ಪುದುವೆಟ್ಟು: ಡಿ.16ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ಛದ್ಮವೇಷ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಛದ್ಮವೇಷ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ರಾವ್ ರವರು ತಮ್ಮ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಛದ್ಮವೇಷ ಸ್ಪರ್ಧೆಗೆ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪಗೌಡ ರವರು ವಹಿಸಿಕೊಂಡಿದ್ದರು.
ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಉಷಾ ಹಾಗೂ ಕಾವ್ಯ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ರಾಘವೇಂದ್ರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ಕುಮಾರಿ ವಸಂತಿ ಆಸೀನರಾಗಿದ್ದರು.
ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ ಸುಬ್ರಮಣ್ಯ ರಾವ್ ರವರು ಮಾತನಾಡಿ ಪಠ್ಯ ಚಟುವಟಿಕೆ ಎಷ್ಟು ಮುಖ್ಯವೋ ಅಷ್ಟೇ ಪಠ್ಯತರ ಚಟುವಟಿಕೆಗಳಿಗೆ ಕೂಡ ಆದ್ಯತೆಯನ್ನು ಕೊಟ್ಟಾಗ ಮಗುವಿನ ಬಹುಮುಖ ಪ್ರತಿಭೆ ಹೊರಬರಲು ಸಾಧ್ಯವಾಗುತ್ತದೆ.ವಾರ್ಷಿಕ ಪ್ರತಿಭಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿರುವ ಈ ಛದ್ಮವೇಷ ಸ್ಪರ್ಧೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ತರಬೇಕಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶೀನಪ್ಪ ಗೌಡರವರು ಶಾಲೆಯ ಬಹಳಷ್ಟು ವಿದ್ಯಾರ್ಥಿಗಳು ಈ ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.ಮಕ್ಕಳ ಪೋಷಕರು ಕೂಡ ಅಷ್ಟೇ ಹುಮ್ಮಸ್ಸಿನಿಂದ ಈ ಒಂದು ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದೀರಿ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಛದ್ಮವೇಶ ಸ್ಪರ್ಧೆಯಲ್ಲಿ ತಮ್ಮ ಪ್ರದರ್ಶನವನ್ನು ನೀಡಿದರು.
ಉದ್ಘಾಟಕರಾಗಿ ಆಗಮಿಸಿದ ಸುಬ್ರಹ್ಮಣ್ಯ ರಾವ್ ರವರು ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿಯನ್ನು ನೀಡಿದರು.ಛದ್ಮವೇಷ ಸ್ಪರ್ಧೆಯಲ್ಲಿ ಧರ್ಮಸ್ಥಳ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಉಷಾ ಹಾಗೂ ಕಾವ್ಯ, ಮೇಲಿನಡ್ಕ ಶಾಲೆಯ ಮುಖ್ಯ ಶಿಕ್ಷಕರಾದ ರಾಘವೇಂದ್ರ ಸರ್, ಮಿಯಾರ್ ಶಾಲೆಯ ಶಿಕ್ಷಕಿಯಾದ ಕುಮಾರಿ ವಸಂತಿ ಮುಖ್ಯ ತೀರ್ಪುಗಾರರಾಗಿ ಸಹಕಾರವನ್ನು ನೀಡಿದರು.
ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶೀಲಾ ರವರು ಸ್ವಾಗತಿಸಿ, ಪುಷ್ಪಲತಾ ರವರು ಧನ್ಯವಾದಗೈದ ಕಾರ್ಯಕ್ರಮವನ್ನು, ಸುಜಾತಾ ರವರು ನಿರೂಪಿಸಿದರು.
ಶಾಲೆಯ ಎಲ್ಲಾ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು.