ರೋಹಿತ್ ಚಕ್ರತೀರ್ಥರನ್ನು ವೇಣೂರು ಬ್ರಹ್ಮಕಲಶೋತ್ಸವಕ್ಕೆ ಆಹ್ವಾನಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿರೋಧ

0

ಬೆಳ್ತಂಗಡಿ : ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ರೋಹಿತ್ ಚಕ್ರತೀರ್ಥರನ್ನು ಆಹ್ವಾನಿಸಿರುವುದು ಸರಿಯಲ್ಲ. ಒಂದು ವೇಳೆ ಬಂದರೆ ಕಪ್ಪು ಬಾವುಟ ಪ್ರದರ್ಶಿಸಿ ತೀವ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ಬೆಳ್ತಂಗಡಿ ಶಾಖೆಯ ಪ್ರಧಾನ ಸಂಚಾಲಕ ಕೆ. ನೇಮಿರಾಜ್ ಮತ್ತು ರಾಜ್ಯ ಸಮಿತಿಯ ಸಂಘಟನಾ ಸಂಚಾಲಕ ಚಂದು ಎಲ್. ಹೇಳಿದರು.

ಅವರು ಫೆ.24 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಹತ್ತನೇ ತರಗತಿ ಪಠ್ಯದಿಂದ ತೆಗೆದುಹಾಕಿದ ಪುಸ್ತಕ ಪರಿಷ್ಕರಣೆ ಸಮಿತಿಯ ಮುಖ್ಯಸ್ಥರಾದ ಚಕ್ರತೀರ್ಥರನ್ನು ಶಿಕ್ಷಣ ಮತ್ತು ಧರ್ಮ ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಲು ಬ್ರಹ್ಮಕಲಶೋತ್ಸವ ಸಮಿತಿಯವರು ಕರೆದಿರುವುದು ಸರಿಯಲ್ಲ. ಇದಕ್ಕೆ ಸಂಘಟನೆಯ ವಿರೋಧವಿದೆ.
ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ರಾಷ್ಟ್ರ ಕವಿ ಕುವೆಂಪು, ರಾಣಿ ಅಬ್ಬಕ್ಕ ಮತ್ತು ಕಯ್ಯಾರ ಕಿಂಞಣ್ಣ ರೈ ಮುಂತಾದ ದಾರ್ಶನಿಕರ ವ್ಯಕ್ತಿತ್ವಕ್ಕೆ ಕುಂದು ತರುವ ರೀತಿಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ನಡೆಸಿ ಕೊನೆಗೆ ಸರಕಾರದ ಆದೇಶದಂತೆ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯಿಂದ ಪದಚ್ಯುತಗೊಂಡು, ವಿಕೃತ ವಿಚಾರಧಾರೆಗಳನ್ನು ಹೊಂದಿರುವ ರೋಹಿತ್ ಚಕ್ರತೀರ್ಥರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು’ ಎಂದು ಬ್ರಹ್ಮ ಕಲಶೋತ್ಸವ ಸಮಿತಿಯವರಲ್ಲಿ ಮನವಿ ಮಾಡುತ್ತೇವೆ.
ಒಂದು ವೇಳೆ ಬಂದರೆ ಕಪ್ಪು ಬಾವುಟವನ್ನು ಪ್ರದರ್ಶಿಸಿ ತೀವ್ರವಾದ ಪ್ರತಿರೋಧವನ್ನು ವ್ಯಕ್ತ ಪಡಿಸುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಬೃಹತ್‌ ಪ್ರತಿಭಟನೆ ಸಿದ್ಧ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹೋಬಳಿ ಸಂಚಾಲಕ ವಿಜಯ ಕುಮಾರ್, ತಾಲೂಕು ಶಾಖೆಯ ಸಂಘಟನಾ ಸಂಚಾಲಕ ಜಯಾನಂದ ಕೊಯ್ಯೂರು, ನಾಗರಾಜ್ ಎಸ್. ಲಾಯಿಲ, ದ. ಸಂ. ಸ. ಕಾರ್ಯಕರ್ತ ಎಸ್. ಪ್ರಭಾಕರ ಶಾಂತಿಕೋಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here