






ಕೊಕ್ಕಡ: ಸ್ನೇಹಿತರೊಂದಿಗೆ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕನೋರ್ವ, ನೀರಿನಲ್ಲಿ ಮುಳುಗುತ್ತಿದ್ದ ಸ್ನೇಹಿತನನ್ನು ರಕ್ಷಿಸಲು ಮುಂದಾದ ವೇಳೆ ತಾನೇ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ನಿಡ್ಲೆ ಗ್ರಾಮದ ಪಾರ್ಪಿಕಲ್‌ನಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.ಮೃತ ಯುವಕನನ್ನು ಕೌಕ್ರಾಡಿ ಗ್ರಾಮದ ಮೂಡುಬೈಲು ನಿವಾಸಿ, ಕೌಕ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜನಾರ್ದನ ಗೌಡ ಅವರ ಪುತ್ರ ಕೀರ್ತನ್ ಗೌಡ(20) ಎಂದು ಗುರುತಿಸಲಾಗಿದೆ.
ಇವರು ಮಂಗಳೂರಿನಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು, ಕಾಲೇಜಿಗೆ ರಜೆ ಇದ್ದ ಕಾರಣ ಮನೆಗೆ ಬಂದಿದ್ದರು ಎನ್ನಲಾಗಿದೆ.ಮಂಗಳವಾರ ಮಧ್ಯಾಹ್ನ ಕೀರ್ತನ್ ಗೌಡ ಅವರು ಐವರು ಸ್ನೇಹಿತರೊಂದಿಗೆ ನಿಡ್ಲೆ ಗ್ರಾಮದ ಪಾರ್ಪಿಕಲ್ ನದಿಗೆ ಸ್ನಾನ ಮಾಡಲು ತೆರಳಿದ್ದರು.


ಸ್ನಾನ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಸ್ನೇಹಿತರಲ್ಲೊಬ್ಬರು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಕೀರ್ತನ್ ಗೌಡ, ಅವರನ್ನು ರಕ್ಷಿಸಲು ನೀರಿಗೆ ಇಳಿದಿದ್ದಾರೆ. ಈ ವೇಳೆ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ನೀರಿನಲ್ಲಿ ಮುಳುಗಿದ್ದ ಕೀರ್ತನ್ ಗೌಡ ಅವರ ಮೃತದೇಹವನ್ನು ಮೇಲಕ್ಕೆತ್ತಿದರು. ಬಳಿಕ ಮೃತದೇಹವನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ನಂತರ ಪುತ್ತೂರಿಗೆ ಕೊಂಡೊಯ್ಯಲಾಗಿದೆ ಅಲ್ಲಿನ ವೈದ್ಯರು ಪರೀಕ್ಷಿಸಿ ಕೀರ್ತನ್ ಗೌಡ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.









