ಬೆಳ್ತಂಗಡಿ : ಸರಕಾರಿ ಪದವಿ ಪೂರ್ವ ಕಾಲೇಜಿನ ರೂ.3.5 ಕೋಟಿ ವೆಚ್ಚದ ಅನುದಾನದಲ್ಲಿ 12 ತರಗತಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಜ.7 ರಂದು ಶಿಲಾನ್ಯಾಸ ನೆರವೇರಿಸಿದರು. ಇದರೊಂದಿಗೆ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು, ವಿದ್ಯಾರ್ಥಿಗಳ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭವು ನಡೆಯಿತು. ಸಮಾರಂಭದ ಉದ್ಘಾಟನಾ ಭಾಷಣ ಮಾಡಿ ಮಾತನಾಡುತ್ತಾ ಯಾವುದೇ ಒಂದು ಸರಕಾರಿ ಪದವಿ ಪೂರ್ವಕಾಲೇಜಿಗೆ ಏಕಕಾಲದಲ್ಲಿ 12 ತರಗತಿ ಕೊಠಡಿಗಳನ್ನು ಮಂಜೂರು ಮಾಡಿರುವುದು ಇದೇ ಮೊದಲೆಂದು ತಮ್ಮ ಯಶೋಗಾಥೆಯನ್ನು ಸಭಿಕರೊಂದಿಗೆ ಹಂಚಿಕೊಂಡರು. ಬೆಳ್ತಂಗಡಿ ಪದವಿಪೂರ್ವ ಕಾಲೇಜನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಕಾಲೇಜು ಆಗಿ ಮೂಡಿ ಬರುವಂತೆ ಎಲ್ಲರೂ ಶ್ರಮ ವಹಿಸುವಂತೆ, ಸಹಕರಿಸುವಂತೆ ಕೋರಿದರು. ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಜಯಾನಂದ ಗೌಡ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ನ್ಯಾಯವಾದಿ ಬಿ.ಕೆ.ಧನಂಜಯ್ ರಾವ್, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಉದ್ಯಮಿಗಳಾದ ರೊನಾಲ್ಡ್ ಲೋಬೊ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಆನಂದ ಡಿ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಇವರು ವರದಿ ವಾಚಿಸಿದರು. ಪ್ರಾಂಶುಪಾಲ ಸುಕುಮಾರ ಜೈನ್ ಸ್ವಾಗತಿಸಿ ಪ್ರೌಢಶಾಲಾ ಅಧ್ಯಾಪಕಿ ಪೂರ್ಣಿಮಾ ಭಟ್ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಗಣೇಶ್ ಭಟ್ ನಿರ್ವಹಿಸಿದರು.