






ಬೆಳ್ತಂಗಡಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾರ್ಯ ಭರದಿಂದ ಸಾಗುತ್ತಿದ್ದು , ಬೆಳ್ತಂಗಡಿ ಸಂತೆಕಟ್ಟೆಯಿಂದ ಬಸ್ ನಿಲ್ದಾಣದ ತನಕವೂ ರಸ್ತೆಯ ಎರಡೂ ಬದಿಗಳಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ಇದರಿಂದಾಗಿ ಮುಂದಿನ ದಿನಗಳಲ್ಲಿ ಅಂಗಡಿಗಳಿಲ್ಲದ ಬೆಳ್ತಂಗಡಿ ನಗರವಾಗುವುದರಲ್ಲಿ ಸಂಶಯವಿಲ್ಲ.ಬಿ.ಸಿ ರೋಡ್ ನಿಂದ ಚಾರ್ಮಾಡಿ ತನಕದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಎರಡನೇ ಹಂತದ ಕಾಮಗಾರಿಯ ಭಾಗವಾಗಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ತಲುಪಿದೆ. ಒಂದಷ್ಟು ಕಡೆಗಳಲ್ಲಿ ಖಾಸಗಿ ಜಮೀನಿನ ತಕರಾರು ಇರುವುದರಿಂದ ರಸ್ತೆ ಕಾಮಗಾರಿಗೆ ತಡೆಯಾಗಿದೆ. ಇನ್ನುಳಿದಂತೆ ಬೆಳ್ತಂಗಡಿ , ಗುರುವಾಯನಕೆರೆ ನಗರಗಳಲ್ಲಿ ಕಾಮಗಾರಿ ನಡೆಯಲು ಬಾಕಿ ಇದೆ.


ಮಳೆಗಾಲ ಮುಗಿದ ನಂತರ ಈ ಎರಡೂ ನಗರಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಕಾಮಗಾರಿ ಉಸ್ತುವಾರಿ ವಹಿಸಿರುವ ಗುತ್ತಿಗೆ ಸಂಸ್ಥೆ ತಿಳಿಸಿದ್ದು , ಅದರಂತೆ ಕಾಮಗಾರಿ ನಡೆಸಲು ತೊಂದರೆ ಉಂಟಾಗಿರುವ ಬೆಳ್ತಂಗಡಿ ಪಟ್ಟಣದ ಎರಡೂ ಬದಿಗಳಲ್ಲಿದ್ದ ಬಹುತೇಕ ವಾಣಿಜ್ಯ ಕಟ್ಟಡ ಹಾಗೂ ವಾಸದ ಮನೆಗಳನ್ನು ತೆರವು ಮಾಡಲಾಗಿದೆ. ಇನ್ನುಳಿದ ಅಂಗಡಿಗಳ ತೆರವು ಕಾರ್ಯ ಮುಗಿದರೆ ಇಡೀ ಬೆಳ್ತಂಗಡಿ ಪಟ್ಟಣ ಖಾಲಿಯಾಗಿ ಅಂಗಡಿಗಳು ಮುಕ್ತವಾದ ಪಟ್ಟಣ ಎಂಬ ಹಣೆಪಟ್ಟಿ ಹೊತ್ತುಕೊಳ್ಳಬೇಕಾಗಿದೆ.ಬೆಳ್ತಂಗಡಿ ಪಟ್ಟಣ ತಾಲೂಕು ಕೇಂದ್ರವಾಗಿದ್ದು ಇಲ್ಲಿ ಬಹುಮುಖ್ಯ 30 ಕ್ಕೂ ಹೆಚ್ಚು ಕೇಂದ್ರ , ರಾಜ್ಯ ಸರ್ಕಾರಿ ಕಚೇರಿಗಳಿದ್ದು ದಿನನಿತ್ಯ ಎಂಟತ್ತು ಸಾವಿರ ಜನರು ತಮ್ಮ ಕೆಲಸಕಾರ್ಯಗಳಿಗೆ ಸಂಪರ್ಕಿಸುವ ಕೇಂದ್ರ ಸ್ಥಾನವಾಗಿದೆ. ಇಂತಹ ಪಟ್ಟಣ ಒಂದೆರಡು ತಿಂಗಳಲ್ಲಿ ಅಂಗಡಿ ಮುಕ್ತ ಬೆಳ್ತಂಗಡಿ ಆಗಲಿದೆ.
ಗುರುವಾಯನಕೆರೆ ಟ್ರಾಫಿಕ್ ಮುಕ್ತ ನಗರವಾಗಲಿದೆ: ಬೆಳ್ತಂಗಡಿ ತಾಲೂಕಿನಲ್ಲಿ ಅತಿ ಹೆಚ್ಚು ಟ್ರಾಫಿಕ್ ಜಾಮ್ ಎಂಬ ಕುಖ್ಯಾತಿ ಗಳಿಸಿರುವ ಗುರುವಾಯನಕೆರೆ ನಗರ ಇನ್ನೂ ಕೆಲವು ತಿಂಗಳಲ್ಲಿ ಟ್ರಾಫಿಕ್ ಮುಕ್ತವಾಗಲಿದೆ. ಗುರುವಾಯನಕೆರೆ ನಗರವು ಮಂಗಳೂರು , ಉಪ್ಪಿನಂಗಡಿ , ಮೂಡಬಿದಿರೆ , ಕಾರ್ಕಳ ಪ್ರಮುಖ ನಗರಗಳನ್ನು ಸಂಪರ್ಕಿಸುವ ರಸ್ತೆಗಳನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದ್ದು ನಾಲ್ಕು ರಸ್ತೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಾಹನಗಳು ಸಂಚರಿಸುವ ಕಾರಣ ಇಲ್ಲಿ ದಿನನಿತ್ಯವೂ ಟ್ರಾಫಿಕ್ ಜಾಮ್ ಆಗುತ್ತಿತ್ತು. ಇನ್ನೂ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಜೊತೆಗೆ ಗುರುವಾಯನಕೆರೆ ಜಂಕ್ಷನ್ ಒಂದಷ್ಟು ಬದಲಾವಣೆಗೊಂಡು ಯಾವುದೇ ಟ್ರಾಫಿಕ್ ಜಾಮ್ ಆಗದಂತೆ ಪರಿವರ್ತನೆ ನಡೆಸಲು ರಾಷ್ಟ್ರೀಯ ಭೂಸಾರಿಗೆ ಇಲಾಖೆ ಮುಂದಾಗಿದೆ. ಇದರಿಂದಾಗಿ ಕಾಮಗಾರಿ ಸಂಪೂರ್ಣ ಮುಗಿದ ನಂತರ ಗುರುವಾಯನಕೆರೆ ಟ್ರಾಫಿಕ್ ಜಾಮ್ ಕುಖ್ಯಾತಿಯನ್ನು ಕಿತ್ತು ಬಿಸಾಕಿ ಟ್ರಾಫಿಕ್ ಮುಕ್ತ ನಗರವಾಗಲಿದೆ.
ಬೆಳ್ತಂಗಡಿ ನಗರಕ್ಕೆ ಮೂರು ಸೇತುವೆ: ಬೆಳ್ತಂಗಡಿ ನಗರ ಮತ್ತು ಲಾಯಿಲ ಗ್ರಾಮವನ್ನು ಸಂಪರ್ಕಿಸುವ ಸೋಮಾವತಿ ನದಿಗೆ ಈಗಾಗಲೇ ಎರಡು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದ್ದು , ಇನ್ನೊಂದು ಸೇತುವೆ ನಿರ್ಮಾಣದ ಕಾಮಗಾರಿ ಭರದಿಂದ ಸಾಗುತ್ತಿದೆ. ಇನ್ನೂ ಒಂದೆರಡು ತಿಂಗಳೊಳಗೆ ಮೂರನೇ ಸೇತುವೆಯ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಆ ಮೂಲಕ ಅಂಗಡಿಗಳು ಮುಕ್ತ ಬೆಳ್ತಂಗಡಿ ನಗರದ ಸೋಮಾವತಿ ನದಿಗೆ ಅಡ್ಡಲಾಗಿ ಮೂರು ಸೇತುವೆ ನಿರ್ಮಾಣವಾದಂತಾಗುತ್ತದೆ.









