






ಬೆಳ್ತಂಗಡಿ: ಧರ್ಮಸ್ಥಳದ ಗ್ರಾಮದ ಪಾಂಗಳ ನಿವಾಸಿಯಾಗಿದ್ದು, ಉಜಿರೆ ಎಸ್‌ಡಿಎಂ ಕಾಲೇಜ್‌ನ ವಿದ್ಯಾರ್ಥಿನಿಯಾಗಿದ್ದ ಸೌಜನ್ಯಾ ಅವರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮರು ತನಿಖೆ ನಡೆಸಲು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ಮಂಗಳೂರು ಪೊಲೀಸ್ ಕಮೀಷನರ್ ಮತ್ತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರುವ ಪೊಲೀಸ್ ಮಹಾನಿರೀಕ್ಷಕ ಎನ್.ಶಶಿಕುಮಾರ್ ಅವರನ್ನು ಎಸ್‌ಐಟಿ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದು ಪ್ರಸ್ತುತ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿರುವ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ, ರಾಜ್ಯ ಗುಪ್ತದಳದಲ್ಲಿ ಎಸ್.ಪಿ.ಯಾಗಿರುವ ನಿಶಾ ಜೇಮ್ಸ್, ಸಿಐಡಿಯಲ್ಲಿ ಎಸ್.ಪಿ.ಯಾಗಿರುವ ಲೋಕೇಶ್ ಜಗಲಸಾರ್ ಮತ್ತು ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಕರೆಸಿಕೊಳ್ಳುತ್ತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಮೂರು ತಿಂಗಳ ಅವಧಿಯಲ್ಲಿ ತನಿಖೆ ಮುಕ್ತಾಯದ ಹೊಣೆ: ೨೦೧೨ರ ಅಕ್ಟೋಬರ್ ೯ರಂದು ಧರ್ಮಸ್ಥಳ ಗ್ರಾಮದ ಮಣ್ಣಸಂಕದಲ್ಲಿ ಬರ್ಬರವಾಗಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಸೌಜನ್ಯ ಪ್ರಕರಣದ ಮರು ತನಿಖೆ ನಡೆಸಿ ಮೂರು ತಿಂಗಳ ಒಳಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ಕಳೆದ ವಾರ ಆದೇಶಿಸಿತ್ತು. ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರು ಮರುತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್ಚ್‌ದೇವ್ ಈ ಆದೇಶ ಹೊರಡಿಸಿದ್ದರು. ೧೭ ವರ್ಷದ ಸೌಜನ್ಯಾ ಅವರನ್ನು ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರಂಭದಲ್ಲಿ ಬೆಳ್ತಂಗಡಿ ಠಾಣಾ ಪೊಲೀಸರು, ಆ ಬಳಿಕ ಸಿಐಡಿ ಮತ್ತು ನಂತರ ಸಿಬಿಐ ತನಿಖೆ ನಡೆಸಿತ್ತು. ಪ್ರಕರಣದ ಆರೋಪಿಯಾಗಿ ಹೆಸರಿಸಲ್ಪಟ್ಟು ಬಂಧಿಸಲ್ಪಟ್ಟಿದ್ದ ಕಾರ್ಕಳದ ಸಂತೋಷ್ ರಾವ್‌ನನ್ನು ಸಿಬಿಐ ವಿಶೇಷ ನ್ಯಾಯಾಲಯ ೨೦೨೩ರಲ್ಲಿ ದೋಷಮುಕ್ತಗೊಳಿಸಿತ್ತು. ಆ ನಂತರ ಪ್ರಕರಣದ ಮರು ತನಿಖೆ ನಡೆಸುವಂತೆ ಕುಸುಮಾವತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
೧೬ ಮಂದಿ ಸಹಾಯಕ ಅಧಿಕಾರಿಗಳ ನೇಮಕ: ವಿಶೇಷ ತನಿಖಾ ತಂಡದ ಸಹಾಯಕರಾಗಿ ೧೬ ಮಂದಿಯನ್ನು ನೇಮಕ ಮಾಡಿ ಡಿಜಿ ಮತ್ತು ಐಜಿಪಿ ಡಾ.ಎಂ.ಎ.ಸಲೀಂ ಅವರು ಸೆ.೨೯ರಂದು ಆದೇಶ ಮಾಡಿದ್ದಾರೆ. ಮಂಗಳೂರು ನಗರ ಸಿಸಿಬಿಯ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿಯ ಎಸಿಪಿ ರಾಮಚಂದ್ರ ಬಿ, ಸಿಐಡಿ ಇನ್ಸ್‌ಪೆಕ್ಟರ್ ದೀಪಕ್, ಇನ್ಸ್‌ಪೆಕ್ಟರ್ ಮೋಹನ್ ಡಿ. ಪಾಟೀಲ್, ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಈಶ್ವರಿ, ಕೊಣಾಜೆ ಪೊಲೀಸ್ ಠಾಣೆಯ ಪಿಎಸ್‌ಐ ಪುನೀತ್ ಗಾವಂಕರ್, ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ಪ್ರದೀಪ್, ಕಂಕನಾಡಿ ಪೊಲೀಸ್ ಠಾಣೆಯ ಮಹಿಳಾ ಪಿಎಸ್‌ಐ ಅನಿತಾ ನಿಕಂ, ಮಂಗಳೂರು ಸಿಸಿಬಿ ಎಎಸ್‌ಐ ಮೋಹನ್, ಕಂಕನಾಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪ್ರದೀಪ್ ಕುಮಾರ್ ರೈ, ಗೋವರ್ಧನ್, ದಿನೇಶ್ ಎನ್, ಉಳ್ಳಾಲ ಪೊಲೀಸ್ ಠಾಣೆಯ ಸಿಬ್ಬಂದಿ ರಾಧಾಕೃಷ್ಣ ಕೆ.ಕೆ, ಕಾವೂರು ಪೊಲೀಸ್ ಠಾಣೆಯ ಸಿಬ್ಬಂದಿ ರೆಜಿ.ವಿ.ಎಂ, ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ರಾಜೇಂದ್ರ ಪ್ರಸಾದ್.ವಿ.ಪಿ. ಮತ್ತು ಕಂಕನಾಡಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಪ್ರಮೀಳಾ ಅವರನ್ನು ಒಳಗೊಂಡ ತನಿಖಾ ತಂಡವನ್ನು ರಚನೆ ಮಾಡಲಾಗಿದೆ. ನೇಮಕ ಮಾಡಿದ ತನಿಖಾ ಸಹಾಯಕರು ತಕ್ಷಣ ತಮ್ಮ ಠಾಣೆಗಳಿಂದ ಬಿಡುಗಡೆಗೊಂಡು ಎಸ್‌ಐಟಿ ತನಿಖಾ ತಂಡ ಬೆಂಗಳೂರಿನಲ್ಲಿ ವರದಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಎಸ್‌ಐಟಿಯಿಂದ ಕೈ ಬಿಡಲು ವೆಂಕಟೇಶ್ ಪ್ರಸನ್ನ ಮನವಿ: ಸೌಜನ್ಯಾ ಅವರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ವಿಶೇಷ ತನಿಖಾ ತಂಡದಿಂದ ಹೊರಬರಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ವೆಂಕಟೇಶ್ ಪ್ರಸನ್ನ ನಿರ್ಧರಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಲಿಖಿತವಾಗಿ ಎಎಸ್ಪಿ ವೆಂಕಟೇಶ್ ಪ್ರಸನ್ನ ಮನವಿ ಮಾಡಿದ್ದಾರೆ. ಎಎಸ್ಪಿ ಅವರ ಮನವಿಯನ್ನು ಸರ್ಕಾರ ಪುರಸ್ಕರಿಸಲಿದೆಯೇ ಅಥವಾ ಅವರನ್ನೇ ಮುಂದುವರೆಸಲಿದೆಯೇ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಎಸ್‌ಐಟಿಯ ಕೆಲವು ಅಧಿಕಾರಿಗಳ ಬಗ್ಗೆ ಸೌಜನ್ಯ ಹೋರಾಟಗಾರರಿಂದ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ವೆಂಕಟೇಶ್ ಪ್ರಸನ್ನ ಅವರು ಲಿಖಿತ ಪತ್ರ ಬರೆದಿದ್ದು ಎಸ್‌ಐಟಿಯಿಂದ ತಮ್ಮ ಹೆಸರನ್ನು ಕೈ ಬಿಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ತಮ್ಮ ಮೇಲೆ ಅವಿಶ್ವಾಸ ವ್ಯಕ್ತಪಡಿಸಿರುವುದರಿಂದ ತನಿಖಾ ತಂಡದಲ್ಲಿ ಮುಂದುವರೆಯಲು ನೈತಿಕ ಪ್ರಶ್ನೆ ಎದುರಾಗಿದೆ ಎಂದು ಅವರು ವಿನಂತಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.


ಎಸ್‌ಐಟಿ ಅಧಿಕಾರಿಗಳ ವಿರುದ್ಧ ಸುಪ್ರೀಂಕೋರ್ಟ್ ಕದ ತಟ್ಟಿದ ಕುಸುಮಾವತಿ, ತನಿಖೆಯಲ್ಲಿ ಲೋಪ ಎಸಗಿದರೆ ಕಾನೂನು ಕ್ರಮ-ನ್ಯಾಯಮೂರ್ತಿ ಎಚ್ಚರಿಕೆ: ಬೆಳ್ತಂಗಡಿ: ಮರು ತನಿಖೆ ನಡೆಸಲು ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿದ ಬಳಿಕ ಮತ್ತೆ ಸೌಜನ್ಯ ಅವರ ತಾಯಿ ಕುಸುಮಾವತಿ ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ. ಸರಕಾರ ರಚನೆ ಮಾಡಿರುವ ಎಸ್‌ಐಟಿಯಲ್ಲಿರುವ ಅಧಿಕಾರಿಗಳಾದ ಎನ್. ಶಶಿಕುಮಾರ್ ಮತ್ತು ವೆಂಕಟೇಶ್ ಪ್ರಸನ್ನ ಅವರ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕುಸುಮಾವತಿ ಅವರು ಈ ಕುರಿತು ತಮ್ಮ ವಕೀಲರ ಮೂಲಕ ಸುಪ್ರೀಂಕೋರ್ಟ್ ಗಮನ ಸೆಳೆದಿದ್ದಾರೆ. ಶಶಿಕುಮಾರ್ ಮತ್ತು ವೆಂಕಟೇಶ್ ಪ್ರಸನ್ನ ಅವರ ಮೇಲೆ ಹಲವು ಆರೋಪಗಳಿದೆ. ಹಾಗಾಗಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವ ಕುರಿತು ಸಂಶಯ ಇದೆ ಎಂದು ಕುಸುಮಾವತಿ ಪರ ವಕೀಲರು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ವೇಳೆ ಸರಕಾರಿ ವಕೀಲರಿಗೆ ಮೌಖಿಕ ಸೂಚನೆ ನೀಡಿರುವ ನ್ಯಾಯಮೂರ್ತಿಗಳು ಪ್ರಕರಣದ ತನಿಖೆಯ ಕುರಿತು ನ್ಯಾಯಪೀಠ ಕೂಲಂಕುಶವಾಗಿ ಮೇಲ್ವಿಚಾರಣೆ ನಡೆಸುತ್ತದೆ. ಯಾವುದೇ ಅಧಿಕಾರಿ ಲೋಪ ಎಸಗಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಬೆಳ್ತಂಗಡಿ ತಾಲೂಕಿಗೆ ಮೂರನೇ ಎಸ್‌ಐಟಿ!: ಬೆಳ್ತಂಗಡಿ ತಾಲೂಕಿಗೆ ಇದೀಗ ಮೂರನೇ ಎಸ್‌ಐಟಿ ಕಾಲಿಡುತ್ತಿದೆ. ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದವರ ಶವಗಳನ್ನು ಕಾನೂನು ಬಾಹಿರವಾಗಿ ಹೂತು ಹಾಕಿಸಲಾಗಿದೆ ಎಂದು ಈ ಹಿಂದೆ ಧರ್ಮಸ್ಥಳ ದೇವಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದ ಮಂಡ್ಯ ಮೂಲದ ಚಿನ್ನಯ್ಯ ಅವರು ಅನಾಮಧೇಯ ವ್ಯಕ್ತಿಯಾಗಿ ಬಂದು ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿತ್ತು. ೨೦೨೫ರ ಜುಲೈ ೧೯ರಂದು ಡಿಜಿಪಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ರಚಿಸಲ್ಪಟ್ಟಿದ್ದ ವಿಶೇಷ ತನಿಖಾ ತಂಡ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಏಳು ಸಾವಿರಕ್ಕೂ ಅಧಿಕ ಪುಟಗಳ ವರದಿ ಸಲ್ಲಿಸಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕೊಲೆ, ಅಸ್ವಾಭಾವಿಕ ಸಾವು, ನಾಪತ್ತೆ ಮುಂತಾದ ಪ್ರಕರಣಗಳ ತನಿಖೆಗಾಗಿ ಈ ಎಸ್‌ಐಟಿ ರಚನೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯ ಬಳಿ ಕಚೇರಿ ಆರಂಭಿಸಿದ್ದ ಎಸ್‌ಐಟಿಗೆ ಬಳಿಕ ಪೊಲೀಸ್ ಠಾಣೆಯ ಅಧಿಕಾರ ನೀಡಲಾಗಿತ್ತು. ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ೧೭ ಸ್ಥಳಗಳಲ್ಲಿ ಉತ್ಖನನ ನಡೆಸಿದ್ದರು. ಅಲ್ಲದೆ ನಾಪತ್ತೆ ಮತ್ತು ಸಂಶಯಾಸ್ಪದ ಸಾವಿನ ಪ್ರಕರಣಗಳ ಕುರಿತು ಹಲವರಿಂದ ದೂರು ಸ್ವೀಕರಿಸಿದ್ದರು. ೨೦೨೨ರ ಡಿಸೆಂಬರ್ ೧೮ರಂದು ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿ ಎ.ಸಿ.ಕುರಿಯನ್ ಮಾಲಕತ್ವದ ಸಾರಾ ಫಾರ್ಮ್‌ನಲ್ಲಿ ಕಾರ್ಮಿಕನಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಸಮೀಪದ ಶ್ರೀಧರ್ ಎಂಬವರ ತನಿಖೆಗಾಗಿ ಫಾರ್ಮ್‌ನ ವ್ಯವಸ್ಥಾಪಕರಾಗಿದ್ದ ಹರೀಶ್ ಮೊಗೇರ ಅವರ ಕೋರಿಕೆ ಮೇರೆಗೆ ಹೈಕೋರ್ಟ್ ಆದೇಶದಂತೆ ರಾಜ್ಯ ಸರಕಾರ ೨೦೨೫ರ ಸೆಪ್ಟೆಂಬರ್ ೯ರಂದು ವಿಶೇಷ ತನಿಖಾ ತಂಡ ರಚಿಸಿತ್ತು. ಐಜಿಪಿ ಲಾಬೂರಾಮ್ ಅವರ ನೇತೃತ್ವದ ಎಸ್‌ಐಟಿ ಈಗಾಗಲೇ ಈ ಪ್ರಕರಣದ ತನಿಖೆ ನಡೆಸಿದೆ. ಕರ್ನಾಟಕ ಪೊಲೀಸರು ನಡೆಸಿದ್ದ ಈ ಪ್ರಕರಣದ ಕುರಿತು ಆಕ್ರೋಶ ವ್ಯಕ್ತವಾಗಿದ್ದರಿಂದ ಬಳಿಕ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ನಂತರ ಎಸ್‌ಐಟಿ ರಚಿಸಲಾಗಿತ್ತು. ಇದೀಗ ಸೌಜನ್ಯ ಅವರ ತಾಯಿ ಕುಸುಮಾವತಿ ಅವರ ಮನವಿಯನ್ನು ಪುರಸ್ಕರಿಸಿ ಸುಪ್ರೀಂಕೋರ್ಟ್ ಮರು ತನಿಖೆಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ವಿಶೇಷ ತನಿಖಾ ತಂಡ ರಚಿಸಿದೆ. ಐಜಿಪಿ ಶಶಿಕುಮಾರ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ಎಸ್‌ಐಟಿ ಇನ್ನಷ್ಟೇ ತನಿಖೆ ಆರಂಭಿಸಬೇಕಿದೆ. ಸೌಜನ್ಯ ಪ್ರಕರಣದಲ್ಲಿ ಕರ್ನಾಟಕ ಪೊಲೀಸ್, ಸಿಐಡಿ ಮತ್ತು ಸಿಬಿಐ ತನಿಖೆ ನಡೆದಿತ್ತು.









