ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಅವರಿಗೆ ಶಾಸಕರು ನಡೆಸಿದ ಸಾರ್ವಜನಿಕ ಅವಮಾನ ವಿರುದ್ಧ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಪೊಲೀಸ್ ಇಲಾಖೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಅತ್ಯಂತ ಖಂಡನೀಯ, ಪೊಲೀಸ್ ಇಲಾಖೆ ತಕ್ಷಣ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದೆ ಉಗ್ರ ರೀತಿಯ ಪ್ರತಿಭಟನೆ ಮಾಡಲಾಗುವುದು ಎಂದು ಮಲೆಕುಡಿಯ ಸಂಘದ ರಾಜ್ಯ ಸಮಿತಿಯ ಜೊತೆ ಕಾರ್ಯದರ್ಶಿ ಜಯರಾಮ ಮತ್ತು ತಾಲೂಕು ಸಮಿತಿಯ ಮಾಜಿ ಅಧ್ಯಕ್ಷ ಎಲ್ಯಣ್ಣ ಮಲೆಕುಡಿಯ ಹೇಳಿದರು.
ಅವರು ಫೆ.24 ರಂದು ಶ್ರೀ ಗುರು ನಾರಾಯಣ ಸಂಕೀರ್ಣದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ನಾವು ಪ್ರತಿಭಟನೆ ನಡೆಸಿದ್ದು ಮಲೆಕುಡಿಯ ಸಂಘದ ನೇತೃತ್ವದಲ್ಲಿ ಅಲ್ಲ ಮೂಲ ನಿವಾಸಿ ಮಲೆಕುಡಿಯ ಸಂಘದ ನೇತೃತ್ವದಲ್ಲಿ, ಜಯಾನಂದ ಮಲೆಕುಡಿಯ ಅವರ ಕಾರ್ಯಕ್ರಮ ಹಾಗೂ ಇತರ ಜನಪರ ಸಂಘಟನೆಗಳ ಪ್ರೇರಣೆಗೊಂಡು ಇತರ ಜನರ ಸಂಘಟನೆಗಳು ಬೆಂಬಲ ಸೂಚಿಸಿದೆ ಎಂದು ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಹರೀಶ್ ಎಳನೀರು ಹೇಳುವ೦ತೆ ಯಾವುದೇ ಕಾರಣಕ್ಕೂ ನಾವು ಮಲೆಕುಡಿಯ ಸಂಘದ ಹೆಸರನ್ನು ಪ್ರತಿಭಟನೆಯ ಹೆಸರಿನಲ್ಲಿ ದುರುಪಯೋಗ ಪಡೆಸಿಕೊಂಡಿರುವುದಿಲ್ಲ, ಮಲೆಕುಡಿಯ ಸಂಘದ ಪ್ರಧಾನಕಾರ್ಯದರ್ಶಿ ಜಯಾನಂದರಿಗೆ ಅವಮಾನವಾದಾಗ ಮೌನ ವಹಿಸಿದ ಜಿಲ್ಲಾಧ್ಯಕ್ಷ ಎಳನೀರು ಅವರು ಶಾಸಕರ ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಿದಾಗ ತುರ್ತಾಗಿ ಪತ್ರಿಕಾಗೋಷ್ಠಿ ನಡೆಸಿದ ಔಚಿತ್ಯವೇನು? ಇವರು ಸಮುದಾಯದೊಳಗೆ ಒಡಕು ಮೂಡಿಸುವ ಜಿಲ್ಲಾಧ್ಯಕ್ಷರ ಕ್ರಮ ಖಂಡನೀಯ ಅವರು ತಕ್ಷಣ ತನ್ನ ಕೊಳಕು ರಾಜಕೀಯ ಕೈ ಬಿಡ ಬೇಕು. ಮಲೆಕುಡಿಯ ಸಂಘದ ಹೆಸರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಸಮುದಾಯವನ್ನು ಒಡೆದಿರುವುದು ಮಾತ್ರವಲ್ಲದೆ ಸಮುದಾಯವೇ ಆರಾಧಿಸಿಕೊಂಡು ಬರುತ್ತಿರುವ ನೂತನ ದೈವಸ್ಥಾನದ ಕೆಲಸ ಆರಂಭವಾಗುವ ಮೊದಲೇ ಬ್ರಹ್ಮಕಲಶ ಸಮಿತಿ ರಚಿಸಿ ಗ್ರಾಮದ ಹಿರಿಯರನ್ನು ಕೈ ಬಿಟ್ಟು ಸಮಿತಿ ರಚಿಸುವ ಮೂಲಕ ದೈವಸ್ಥಾನದಲ್ಲಿ ರಾಜಕೀಯ ನಡೆಸಿರುವುದು ಸರಿಯಲ್ಲ ತಕ್ಷಣ ಈ ಸಮಿತಿಯನ್ನು ವಿಸರ್ಜಿಸಿ ಸರ್ವರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಲಕ್ಷ್ಮಣ ಮಲೆಕುಡಿಯ, ಪದ್ಮನಾಭ ಮಲೆಕುಡಿಯ, ಜಯಾನಂದ ಪಿಲಿಕಲ, ಪುಷ್ಪಾ ನೆರಿಯ, ಮಹಾಬಲ ಮಲೆಕುಡಿಯ, ಸುಕುಮಾರ್, ನೀಲಯ್ಯ ಮಲೆಕುಡಿಯ ಉಪಸ್ಥಿತರಿದ್ದರು.