






ಮಂಗಳೂರು: ಧರ್ಮಸ್ಥಳ ಗ್ರಾಮದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ರಚನೆ ಮಾಡಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ದ ಅಧಿಕಾರಿಗಳು ಗುರುವಾರ ಮಂಗಳೂರಿಗೆ ಆಗಮಿಸಿದ್ದು, ಅಧಿಕೃತವಾಗಿ ತನಿಖಾ ಪ್ರಕ್ರಿಯೆ ಆರಂಭಗೊಂಡಿದೆ.
ಎಸ್‌ಐಟಿ ಸದಸ್ಯರಾದ ರಾಜ್ಯ ಗುಪ್ತಚರ ಎಸ್ಪಿ ನಿಶಾ ಜೇಮ್ಸ್ ಹಾಗೂ ಸಿಐಡಿ ಎಸ್ಪಿ ಲೋಕೇಶ್ ಜಗಲಸಾರ್ ಅವರು ಗುರುವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ್ದರೆ, ಎಸ್ಐಟಿ ಮುಖ್ಯಸ್ಥ- ಪೊಲೀಸ್ ಮಹಾನಿರೀಕ್ಷಕ ಎನ್.ಶಶಿಕುಮಾರ್ ಮಧ್ಯಾಹ್ನ ಆಗಮಿಸಿ ಇಡೀ ತಂಡದ ಜತೆ ಮಹತ್ವದ ಸಭೆ ನಡೆಸಿದ್ದಾರೆ.
ಹಳೆ ಡಿಸಿ ಆಫೀಸಲ್ಲಿ ನೂತನ ಎಸ್ಐಟಿ ಕಚೇರಿ:ನಗರದ ಹಳೆ ಜಿಲ್ಲಾಧಿಕಾರಿ ಕಚೇರಿಯ 2ನೇ ಮಹಡಿಯಲ್ಲಿ ಪ್ರಸ್ತುತ ಕಾರ್ಯಾಚರಿಸುತ್ತಿರುವ ವಿಶೇಷ ಕಾರ್ಯಪಡೆ (ಎಸ್ಎಎಫ್) ಕಚೇರಿಯಲ್ಲೇ ನೂತನ ಎಸ್ಐಟಿ ಕಚೇರಿ ಕಾರ್ಯಾರಂಭವಾಗಿದೆ. ಬೆಳಗ್ಗೆ ಆಗಮಿಸಿದ ನಿಶಾ ಜೇಮ್ಸ್ ಹಾಗೂ ಲೋಕೇಶ್ ಜಗಲಸಾರ್ ಅವರು ನೇರವಾಗಿ ಈ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದ್ದರು.


ಬಳಿಕ ಈ ಇಬ್ಬರು ಅಧಿಕಾರಿಗಳು ತಂಡದ ಇನ್ನೋರ್ವ ಸದಸ್ಯ- ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಕಚೇರಿಕ್ಕೆ ತೆರಳಿ ಸಮಾಲೋಚನೆ ನಡೆಸಿದರು.ಬಳಿಕ ಬೆಳ್ತಂಗಡಿಗೆ ತೆರಳಿದ ಅಧಿಕಾರಿಗಳು ಅಲ್ಲಿನ ಪೊಲೀಸ್ ಠಾಣೆ ಸಮೀಪದ ಈ ಹಿಂದಿನ ಎಸ್ಐಟಿ ಕಚೇರಿಯ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾತ್ರವಲ್ಲದೆ, ಬೆಳ್ತಂಗಡಿಯಲ್ಲೂ ಎಸ್ಐಟಿ ಕಚೇರಿ ತೆರೆಯುವ ನಿರೀಕ್ಷೆಯಿದೆ.ಮಹತ್ವದ ಸಭೆ- ತನಿಖೆಗೆ ರೂಪುರೇಷೆ:ಮಧ್ಯಾಹ್ನ 3.45ರ ಸುಮಾರಿಗೆ ಎಸ್ಐಟಿ ಮುಖ್ಯಸ್ಥ ಶಶಿಕುಮಾರ್ ಅವರು ನೇರವಾಗಿ ಎಸ್ಐಟಿ ಕಚೇರಿಗೆ ಆಗಮಿಸಿ, ತಂಡಕ್ಕೆ ನಿಯೋಜನೆಗೊಂಡಿರುವ ಮೂವರು ಸದಸ್ಯ ಅಧಿಕಾರಿಗಳು, 16 ಸಹಾಯಕ ಅಧಿಕಾರಿಗಳೊಂದಿಗೆ ಪ್ರಥಮ ಸಭೆ ನಡೆಸಿದ್ದಾರೆ.ಈ ಮಹತ್ವದ ಸಭೆಯಲ್ಲಿ ಸೌಜನ್ಯಾ ಅತ್ಯಾಚಾರ- ಕೊಲೆ ಪ್ರಕರಣದ ಹಳೆಯ ಕಡತಗಳ ಪರಿಶೀಲನೆ ಜತೆಗೆ ಮುಂದಿನ ತನಿಖೆಗೆ ರೂಪುರೇಷೆ ಸಿದ್ಧಪಡಿಸಲಾಗಿದ್ದು, ಅಧಿಕಾರಿಗಳಿಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುವ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಎಸ್ಐಟಿ ತಂಡದ ಸದಸ್ಯರಾಗಿ ನಿಯೋಜನೆಗೊಂಡಿದ್ದ ಇನ್ನೋರ್ವ ಐಪಿಎಸ್ ಅಧಿಕಾರಿ ವೆಂಕಟೇಶ್ ಪ್ರಸನ್ನ ಗೈರು ಹಾಜರಾಗಿದ್ದರು. ಎಸ್ಐಟಿಯಿಂದ ತನ್ನನ್ನು ಕೈಬಿಡಲು ಈಗಾಗಲೇ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸುಪ್ರೀಂಕೋರ್ಟ್ ಸೆ.21ರಂದು ಪ್ರಕರಣದ ಮರು ತನಿಖೆಗೆ ಆದೇಶಿಸಿದ್ದು, 3 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ಆರಂಭವಾಗಿರುವ ಈ ಮರು ತನಿಖೆಯು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ತಿರುವು ಪಡೆದುಕೊಂಡಿದೆ.









