






ಬೆಳ್ತಂಗಡಿ:ತಾಲೂಕಿನ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾದ ಘಟನೆ ಸೆ. 28ರ ಸಂಜೆ ಬೆಳಕಿಗೆ ಬಂದಿದೆ.ಬಳಂಜ ಗ್ರಾಮ ವ್ಯಾಪ್ತಿಯ ನಾಲ್ಕೂರು ಗ್ರಾಮದ ಪಾಡಿ ನಿವಾಸಿ ವಿನೋದ್ ಎಂಬವರ ಕೃಷಿ ತೋಟದ ಕಣಿ (ಬಾವಿ) ಬಳಿ ತಲೆಬುರುಡೆ, ಎಲುಬುಗಳು ಮತ್ತು ವಸ್ತ್ರ ಸಹಿತ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ.


ವಿನೋದ್ ಅವರ ಜಾಗವನ್ನು ನಾಲ್ಕೂರು ಗ್ರಾಮದ ಮಜ್ಜೆನಿಬೈಲು ಪಾಡಿ ನಿವಾಸಿ ಸುರೇಶ್ ಎಂಬವರು ನೋಡಿಕೊಳ್ಳುತ್ತಿದ್ದು, ತೋಟವನ್ನು ಮೆಷಿನ್ ಮೂಲಕ ಸ್ವಚ್ಛಗೊಳಿಸುತ್ತಿದ್ದ ವೇಳೆ ಅಸ್ಥಿಪಂಜರ ಕಂಡುಬಂದಿದೆ ಎಂದು ತಿಳಿದುಬಂದಿದೆ.ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ವೇಣೂರು ಠಾಣಾ ಪೊಲೀಸರು ಹಾಗೂ SOCO ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ವ್ಯಕ್ತಿಯ ಗುರುತು ಪತ್ತೆ ಹಾಗೂ ಸಾವಿನ ಕಾರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.









