ಧರ್ಮಸ್ಥಳ: ಶ್ರೀ. ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಅದ್ದೂರಿಯಾಗಿ ಪ್ರತಿಭಾ ದಿನಾಚರಣೆಯನ್ನು ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ವಿವಿಧ ಬಣ್ಣದ ದಿರಿಸಿನೊಂದಿಗೆ ಸಂಭ್ರಮದಿಂದ ಓಡಾಡಿಕೊಂಡಿದ್ದರು. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯ ಒಂದು ಭಾಗವಾಗಿ ಹಾಗೂ ಪ್ರತಿಭೆಗಳನ್ನು ಹೊರಹೊಮ್ಮಲು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಸಲುವಾಗಿ ಈ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಹಾಗೂ ಬೆಳ್ತಂಗಡಿ ತಾಲೂಕಿನ ಬಿ ಇ ಓ ಆಗಿರುವ ವಿರೂಪಾಕ್ಷಪ್ಪ ಇವರ ಅಮೃತ ಹಸ್ತದಿಂದ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಮಾತನಾಡಿದ ಬೆಳ್ತಂಗಡಿ ತಾಲೂಕಿನ ಬಿಇಓ ಆಗಿರುವ ವಿರೂಪಾಕ್ಷರಪ್ಪ ಶಾಲೆಯ ಸಾಧನೆ ಹಾಗೂ ವಿದ್ಯಾರ್ಥಿಗಳ ಕುರಿತಾಗಿ ಮಾತನಾಡಿ ಹೆತ್ತವರು ನಿಮಗೆ ಜೀವ ಕೊಟ್ಟರೆ ಶಿಕ್ಷಕರು ನಿಮಗೆ ಜೀವನವನ್ನು ಕೊಡುತ್ತಾರೆ ಹೀಗಾಗಿ ಈ ಇಬ್ಬರನ್ನು ನಿಮ್ಮ ಜೀವನದಲ್ಲಿ ಎಂದಿಗೂ ಮರೆಯದಿರಿ. ಮುಂದೆ ಗುರು ಇದ್ದರೆ ಗುರು ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಆ ಗುರಿಯನ್ನು ಖಂಡಿತವಾಗಿಯೂ ತಲುಪಲು ಸಾಧ್ಯ ಎಂದು ನುಡಿದು ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧರ್ಮಸ್ಥಳದ ಡಾಕ್ಟರ್ ಹೇಮಾವತಿ ವಿ ಹೆಗ್ಡೆಯವರು ಆಗಮಿಸಿದ್ದರು. ಇವರು ಶಾಲಾ ಹಸ್ತಪ್ರತಿ ಪತ್ರಿಕೆಯಾದ ಟ್ಯಾಲೆಂಟ್ ಹಾಗೂ ಕನಸು ಇವುಗಳನ್ನು ಅನಾವರಣಗೊಳಿಸಿದರು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಜೀವನ ಎನ್ನುವಂತದ್ದು ಪ್ರತಿಗಳಿಗೆಯೂ ಹೊಸ ಹೊಸ ಅವಕಾಶಗಳನ್ನು ದೊರಕಿಸಿಕೊಡುತ್ತದೆ. ಪ್ರತಿ ಬಾರಿಯೂ ಹೊಸತನವನ್ನು ಕಲಿಯಲು ಸಿದ್ಧರಿರಬೇಕಾಗುತ್ತದೆ. ಬರವಣಿಗೆಯು ವಿದ್ಯಾರ್ಥಿ ಜೀವನದ ಪ್ರಮುಖ ಅಂಗ. ಶಾಲೆಯ ಮ್ಯಾಗಜಿನ್ ನಲ್ಲಿ ತಮ್ಮ ಸ್ವಂತ ಹಸ್ತಕ್ಷರದಲ್ಲಿ ಬರೆದ ಇಂದಿನ ಚಿಕ್ಕಪುಟ್ಟ ಸ್ವಂತ ಬರವಣಿಗೆಯೇ ಮುಂದಿನ ದೊಡ್ಡ ಬರವಣಿಗೆಗೆ ನಾಂದಿ. ಆ ಮೂಲಕ ಸಾಹಿತ್ಯ ಸೇವೆ ಮಾಡುವಂತಾಗಲಿ ಎಂದು ನುಡಿದು ಶುಭ ಹಾರೈಸಿದರು.
ಎಸ್ ಎಸ್ ಎಲ್ ಸಿ ಡಿಸ್ಟಿಂಕ್ಷನ್ ಪಡೆದವರು, ವಿಶೇಷ ಸಾಧನೆ ಮಾಡಿದವರನ್ನು, ತರಗತಿಯಲ್ಲಿ ವಿಶೇಷ ಸಾಧನೆ ಮಾಡಿದವರಿಗೆ, ರಾಜ್ಯಮಟ್ಟ ಜಿಲ್ಲಾ ಮಟ್ಟ ಇತ್ಯಾದಿಗಳಲ್ಲಿ ಸಾಧನೆ ಮಾಡಿದವರಿಗೆ ಹೀಗೆ ಅನೇಕ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬುವ ಕೆಲಸವನ್ನು ಮಾಡಲಾಯಿತು.
ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ ರಿಂಗ್ ಡ್ಯಾನ್ಸ್ ಯಕ್ಷಗಾನ ಫ್ಯಾಷನ್ ನೃತ್ಯ ಯೋಗ ನೃತ್ಯ ಹೀಗೆ ವಿವಿಧ ಪ್ರಕಾರದ ನೃತ್ಯಗಳನ್ನು ಪ್ರದರ್ಶಿಸಿದರು. ಈ ಬಾರಿ ವಿವಿಧತೆಯನ್ನು ಕಲಿಯಿರಿ ಹಾಗೂ ಏಕತೆಯನ್ನು ತನ್ನಿರಿ ಎಂಬ ವಿಷಯದ ಕುರಿತು ನೃತ್ಯ ಪ್ರದರ್ಶನವನ್ನು ನೀಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಹರೀಶ್ ಎಚ್ ವೈ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಮಾನವ ಸಂಪನ್ಮೂಲ ಅಧಿಕಾರಿಯಾಗಿರುವ ಕೃಷ್ಣಮಯ್ಯ, ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾಗಿರುವ ಸೋಮಶೇಖರ್ ಬಿ ಶೆಟ್ಟಿ, ಬೆಳ್ತಂಗಡಿ ತಾಲೂಕಿನ ಶಿಕ್ಷಣ ಸಂಯೋಜಕರಾಗಿರುವ ಆಗಿರುವ ಚೇತನ ಹಾಗೂ ಸಿ.ಆರ್.ಪಿ. ಆಗಿರುವ ಪ್ರತಿಮಾ, ದೇವಳದ ಮಣೆಗಾರರು ಆಗಿರುವ ವಸಂತ ಭಟ್, ದೇವಳದ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ರಾವ್, ಧರ್ಮಸ್ಥಳ ಉಗ್ರಾಣದ ನಿವೃತ್ತ ಕಾರ್ಯನಿರ್ವಹಣಾಧಿಕಾರಿಯಾಗಿರುವ ಭುಜಬಲಿ ಜೈನ್, ಗ್ರಾಮ ಪಂಚಾಯತ್ ಸದಸ್ಯರಾಗಿರುವಂತಹ ಶ್ರೀನಿವಾಸ್ ರಾವ್,ಉಜಿರೆ ಸಿಬಿಎಸ್ಸಿ ಇದರ, ಮುಖ್ಯೋಪಾಧ್ಯಾಯರಾಗಿರುವ ಮನಮೋಹನ್ ನಾಯಕ್ , ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಮುಖ್ಯ ಶಿಕ್ಷಕಿ ಆಗಿರುವ ಹೇಮಲತಾ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಸುಬ್ರಹ್ಮಣ್ಯ ರಾವ್ , ಧರ್ಮಸ್ಥಳ ಅನ್ನ ಛತ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಸುಬ್ರಮಣ್ಯ ಪ್ರಸಾದ್, ಹೀಗೆ ಅನೇಕ ಗಣ್ಯಾತಿ ಗಣ್ಯರು ಭಾಗವಹಿಸಿದ್ದರು.
ಶಾಲೆಯ ಕಿರುಪರಿಚಯವನ್ನು ಶಾಲೆಯ ನಾಯಕಿಯಾಗಿರುವ ಕುಮಾರಿ ಪ್ರಾಂಜಲಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ.ಎಂ.ವಿ. ಇವರ ನಾಯಕತ್ವದಲ್ಲಿ ವಿದ್ಯಾರ್ಥಿಗಳ ನೃತ್ಯ ಸಂಯೋಜನೆಯನ್ನು ಶಾಲಾ ಶಿಕ್ಷಕ ವೃಂದ ಸಂಪೂರ್ಣ ಮುತುವರ್ಜಿಯಿಂದ ತಾವೇ ಮಾಡಿದರು. ವಿದ್ಯಾರ್ಥಿಗಳ ನೃತ್ಯಕ್ಕೆ ಮತ್ತಷ್ಟು ಮೆರುಗು ತಂದಿದ್ದು ಹೊಳ್ಳ ಆರ್ಟ್ಸ್ ನವರು ಮಾಡಿದ ಮುಖ ವರ್ಣಿಕೆ. ತಮ್ಮ ಮಕ್ಕಳ ಸಾಧನೆ ಹಾಗೂ ಪ್ರತಿಭಾ ಪ್ರದರ್ಶನವನ್ನು ಕಂಡು ಹೆತ್ತವರು ಸಂಭ್ರಮಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.