






ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಧರ್ಮಸ್ಥಳ ಆಯೋಜಿಸಿದ 28ನೇ ವರ್ಷದ ಭಜನಾ ಕಮ್ಮಟದ ಸಮಾರೋಪ ಸಮಾರಂಭ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಭಜನಾ ಮಂಡಳಿಯ ಸದಸ್ಯರಿಂದ ಅಮೃತವರ್ಷಿಣಿ ಸಭಾಂಗಣದಿಂದ ಹೊರಟು ಮಂಜುನಾಥ ಸ್ವಾಮಿ ದೇವಾಲಯ,ಅಣ್ಣಪ್ಪ ಸ್ವಾಮಿ ಗುಡಿಯ ದಾರಿಯಾಗಿ ಮತ್ತೆ ಅಮೃತವರ್ಷಿಣಿವರೆಗೆ ಭಜನಾ ಶೋಭಾಯಾತ್ರೆ ಭಜನೋತ್ಸವ ವೈಭವ ಮತ್ತು ಅಚ್ಚುಕಟ್ಟಾಗಿ ನೆರವೇರಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರು ಆಶೀರ್ವಚನ ನೀಡಿ” ಭಜನೆಯಲ್ಲಿ ಭಕ್ತಿಯ ಭಾವ,ತನ್ನನ್ನು ಸಮರ್ಪಿಸುವ ಭಾವ ಇದೆ. ಭಜನೆಯ ಮೂಲಕ ಸಾಕ್ಷಾತ್ಕಾರ ಪಡೆದವರಿದ್ದಾರೆ. ಭಗವಂತನಿಗೆ ಭಕ್ತ ಶರಣಾದರೆ,ನಡೆ ನುಡಿಯಲ್ಲಿ ಸಾಮರಸ್ಯ ಬರುತ್ತದೆ. ಮನುಷ್ಯನ ಆತ್ಮ ಸಾಕ್ಷಾತ್ಕಾರಕ್ಕೆ ಭಜನಾ ಕಮ್ಮಟ ಕಾರಣವಾಗುತ್ತದೆ. ಭಗವಂತನ ನಾಮಸ್ಮರಣೆಯಿಂದ ತಪ್ಪುಗಳು ಕಡಿಮೆಯಾಗುತ್ತದೆ. ಪ್ರಾರ್ಥನೆ,ಭಜನೆಯಿದ್ದಲ್ಲಿ ಭಕ್ತ ಮತ್ತು ಭಗವಂತನ ನಡುವೆ ಸಂಬಂಧವಿರುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ನಂತರ ರಾಜಶ್ರೀ ಪಟ್ಟ ಪಡೆದ ಕೀರ್ತಿ ವೀರೇಂದ್ರ ಹೆಗ್ಗಡೆಯವರದ್ದಾಗಿದೆ. ಮಾಡುವ ಕೆಲಸದಲ್ಲಿ ಅಚ್ಚುಕಟ್ಟು,ಶುಭಪ್ರಧವಾಗಿ ಮಾಡುವುದನ್ನು ಕಲಿಯಬೇಕಾದರೆ ಧರ್ಮಸ್ಥಳಕ್ಕೆ ಬರಬೇಕು. ಹೆಗ್ಗಡೆಯವರು ಸೂಕ್ಷ್ಮಗ್ರಹಿಗಳಾಗಿದ್ದಾರೆ. ಹೆಗ್ಗಡೆಯವರ ಉದಾತ್ತ ಸೇವೆಯನ್ನು ದೇಶ ವಿದೇಶದಲ್ಲಿ ಹೇಳುತ್ತಾರೆ. ಹೇಮಾವತಿ ಹೆಗ್ಗಡೆಯವರು ಭಜನಾ ಕಮ್ಮಟದ ಚಾಲನಾ ಶಕ್ತಿಯಾಗಿದ್ದಾರೆ. ವೀರೇಂದ್ರ ಹೆಗ್ಗಡೆಯವರು ಮೂಲ ಮೂರ್ತಿಯಾದರೆ, ಹರ್ಷೇಂದ್ರ ಕುಮಾರ್ ಉತ್ಸವ ಮೂರ್ತಿಯಾಗಿದ್ದಾರೆ”ಎಂದರು.
ಇದೇ ವೇಳೆ ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ಶ್ರೀಯವರು ಆಶೀರ್ವಚನ ನೀಡಿ” ನಮ್ಮ ನಾಲಗೆಯನ್ನು ಪವಿತ್ರಗೊಳಿಸಲು ಭಜನೆ ಕಾರಣವಾಗುತ್ತದೆ. ಯಾವ ಮನೆಯಲ್ಲಿ ಎಲ್ಲಾ ಸದಸ್ಯರು ದೇವರ ಕಾರ್ಯ,ಭಜನೆ ಮಾಡುತ್ತಾರೋ ಅದು ವಿಭಜನೆಯಿಲ್ಲದ ಮನೆಯಾಗುತ್ತದೆ. ನಮ್ಮ ಸಂಸ್ಕೃತಿ,ಆಚರಣೆಯನ್ನು ಉಳಿಸುವ,ಪುನರುತ್ಥಾನಗೊಳಿಸುವ ಕೆಲಸ ಧರ್ಮಸ್ಥಳದಿಂದಾಗುತ್ತಿದೆ.


ಭಜನೆಯ ಮನುಷ್ಯ ಜೀವನ ಮಟ್ಟವನ್ನು ಧಾರ್ಮಿಕವಾಗಿ,ನೈತಿಕವಾಗಿ ಮೇಲ್ಮಟ್ಟಕ್ಕೇರಿಸುತ್ತದೆ” ಎಂದರು.ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ” ಸಂಸ್ಕೃತಿ ಉಳಿಸುವುದು ನಮ್ಮ ಕೆಲಸ. ಭಜನಾ ಕಮ್ಮಟದ ಮೂಲಕ ಹಲವರು ತುಂಬಾ ಚೆನ್ನಾಗಿ ಭಜನೆ ಕಲಿತಿದ್ದಾರೆ. ಶಿಬಿರಾರ್ಥಿಗಳು ತಮ್ಮ ಊರಲ್ಲಿ ಭಜನಾ ತಂಡ ಕಟ್ಟಿ ಬೆಳೆಸಬೇಕು. ರಾಗ ತಾಳದ ಬಗ್ಗೆ ಹೆಚ್ಚಿನ ಗಮನಕೊಡಬೇಕು. ಗ್ರಾಮ ಸುಭೀಕ್ಷೆಗೆ ಭಜನೆ ಮಾಧ್ಯಮ” ಎಂದರು.ರಾಜ್ಯ ಭಜನಾ ಪರಿಷತ್ತಿನ ಪರವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಹೇಮಾವತಿ ವೀ ಹೆಗ್ಗಡೆಯವರಿಗೆ ಪರಿಷತ್ತಿನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಂದ ಗೌರವಾರ್ಪಣೆ ನೆರವೇರಿತು.
ಕಾರ್ಯಕ್ರಮದ ವೇಳೆ ಚೈತ್ರ ಮತ್ತು ಬಳಗದಿಂದ ಮಹಿಳಾ ಶಿಬಿರಾರ್ಥಿಗಳ ಭಜನಾ ಪ್ರಾತ್ಯಕ್ಷಿಕೆ, ಸಂದೇಶ್ ಮತ್ತು ಬಳಗದವರಿಂದ ನೃತ್ಯ ಭಜನೆಯ ಪ್ರಾತ್ಯಕ್ಷಿತೆ ನೆರವೇರಿತು. ಶಂಕರ್ ಶಾನ್ ಭಾಗ್ ರವರ ಗಾಯನದ ಜೊತೆ ಸಾಮೂಹಿಕ ಕುಣಿತ ಭಜನೆ ಜೈ ಜೈ ಹನುಮಾನ್ ಎಲ್ಲರ ಮನಗೆದ್ದಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಭಜನಾ ಕಮ್ಮಟದ ಉಪಾಧ್ಯಕ್ಷರಾದ ಡಾ. ಹೇಮಾವತಿ ವಿ. ಹೆಗ್ಗಡೆ, ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ,ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಮಾಜಿ ಸದಸ್ಯ ಪ್ರತಾಪ ಸಿಂಹ ನಾಯಕ್, ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರೀಯಾ ಹರ್ಷೇಂದ್ರ ಕುಮಾರ್, ಐಶ್ವರ್ಯ ನಿಶ್ಚಲ್ ಕುಮಾರ್ ಉಪಸ್ಥಿತರಿದ್ದರು.
ಯೋಗ ಮತ್ತು ನೈತಿಕ ಶಿಕ್ಷಣದ ನಿರ್ದೇಶಕ ಡಾ.ಐ. ಶಶಿಕಾಂತ್ ಜೈನ್ ರವರ ಮೂರು ಬಾರಿ ಓಂಕಾರದಿಂದ ಆರಂಭವಾದ ಸಮಾರೋಪ ಸಮಾರಂಭದಲ್ಲಿ ಉಷಾ ಹೆಬ್ಬಾರ್ ಮತ್ತು ಶಂಕರ್ ಶಾನ್ ಭಾಗ್ ಭಜನೆಗೆ ಪ್ರಾರಂಭಿಸಿದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರೆ, ಕಾರ್ಯದರ್ಶಿ ವೀರೂ ಶೆಟ್ಟಿ ವರದಿ ವಾಚಿಸಿದರು. ಸೌಮ್ಯ ಸುಭಾಷ್ ಮಂಗಳ ಹಾಡು ಹಾಡಿದರೆ, ರತ್ನವರ್ಮ ಜೈನ್ ಧನ್ಯವಾದವಿತ್ತರು. ಭಜನಾ ಕಮ್ಮಟದ ಸದಸ್ಯ ಶ್ರೀನಿವಾಸ್ ರಾವ್ ಧರ್ಮಸ್ಥಳ ಕಾರ್ಯಕ್ರಮದ ನಿರೂಪಣೆ ಮಾಡಿದರು.









