






ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಮಲತ್ಯಾಜ್ಯ ನಿರ್ವಹಣಾ ಘಟಕದ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯತ್ ವತಿಯಿಂದ ಮಲತ್ಯಾಜ್ಯ ವಿಲೇವಾರಿ ಕುರಿತು ಮಾಹಿತಿ, ಶಿಕ್ಷಣ ಮತ್ತು ಸಂವಹನ (IEC) ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣಗಳು, ಬಸ್ ನಿಲ್ದಾಣ, ಆಟೋರಿಕ್ಷಾ ನಿಲ್ದಾಣ, ವಿವಿಧ ಮನೆಗಳು, ಶಾಲೆಗಳು ಹಾಗೂ ವಸತಿ ಸಂಕೀರ್ಣಗಳಲ್ಲಿ ಶೌಚಾಲಯದ ಗುಂಡಿಗಳು ತುಂಬಿದ ಸಂದರ್ಭದಲ್ಲಿ ಸುರಕ್ಷಿತವಾಗಿ ಮಲತ್ಯಾಜ್ಯವನ್ನು ವಿಲೇವಾರಿ ಮಾಡಿಸಲು ಸಂಪರ್ಕಿಸಬಹುದಾದ ಸಹಾಯವಾಣಿ ಸಂಖ್ಯೆಯನ್ನು ಒಳಗೊಂಡ ಸ್ಟಿಕರ್ಗಳನ್ನು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.


ಸ್ಟಿಕರ್ಗಳನ್ನು ಸಾರ್ವಜನಿಕರು ಸುಲಭವಾಗಿ ಗಮನಿಸಬಹುದಾದ ಸ್ಥಳಗಳಲ್ಲಿ ಅಳವಡಿಸುವ ಮೂಲಕ, ಶೌಚಾಲಯದ ಗುಂಡಿ ತುಂಬಿದಾಗ ಕೈಯಾರೆ ಸ್ವಚ್ಛಗೊಳಿಸುವುದನ್ನು ತಪ್ಪಿಸಿ, ಸೂಕ್ತ ಯಂತ್ರೋಪಕರಣಗಳ ಮೂಲಕ ಮಲತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಾಹಿತಿ ಶಿಕ್ಷಣ ಸಂಯೋಜಕ ಶ್ರೀ ಡೊಂಬಯ್ಯ ಇಡ್ಕಿದು ಅವರು ಗ್ರಾಮ ಪಂಚಾಯತ್ ಸಿಬ್ಬಂದಿಯೊಂದಿಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಮಲತ್ಯಾಜ್ಯ ನಿರ್ವಹಣೆ, ಶೌಚಾಲಯ ಗುಂಡಿಗಳ ಸುರಕ್ಷಿತ ವಿಲೇವಾರಿ, ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯದ ಕುರಿತು ಮಾಹಿತಿ ನೀಡಿದರು.
ಈ IEC ಚಟುವಟಿಕೆಯ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು, ವಾಣಿಜ್ಯ ಸಂಸ್ಥೆಗಳು, ಶಾಲೆಗಳು ಹಾಗೂ ವಸತಿ ಸಂಕೀರ್ಣಗಳ ಆಡಳಿತ ಮಂಡಳಿಗಳು ಮಲತ್ಯಾಜ್ಯ ವಿಲೇವಾರಿ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಸ್ವಚ್ಛ, ಸುರಕ್ಷಿತ ಮತ್ತು ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಲಾಯಿತು.









