಸ್ವಾರ್ಥ ಸೇವೆ ಹಾಗೂ ಪ್ರಾಮಾಣಿಕವಾಗಿ ತೊಡಗಿಸಿಕೊಂಡದ್ದಕ್ಕಾಗಿ ಸಿಕ್ಕ ಫಲಶ್ರುತಿಗಳು. ಸಾಧನೆಗಳನ್ನು ಮಾಡಿದಾಗ ಅದು ದೊಡ್ಡದಿರಲಿ,ಚಿಕ್ಕದಿರಲಿ ಶುಭಾಶಯಗಳನ್ನು ತಿಳಿಸುವುದು ಹೃದಯದ ಶ್ರೀಮಂತಿಕೆಯನ್ನು ತೋರಿಸುತ್ತದೆ. ಎನ್.ಎಸ್.ಎಸ್. ನಲ್ಲಿ ಸಾವಿರ ಸಾವಿರ ಅವಕಾಶಗಳಿವೆ. ಅವಕಾಶಗಳನ್ನು ಕಬಳಿಸಿ ಬಳಸಿಕೊಳ್ಳುವುದನ್ನು ಕಲಿಯಬೇಕು. ಅದಕ್ಕಾಗಿ ಮಾನಸಿಕವಾಗಿ, ಸಾಮಾಜಿಕವಾಗಿ, ದೈಹಿಕವಾಗಿ ದೃಢರಾಗಬೇಕು.ನಿರಂತರವಾಗಿ ಪ್ರಾಮಾಣಿಕ ಪ್ರಯತ್ನಗಳು ನಿಮ್ಮದಾಗಲಿ ಸಕಾರಾತ್ಮಕ ಸ್ಪೂರ್ತಿ ದೊರೆಯಲಿ” ಎಂದರು.
ಕಾರ್ಯಕ್ರಮದಲ್ಲಿ ಕು.ಚಂದ್ರಿಕಾ ಪೋಷಕರಾದ ಪರಮೇಶ್ವರಿ, ಅಪ್ಪು ನಾಯರ್, ಯೋಜನಾಧಿಕಾರಿಗಳಾದ ಪ್ರೊ.ದೀಪಾ ಆರ್.ಪಿ., ಡಾ.ಮಹೇಶ್ ಕುಮಾರ್ ಶೆಟ್ಟಿ.ಹೆಚ್ ಮತ್ತು ಸ್ವಯಂಸೇವಕರು ಉಪಸ್ಥಿತರಿದ್ದರು.
ಸ್ವಯಂಸೇವಕರಾದ ಶ್ರೇಯಾ ಸ್ವಾಗತಿಸಿ, ನಿಶಾ ವಂದಿಸಿದರು , ಶ್ರೇಯಕುಮಾರಿ ನಿರೂಪಿಸಿದರು.