ಸೌಜನ್ಯ ಪ್ರಕರಣ: ಹಿಂದಿನ ತನಿಖೆಗಳ ಲೋಪದೋಷ ಪತ್ತೆಗೆ ಎಸ್‌ಐಟಿ ಕಾರ್ಯಾಚರಣೆ-ಕೇಸ್ ಡೈರಿ, ಮೂಲ ದಾಖಲೆ, ಚಾರ್ಜ್‌ಶೀಟ್, ತನಿಖಾಧಿಕಾರಿ ದಾಖಲಿಸಿದ್ದ ಮಾಹಿತಿ ಸಂಗ್ರಹ-ಸುಪ್ರೀಂಕೋರ್ಟ್‌ನಲ್ಲಿ ಉಲ್ಲೇಖಿಸಲಾದ ಸಂಭಾವ್ಯ ಸಾಕ್ಷಿಗಳ ಕುರಿತ ಮಾಹಿತಿಗಳ ಪರಿಶೀಲನೆ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯಾಗಿದ್ದು ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಕು. ಸೌಜನ್ಯ(೧೭) ಅವರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಹಿಂದೆ ನಡೆದಿರುವ ತನಿಖೆಗಳ ಲೋಪದೋಷಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಸುತ್ತಿದ್ದಾರೆ.
ಎಸ್‌ಐಟಿ ಮುಖ್ಯಸ್ಥ ಎನ್. ಶಶಿಕುಮಾರ್ ಮತ್ತು ತನಿಖಾಧಿಕಾರಿ ಲೋಕೇಶ್ ಜಗಲಸಾರ್ ಅವರ ನೇತೃತ್ವದಲ್ಲಿ ಮಂಗಳೂರಿನ ಕಚೇರಿಯಲ್ಲಿ ಈಗಾಗಲೇ ಹಲವು ಸುತ್ತಿನ ಚರ್ಚೆ ನಡೆಸಲಾಗಿದ್ದು ಹೊಸದಾಗಿ ತನಿಖೆ ಆರಂಭಿಸುವ ಮುನ್ನ ಹಿಂದಿನ ತನಿಖೆಗಳ ಪ್ರತಿಯೊಂದು ಹಂತವನ್ನೂ ಪರಿಶೀಲಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಎಸ್‌ಐಟಿಯಲ್ಲಿರುವ ಐಪಿಎಸ್ ಅಧಿಕಾರಿಗಳಾದ ಎನ್. ಶಶಿಕುಮಾರ್, ಲೋಕೇಶ್ ಜಗಲಸಾರ್, ನಿಶಾ ಜೇಮ್ಸ್ ಮತ್ತು ಸುಧೀರ್ ಕುಮಾರ್‌ರೆಡ್ಡಿ ಅವರು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ಬೆಳ್ತಂಗಡಿ ಠಾಣಾ ಪೊಲೀಸರು, ಸಿಐಡಿ ಮತ್ತು ಸಿಬಿಐ ನಡೆಸಿದ್ದ ತನಿಖೆಗಳಲ್ಲಿನ ಲೋಪದೋಷಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸುತ್ತಿದ್ದಾರೆ. ಜತೆಗೆ ಸಹಾಯಕ ತನಿಖಾಧಿಕಾರಿಗಳಿಗೆ ಈಗಾಗಲೇ ಹಂಚಿಕೆ ಮಾಡಲಾಗಿರುವ ವಿವಿಧ ಜವಾಬ್ದಾರಿಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ದಾಖಲೆಗಳ ಸಮಗ್ರ ಪರಿಶೀಲನೆ: ಪ್ರಕರಣಕ್ಕೆ ಸಂಬಂಧಿಸಿದ ಕೇಸ್ ಡೈರಿ, ಮೂಲ ದಾಖಲೆಗಳು, ಚಾರ್ಜ್‌ಶೀಟ್ ಹಾಗೂ ತನಿಖಾಧಿಕಾರಿಗಳು ದಾಖಲಿಸಿರುವ ಮಾಹಿತಿಗಳನ್ನು ಎಸ್‌ಐಟಿ ಪರಿಶೀಲಿಸುತ್ತಿದೆ. ಹಿಂದಿನ ತನಿಖಾಧಿಕಾರಿಗಳು ಯಾವ ಕ್ರಮಗಳನ್ನು ಕೈಗೊಂಡಿದ್ದರು. ಯಾವ ಅಂಶಗಳನ್ನು ಪರಿಶೀಲಿಸಿರಲಿಲ್ಲ. ಯಾವುದಾದರೂ ಸುಳಿವುಗಳನ್ನು ಕೈ ಬಿಟ್ಟಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ದಾಖಲೆಗಳ ಆಧಾರದಲ್ಲಿ ಗುರುತಿಸುತ್ತಿದ್ದಾರೆ. ಪ್ರತಿಯೊಂದು ತನಿಖಾ ಸಂಸ್ಥೆಯ ಕಾರ್ಯ ವೈಖರಿಯನ್ನು ಪ್ರತ್ಯೇಕವಾಗಿ ದಾಖಲಿಸಿ ತನಿಖೆಯ ವಿವಿಧ ಹಂತಗಳಲ್ಲಿ ಅನುಸರಿಸಲಾದ ವಿಧಾನಗಳನ್ನು ಹೋಲಿಕೆ ಮಾಡಲಾಗುತ್ತಿದೆ. ಪತ್ತೆಯಾಗುವ ಪ್ರತಿಯೊಂದು ಲೋಪಕ್ಕೆ ಆಧಾರವೇನು, ಅದರಿಂದ ಪ್ರಕರಣದ ತನಿಖೆಯ ಮೇಲೆ ಯಾವ ಪರಿಣಾಮ ಉಂಟಾಗಿರಬಹುದು, ಈಗ ಅದನ್ನು ಸರಿಪಡಿಸಲು ಸಾಧ್ಯವಿದೆಯೇ. ಘಟನೆಯ ಸಂದರ್ಭದಲ್ಲಿದ್ದ ಅಥವಾ ಪ್ರಕರಣಕ್ಕೆ ಸಂಬಂಧಿಸಿರಬಹುದಾದ ವಸ್ತುಗಳ ಕುರಿತು ಹಿಂದಿನ ತನಿಖೆಗಳಲ್ಲಿ ಏನೆಲ್ಲ ಕ್ರಮ ಎಂಬುದನ್ನು ಕೈಗೊಳ್ಳಲಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವುದು ಈ ಪರಿಶೀಲನೆಯ ಉzಶವಾಗಿದೆ.
ಡಿಎನ್‌ಎ ಪರಿಶೀಲನೆ: ಸೌಜನ್ಯ ಪ್ರಕರಣದಲ್ಲಿ ಸಂಗ್ರಹಿಸಲಾದ ಡಿಎನ್‌ಎ ಮಾದರಿಗಳ ಮೂಲ ದಾಖಲೆಗಳು, ಅವುಗಳ ಸಂಗ್ರಹಣೆ, ಪ್ರಯೋಗಾಲಯಕ್ಕೆ ಸಾಗಣೆ ಹಾಗೂ ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳನ್ನು ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ೨೦೧೨ರ ಅಕ್ಟೋಬರ್ ೧೦ರಂದು ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ಸೌಜನ್ಯ ಅವರ ಮೃತದೇಹದ ಪಕ್ಕ ಪತ್ತೆಯಾಗಿದ ಛತ್ರಿ, ಚಪ್ಪಲಿ, ಒಳ ಉಡುಪು ಸೇರಿದಂತೆ ಇತರ ವೈಯಕ್ತಿಕ ವಸ್ತುಗಳ ಹುಡುಕಾಟ, ಜಪ್ತಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳನ್ನೂ ಪರಸ್ಪರ ಹೋಲಿಕೆ ಮಾಡಲಾಗುತ್ತಿದೆ

ಸೌಜನ್ಯಳನ್ನು ಕೊನೆಯದಾಗಿ ನೋಡಿದ ಸಂಬಂಧಿಕರು ಹಾಗೂ ಸ್ಥಳೀಯರು ನೀಡಿದ್ದ ಹೇಳಿಕೆಗಳನ್ನು ಮರು ಪರಿಶೀಲಿಸುವುದರ ಜತೆಗೆ ಸುಪ್ರೀಂಕೋರ್ಟ್‌ನಲ್ಲಿ ಉಲ್ಲೇಖಿಸಲಾದ ಎಂಟು ಸಂಭಾವ್ಯ ಸಾಕ್ಷಿಗಳ ಕುರಿತ ಮಾಹಿತಿಯನ್ನೂ ಪರಿಶೀಲನೆ ಮಾಡಲಾಗುತ್ತಿದೆ. ಪೊಲೀಸರಿಗೆ ನೀಡಿದ ಹೇಳಿಕೆಗಳು, ನ್ಯಾಯಾಲಯದಲ್ಲಿ ದಾಖಲಾದ ಸಾಕ್ಷ್ಯಗಳು ಹಾಗೂ ನಂತರ ನೀಡಲಾದ ಹೇಳಿಕೆಗಳು, ಘಟನೆ ನಡೆದ ಆಸುಪಾಸಿನಲ್ಲಿ ಅಂದು ಸಿಸಿ ಟಿವಿ ಕಾರ್ಯ ನಿರ್ವಹಿಸುತ್ತಿದ್ದವೇ, ಅವುಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳು ಲಭ್ಯವಿವೆಯೇ ಎಂಬ ಅಂಶವನ್ನೂ ಪರಿಶೀಲಿಸಲಾಗುತ್ತಿದೆ. ಜತೆಗೆ ಅಂದಿನ ಮೊಬೈಲ್ ಟವರ್‌ಡಂಪ್ ದಾಖಲೆಗಳನ್ನು ಸಂಗ್ರಹಿಸಲಾಗಿತ್ತೇ. ಈಗ ಅವುಗಳ ಸ್ಥಿತಿ ಏನು ಎಂಬುದರ ಬಗ್ಗೆಯೂ ಪರಿಶೀಲನೆ ನಡೆಯಲಿದೆ. ಸೌಜನ್ಯ ಅವರ ಕುಟುಂಬ ಹಿಂದೆ ಹೆಸರಿಸಿದ್ದ ವ್ಯಕ್ತಿಗಳ ಲಭ್ಯವಿರುವ ದಾಖಲೆಗಳನ್ನು ಮರು ಪರಿಶೀಲಿಸುವುದರ ಜತೆಗೆ ಯಾವ ಸಾಕ್ಷಿಯನ್ನು ವಿಚಾರಣೆ ಮಾಡಲಾಗಿತ್ತು, ಯಾರನ್ನು ವಿಚಾರಣೆ ಮಾಡಿರಲಿಲ್ಲ ಮತ್ತು ಅದಕ್ಕೆ ಕಾರಣವೇನು ಎಂಬುದನ್ನೂ ಪರಿಶೀಲಿಸಲಾಗುತ್ತದೆ. ಪ್ರಕರಣದ ಮರು ತನಿಖೆಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರಿಂದಲೂ ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here