ನ.1 : ದಿ. ಡಾ. ಕೆ. ಗೋವಿಂದ ಭಟ್ ಸಂಸ್ಮರಣ ಸಾಂಸ್ಕೃತಿಕ ಯಕ್ಷಕಲಾ ಕೇಂದ್ರದ ಉದ್ಘಾಟನೆ

0

ನಿಡ್ಲೆ : ಉಮಾಮಹೇಶ್ವರ ಯಕ್ಷಕಲಾ ಇಷುಧಿ ವತಿಯಿಂದ ‘ಯಕ್ಷಗಾನ ವೈಭವ–ಯಕ್ಷ ವಚೋ ವೈಭವ’ ಹಾಗೂ ದಿ. ಡಾ. ಕೆ. ಗೋವಿಂದ ಭಟ್ ಸಂಸ್ಮರಣ ಸಾಂಸ್ಕೃತಿಕ ಯಕ್ಷಕಲಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನ.1ರಂದು ನಿಡ್ಲೆ ಬರಂಗಾಯದ ಮಚ್ಚಳೆ ನಾಗವೇಣಿ ಅಮ್ಮ ಸಭಾಭವನದಲ್ಲಿ ನಡೆಯಲಿದೆ.

ಯಕ್ಷಗಾನ ರಂಗಭೂಮಿಯ ಹಿರಿಯ ಕಲಾವಿದ ದಿ. ಡಾ. ಕೆ. ಗೋವಿಂದ ಭಟ್ ಅವರ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ದಿನವಿಡೀ ಯಕ್ಷಗಾನ ವೈಭವ ಹಾಗೂ ಯಕ್ಷ ವಚೋ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶ್ರೀ ಉಮಾಮಹೇಶ್ವರ ಯಕ್ಷಕಲಾ ಇಷುಧಿಯ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಂಗವಾಗಿ ‘ಯಕ್ಷ ದಶಾವತಾರಿ’ ಎಂದೇ ಖ್ಯಾತರಾಗಿದ್ದ ದಿ. ಡಾ. ಕೆ. ಗೋವಿಂದ ಭಟ್ ಸಂಸ್ಮರಣ ಸಾಂಸ್ಕೃತಿಕ ಯಕ್ಷಕಲಾ ಕೇಂದ್ರವನ್ನು ಉದ್ಘಾಟಿಸಲಾಗುವುದು.

ನ.1ರ ಭಾನುವಾರ ಬೆಳಿಗ್ಗೆ 10.30ರಿಂದ ಸಂಜೆ 7 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕಾರದ ಕಲಾವಿದ ಈಶ್ವರ ಪ್ರಸಾದ್‌ ಪಿ.ವಿ. ತಿಳಿಸಿದ್ದಾರೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಗಾನ ವೈಭವ ನಡೆಯಲಿದ್ದು, ಮಧ್ಯಾಹ್ನ 2.30ರಿಂದ ಸಂಜೆ 4 ಗಂಟೆಯವರೆಗೆ ‘ಯಕ್ಷ–ವಚೋ–ವೈಭವ’ದ ಅಂಗವಾಗಿ ಅಕ್ಷಯ ರಾಮಾಯಣದ ಆಖ್ಯಾನ ಪ್ರಸ್ತುತಗೊಳ್ಳಲಿದೆ. ಬಳಿಕ ಸಂಜೆ 4 ಗಂಟೆಯಿಂದ ಯಕ್ಷಗಾನ ಕಾರ್ಯಕ್ರಮಗಳು ಮುಂದುವರಿಯಲಿವೆ.

ಹಿರಿಯ ಕಲಾವಿದರ ಸ್ಮರಣಾರ್ಥ ಸಾಂಸ್ಕೃತಿಕ ಕೇಂದ್ರಯಕ್ಷಗಾನ ರಂಗಭೂಮಿಯಲ್ಲಿ ಸುಮಾರು ಏಳು ದಶಕಗಳ ಕಾಲ ಕಲಾಸೇವೆ ಸಲ್ಲಿಸಿ ಯಕ್ಷಗಾನದ ಶ್ರೀಮಂತಿಕೆಯನ್ನು ಹೆಚ್ಚಿಸಿದ ದಿ. ಡಾ. ಕೆ. ಗೋವಿಂದ ಭಟ್ ಅವರ ರಂಗ ಸಂಪ್ರದಾಯವನ್ನು ಉಳಿಸಿ ಬೆಳೆಸುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ. ಹೊಸ ಪೀಳಿಗೆಯ ಕಲಾಸಕ್ತರಿಗೆ ಹಾಗೂ ಹಿರಿಯ ಕಲಿಕಾಸಕ್ತರಿಗೂ ಉಚಿತ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ.

ಯಕ್ಷಗಾನದ ನಾಟ್ಯ, ಅಭಿನಯ, ವೇಷಭೂಷಣ, ಮಾತುಗಾರಿಕೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ತರಬೇತಿ ನೀಡುವ ಮೂಲಕ ಸಾಂಪ್ರದಾಯಿಕ ಯಕ್ಷಗಾನ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಉದ್ದೇಶಿಸಲಾಗಿದೆ.ಗಣ್ಯರ ಉಪಸ್ಥಿತಿಕಾರ್ಯಕ್ರಮದಲ್ಲಿ ಯಕ್ಷಗಾನ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಯಕ್ಷಗಾನ ಕ್ಷೇತ್ರದ ಕಲಾವಿದರು, ಭಾಗವತರು, ಚೆಂಡೆ–ಮದ್ದಳೆ ವಾದಕರು ಹಾಗೂ ತಾಳಮದ್ದಳೆಯ ಅರ್ಥಧಾರಿಗಳು ತಮ್ಮ ಕಲಾಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.ದಾನಿಗಳ ಸಹಕಾರಕ್ಕೆ ಮನವಿದಿನವಿಡೀ ನಡೆಯುವ ಈ ಕಲಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕೇಂದ್ರದ ಉದ್ದೇಶಿತ ಚಟುವಟಿಕೆಗಳಿಗೆ ಧ್ವನಿವರ್ಧಕ ವ್ಯವಸ್ಥೆ, ಕಲಾವಿದರ ಸಂಭಾವನೆ, ಊಟೋಪಚಾರ, ಚೆಂಡೆ–ಮದ್ದಳೆ ಸೇರಿದಂತೆ ವಿವಿಧ ವೆಚ್ಚಗಳಿವೆ.

ಈ ಹಿನ್ನೆಲೆಯಲ್ಲಿ ಕಲಾಪ್ರಿಯರು, ದಾನಿಗಳು, ಬಂಧುಗಳು ಹಾಗೂ ಸಾರ್ವಜನಿಕರು ಆರ್ಥಿಕ ಸಹಕಾರ ನೀಡಿ ಭಾರತೀಯ ಸಾಂಸ್ಕೃತಿಕ ಪರಂಪರೆಯ ಭಾಗವಾಗಿರುವ ಯಕ್ಷಗಾನ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಕೈಜೋಡಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ. ಸಹಕಾರ ನೀಡಲು ಇಚ್ಛಿಸುವವರು ಈ ಕೆಳಗಿನ ಬ್ಯಾಂಕ್ ಖಾತೆಯ ಮೂಲಕ ದೇಣಿಗೆ ನೀಡಬಹುದು ಎಂದು ತಿಳಿಸಲಾಗಿದೆ.

ದೇಣಿಗೆ ವಿವರಗಳು: ಖಾತೆದಾರರು: Ishwara Prasad PV ಬ್ಯಾಂಕ್: Canara Bank – ಖಾತೆ ಸಂಖ್ಯೆ: 02462200002367, IFSC: CNRB0010246, ಫೋನ್‌ಪೇ: 9591784262 ಹೆಚ್ಚಿನ ಮಾಹಿತಿಗೆ : ಈಶ್ವರಪ್ರಸಾದ್ ಪಿ.ವಿ., ಯಕ್ಷಗಾನ ಕಲಾವಿದರು, ಮೊಬೈಲ್: 9591784262, 9481211574 ಅವರನ್ನು ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here