ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.19 ರಂದು ನಿಧನರಾದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಹಾಗೂ ಶಾಲಾ ಸಂಸ್ಥಾಪಕ ಯು. ವಿಜಯ ರಾಘವ ಪಡ್ವೆಟ್ನಾಯ ರವರಿಗೆ ಶ್ರದ್ಧಾಂಜಲಿ ಸಭೆಯು ಫೆ.20 ರಂದು ನಡೆಯಿತು.
ರಾಜ್ಯ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಬಿ. ಸೋಮಶೇಖರ ಶೆಟ್ಟಿ ಯವರು ವಿಜಯ ರಾಘವ ಪಡ್ವೆಟ್ನಾಯ ರವರ ಸರಳ ಸಜ್ಜನಿಕೆ, ಸೌಜನ್ಯ ಪೂರ್ಣ ವ್ಯಕ್ತಿತ್ವ, ಸಮಾಜದ ಎಲ್ಲಾ ಜಾತಿ, ಮತ, ಧರ್ಮದವರ ಬಗ್ಗೆ ಇದ್ದ ಪ್ರೀತಿ, ಗೌರವಗಳ ಬಗ್ಗೆ ವಿವರಿಸಿದರು.
ಧ.ಮ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿ, ಅನೇಕ ಸಂಘ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿ, ಶ್ರೀ ಜನಾರ್ದನ ಸ್ವಾಮಿ ದೇವಳದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವವನ್ನು ನಾಡಿಗೇ ಮಾದರಿಯಾಗಿ ಮಾಡಿದ ಬಗ್ಗೆ ವಿವರಿಸಿ, ಶ್ರೀ ಕೃಷ್ಣಾನುಗ್ರಹ, ಧರ್ಮಭಾಷಣ, ಸಮಾಜ ರತ್ನ, ಅರಣ್ಯ ಮಿತ್ರ ಹಾಗೂ ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳಿಂದ ಪುರಸ್ಕೃತರಾದ ವಿಜಯ ರಾಘವ ಪಡ್ವೆಟ್ನಾಯ ರವರಿಗೆ ಶಾಲೆಯ ಪರವಾಗಿ ನುಡಿನಮನ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯಕ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವಿಜಯ ಗೌಡ, ಸದಸ್ಯರೂ, ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.