ಸೌತಡ್ಕ ದೇವಸ್ಥಾನದ ಮುಂಭಾಗದಲ್ಲಿ ಗಲಾಟೆ, ಮಹಿಳೆಯರ ಮೇಲಿನ ಹಲ್ಲೆ ಖಂಡನೀಯದೇವಸ್ಥಾನದ ಜಮೀನು ಅತಿಕ್ರಮಣ ತೆರವಿಗೆ ಆಗ್ರಹ: ಶ್ರೀ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಅಧ್ಯಕ್ಷ ಪ್ರಶಾಂತ ರೈ ಗೋಳಿತೊಟ್ಟು

0

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ನಡೆದ ಗಲಾಟೆ, ಹೊಡೆದಾಟ ಹಾಗೂ ಮಹಿಳೆಯರ ಮೇಲಿನ ಹಲ್ಲೆ ಖಂಡನೀಯ. ಇಂತಹ ಘಟನೆಗಳು ಶ್ರೀಕ್ಷೇತ್ರದ ಘನತೆಗೆ ಚ್ಯುತಿ ತರುವುದರ ಜತೆಗೆ ಭಕ್ತಾದಿಗಳಲ್ಲಿ ಆತಂಕ ಮೂಡಿಸುತ್ತವೆ ಎಂದು ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಪ್ರಶಾಂತ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಕ್ಕಡ ಗ್ರಾಮದ ಸರ್ವೆ ನಂಬ್ರ 215/1ರಲ್ಲಿ 1.29 ಎಕರೆ ಜಮೀನು ದೇವಸ್ಥಾನದ ಹೆಸರಿನಲ್ಲಿಯೇ ಪಹಣಿಯಾಗಿದ್ದು, ಇದೇ ಸರ್ವೆ ನಂಬ್ರದಲ್ಲಿರುವ ಉಳಿದ 1.99 ಎಕರೆ ಜಮೀನನ್ನು 1993ರಲ್ಲಿಯೇ ಅಂದಿನ ಸಹಾಯಕ ಆಯುಕ್ತರು ದೇವಸ್ಥಾನದ ಬಳಕೆಗಾಗಿ ಕಾಯ್ದಿರಿಸಿದ್ದರು. ಆದರೆ, ಈ ಕಾಯ್ದಿರಿಸಿದ ಜಮೀನನ್ನು ಕಳೆದ 14–15 ವರ್ಷಗಳಿಂದ ಖಾಸಗಿ ಟ್ರಸ್ಟ್‌ವೊಂದು ಅಕ್ರಮವಾಗಿ ಸ್ವಾಧೀನದಲ್ಲಿಟ್ಟುಕೊಂಡು, ಅಲ್ಲಿರುವ ಅಂಗಡಿಗಳನ್ನು ಬಾಡಿಗೆಗೆ ನೀಡಿ ಆದಾಯ ಪಡೆಯುತ್ತಿದೆ ಎಂಬ ಆರೋಪವನ್ನು ಅವರು ಮಾಡಿದ್ದಾರೆ.

ಈ ರೀತಿ ಬಾಡಿಗೆಗೆ ನೀಡಲಾಗಿರುವ ಅಂಗಡಿಗಳ ವ್ಯಾಪಾರಸ್ಥರ ನಡುವೆ ನಡೆದ ಗಲಾಟೆಯೇ ದೇವಸ್ಥಾನದ ಮುಂಭಾಗದ ಅಹಿತಕರ ಘಟನೆಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.ದೇವಸ್ಥಾನಕ್ಕೆ ಕಾಯ್ದಿರಿಸಿದ ಜಮೀನಿನ ಅತಿಕ್ರಮಣದ ವಿಚಾರ ಒಂದೆಡೆಯಾದರೆ, ದೇವಸ್ಥಾನದ ಮುಂಭಾಗದಲ್ಲಿಯೇ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಗಲಾಟೆ ಮಾಡಿರುವುದು ಅತ್ಯಂತ ಖಂಡನೀಯ. ಈ ಘಟನೆಯಿಂದ ಭಕ್ತಾದಿಗಳಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.

ಧಾರ್ಮಿಕ ಕ್ಷೇತ್ರದ ಆವರಣದಲ್ಲಿ ಇಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಪ್ರಶಾಂತ ರೈ ಹೇಳಿದ್ದಾರೆ.ಅತಿಕ್ರಮಣ ತೆರವಿಗೆ ಆಗ್ರಹಈ ದುರ್ಘಟನೆಗೆ ದೇವಸ್ಥಾನಕ್ಕೆ ಕಾಯ್ದಿರಿಸಿದ ಜಮೀನನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡಿದೆ ಎನ್ನಲಾದ ಖಾಸಗಿ ಟ್ರಸ್ಟ್ ಹಾಗೂ ಅತಿಕ್ರಮಣ ತೆರವುಗೊಳಿಸಲು ಕ್ರಮ ಕೈಗೊಳ್ಳದ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಎಂದು ಪ್ರಶಾಂತ ರೈ ಆರೋಪಿಸಿದ್ದಾರೆ.

ಕಂದಾಯ ಇಲಾಖೆಯು ಕೂಡಲೇ ಕಾರ್ಯಪ್ರವೃತ್ತವಾಗಿ ದೇವಸ್ಥಾನದ ಬಳಕೆಗಾಗಿ ಕಾಯ್ದಿರಿಸಿರುವ ಜಮೀನಿನ ಅತಿಕ್ರಮಣವನ್ನು ತೆರವುಗೊಳಿಸಬೇಕು. ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.ದೇವಸ್ಥಾನಕ್ಕೆ ಸೇರಬೇಕಾದ ಆದಾಯವು ಬೇರೆಡೆಗೆ ಹೋಗುವುದನ್ನು ತಡೆಯಬೇಕು. ದೇವಸ್ಥಾನದ ಜಮೀನಿನ ಹಕ್ಕು ಮತ್ತು ಆದಾಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಳ್ಳಬೇಕು.

ಮುಂದಿನ ದಿನಗಳಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಪ್ರಶಾಂತ ರೈ ಗೋಳಿತೊಟ್ಟು, ಅಧ್ಯಕ್ಷರು, ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನ ಸಂರಕ್ಷಣಾ ವೇದಿಕೆ ಅವರು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here