







ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದರೆ ಗುಡ್ಡ ಕುಸಿತ , ಕಾಡುಪ್ರಾಣಿಗಳ ಉಪಟಳದಂತಹ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಯಿದ್ದು , ಘಾಟ್ ಅಭಿವೃದ್ಧಿ ಮೊದಲು ರಾಜ್ಯ ಸರ್ಕಾರ ವೈಜ್ಞಾನಿಕ ಅದ್ಯಯನ ನಡೆಸುವ ಅಗತ್ಯವಿದೆ.ಘಾಟ್ ಪ್ರದೇಶದ ಅಭಿವೃದ್ಧಿ ಜೊತೆಗೆ ಮುಂದಾಗುವ ಅಪಾಯಕಾರಿ ದುರಂತಗಳ ಬಗ್ಗೆ ಅದ್ಯಯನ ನಡೆಸುವ ಅಗತ್ಯವಿದೆ. ಕೇರಳದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ವಯನಾಡ್ ದುರಂತ ನಮ್ಮ ಕಣ್ಣ ಮುಂದೆ ಇರುವಾಗ ಘಾಟ್ ಪ್ರದೇಶದ ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟಗುಡ್ಡಗಳ ತೆರವು , ಕಲ್ಲುಗಳ ತೆರವು , ಸಾವಿರಾರು ಮರಗಳ ತೆರವು , ದೈತ್ಯ ಯಂತ್ರೋಪಕರಣಗಳ ಬಳಕೆಯಿಂದ ಮಣ್ಣಿನ ಸವಕಳಿ ಉಂಟಾಗುವ ಸಾಧ್ಯತೆ ಇದೆ. ಇದರಿಂದಾಗಿ ಮಳೆಗಾಲದಲ್ಲಿ ಗುಡ್ಡ ಕುಸಿತಗೊಳ್ಳುವ ಅಪಾಯವಿದೆ. ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ವಿವಿಧ ಪ್ರಭೇದಗಳ ಗಿಡ ಮರಗಳಿದ್ದು , ಇದು ಕೂಡ ನಾಶವಾಗುವ ಸಾಧ್ಯತೆಯಿದೆ.


ಈಗಾಗಲೇ ಹವಾಮಾನ ವೈಪರೀತ್ಯಗಳಿಂದ ಈ ವರ್ಷ ಮಳೆ ಕೊರತೆ ಉಂಟಾಗಿ ಬೆಳ್ತಂಗಡಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಪರಿಗಣಿಸಲ್ಪಟ್ಟಿದೆ. ಜೊತೆಗೆ ಈ ಘಾಟ್ ಪ್ರದೇಶದಲ್ಲಿ ವಿವಿಧ ಪ್ರಭೇದಗಳ ಕಾಡುಪ್ರಾಣಿಗಳು ವಾಸಿಸುತ್ತಿದ್ದು , ಅವುಗಳ ವಾಸಸ್ಥಾನಕ್ಕೆ ಅಪಾಯ ಉಂಟಾಗುವ ಸಾಧ್ಯತೆಯಿದೆ. ಈಗಾಗಲೇ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಯೋಜನೆ ಹೆಸರಿನಲ್ಲಿ ಪೆರಿಯಶಾಂತಿ , ಶಿರಾಡಿ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಂಡ ನಂತರ ಆನೆ ಪಥ ಬದಲಾವಣೆಗೊಂಡು ಕೊಕ್ಕಡ , ಶಿಬಾಜೆ ಭಾಗದಲ್ಲಿ ಕಾಡಾನೆ ದಾಳಿಗಳು ನಡೆದು ಪ್ರಾಣಹಾನಿಗೊಂಡಿದೆ. ಇದೀಗ ಚಾರ್ಮಾಡಿ ಘಾಟ್ ಪ್ರದೇಶದಲ್ಲೂ ಅಭಿವೃದ್ಧಿ ಹೆಸರಿನಲ್ಲಿ ಆನೆ ಪಥ ಬದಲಾವಣೆಗೊಂಡು ಆನೆ ದಾಳಿಗಳು ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ಪ್ರದೇಶದ ಅಭಿವೃದ್ಧಿ ಅಗತ್ಯವಾದರೂ ವೈಜ್ಞಾನಿಕ ಅಧ್ಯಯನ ಅಗತ್ಯವಿದ್ದು , ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರ ಸ್ವರೂಪದ ಯೋಚನೆ ಮಾಡಬೇಕು.ಶೇಖರ್ ಎಲ್ಸಾಮಾಜಿಕ ಹೋರಾಟಗಾರ ಬೆಳ್ತಂಗಡಿ









