







ಬೆಳ್ತಂಗಡಿ: ನಾವೂರು-ಕುತ್ಲೂರುಗೆ ವಿದ್ಯುತ್ ಸಂಪರ್ಕದ ಅನುಮತಿಗೆ ಸಂಬಂಧಿಸಿದಂತೆ ನಮ್ಮ ಸಂಘಟನೆ ನಡೆಸಿದ ಪತ್ರಿಕಾಗೋಷ್ಠಿಗೆ ಉತ್ತರ ನೀಡದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಪಲಾಯನ ಮಾಡಿ ತನ್ನ ಹಿಂಬಾಲಕರ ಮೂಲಕ ಹೋರಾಟಗಾರರ ತೇಜೋವಧೆ ಮಾಡಿಸಲು ಹೊರಟಿದ್ದಾರೆ. ಇಂತಹ ಕುತಂತ್ರದಿಂದ ಸತ್ಯವನ್ನು ಮರೆ ಮಾಚಲು ಸಾಧ್ಯವಿಲ್ಲ ಎಂಬುದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು. ಸುಳ್ಳನ್ನು ನಂಬಿಸುವ ಮತ್ತು ಜನರನ್ನು ದಾರಿ ತಪ್ಪಿಸುವ ಕಲೆಯಲ್ಲಿ ಶಾಸಕರು ಕುಖ್ಯಾತಿ ಗಳಿಸಿದ್ದಾರೆ.
ಒಂದು ಸುಳ್ಳನ್ನು ನೂರಾರು ಬಾರಿ ಹೇಳಿ ಸತ್ಯವನ್ನಾಗಿಸುವ ಗೋಬೆಲ್ಸ್ ಸಿದ್ಧಾಂತವನ್ನು ಶಾಸಕರು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ಶೇಖರ್ ಲಾಯಿಲ ಹೇಳಿದರು. ನಾವೂರು-ಕುತ್ಲೂರು ವಿದ್ಯುತ್ಗೆ ಅನುಮತಿ ದೊರೆತಿರುವುದು ನಮ್ಮ ಹೋರಾಟದ ಫಲವೇ ಹೊರತು ನಿಮ್ಮ ಸಾಧನೆಯಲ್ಲ ಎಂದು ಅವರು ತಿಳಿಸಿದ್ದಾರೆ.
ಅವರು ಸೆ.16ರಂದು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುಶಿಸಿ ಮಾತನಾಡಿದರು.ಬೆಸ್ಟ್ ಶಾಸಕ ಹೇಗಾಗುತ್ತಾರೆ: ತನ್ನ ಅಧಿಕಾರವಧಿಯಲ್ಲೇ ಅಂದರೆ 2019ರಿಂದ 2023ರ ಅವಧಿಯಲ್ಲಿ ಬಿಜೆಪಿ ಸರ್ಕಾರ ರಾಜ್ಯ ಮತ್ತು ಕೇಂದ್ರದಲ್ಲಿದ್ದರೂ ಒಂದೇ ಒಂದು ಅರ್ಜಿ ಸಲ್ಲಿಸಲಾಗದ ಶಾಸಕರು ಬೆಸ್ಟ್ ಶಾಸಕ ಹೇಗಾಗುತ್ತಾರೆ. ಅವರೊಬ್ಬ ವೇಸ್ಟ್ ಶಾಸಕ. ಇಂದು ರಾಜ್ಯ ಸರ್ಕಾರದ ಮುತುವರ್ಜಿಯಿಂದ ವಿದ್ಯುತ್ ಸಂಪರ್ಕಕ್ಕಾಗಿ ಸಲ್ಲಿಸಲಾದ ಅರ್ಜಿಗಳ ಪೈಕಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾವೂರು, ಕುತ್ಲೂರು ಗ್ರಾಮಗಳ ಅರ್ಜಿಗಳಿಗೆ ನಮ್ಮ ಸಂಘಟನೆ ಹಾಗೂ ರಕ್ಷಿತ್ ಶಿವರಾಂರವರ ಸತತ ಪ್ರಯತ್ನದ ಫಲವಾಗಿ ದೊರೆತ ವನ್ಯಜೀವಿ ಮಂಡಳಿಯ ಅನುಮತಿಯನ್ನು ನನ್ನ ಸಾಧನೆ ಎಂದು ಬಿಂಬಿಸುತ್ತಿರುವುದು ಅತ್ಯಂತ ನಾಚಿಕೆ ವಿಚಾರ. ಅದರ ಬಗ್ಗೆ ನಮ್ಮ ಪ್ರಶ್ನೆಗೆ ಇಡೀ ಇತಿಹಾಸವನ್ನು ಕೆದಕುವ ಮೂಲಕ ತನ್ನ ಹಿಂಬಾಲಕರ ಮೂಲಕ ಸತ್ಯವನ್ನು ಮರೆ ಮಾಚಲು ಪ್ರಯತ್ನಿಸಿದ್ದಾರೆ.
ನಮ್ಮ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದವರಿಂದ ಉತ್ತರ ನಿರೀಕ್ಷಿಸುವುದು ಕೂಡ ಸರಿಯಲ್ಲ ಎಂದು ಹೇಳಿದ ಶೇಖರ ಲಾಯಿಲ ಅವರು ಇಡೀ ದೇಶದಲ್ಲೇ ಮೊದಲ ಬಾರಿಗೆ ಏಕಗಂಟಿನಲ್ಲಿ 16.50 ಕೋಟಿ ಅನುದಾನದಲ್ಲಿ ರಸ್ತೆ ಕಾಂಕ್ರೀಟಿಕರಣ, ಸೇತುವೆ, ಮೋರಿಗಳ ನಿರ್ಮಾಣ ಮಾಡಿ ಸಿಂಗಾಪುರ ಮಾದರಿಯಲ್ಲಿ ಕೋಲೋಡಿ ಮಲೆಕುಡಿಯ ಕಾಲೋನಿಯನ್ನು ದಿ. ವಸಂತ ಬಂಗೇರರ ಅವಧಿಯಲ್ಲಿ ಮಾಡಲಾಗಿತ್ತು. ಬಾಂಜಾರು ಮಲೆಕುಡಿಯ ಕಾಲೋನಿ ಅಭಿವೃದ್ಧಿ ಯಾರ ಸಾಧನೆ? ಇನ್ನೂ ಹತ್ತಕ್ಕಿಂತ ಕಡಿಮೆ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಾನೂನಿನ ತೊಡಕು ಎಂಬುದು ಅತ್ಯಂತ ಮೂರ್ಖತನ ಎಂದು ಹೇಳಿದರು.


ಶಾಸಕ ಹರೀಶ್ ಪೂಂಜರ ಹಿಂಬಾಲಕರು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮಲೆಕುಡಿಯ ಸಮುದಾಯಕ್ಕೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ರೀತಿ ಹೇಳಲು ಅವರಿಗೆ ಯಾವ ನೈತಿಕತೆಯೂ ಇಲ್ಲ. 2005ರಿಂದಲೇ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮಲೆಕುಡಿಯ ಸಮುದಾಯದ ನಡುವೆ ಕೆಲಸ ಮಾಡಿದೆ. ಅದರ ಪ್ರಮಾಣಪತ್ರ 2018ರ ನಂತರದ ಶಾಸಕರ ಹಿಂಬಾಲಕರಿಂದ ಅಗತ್ಯವಿಲ್ಲ ಎಂದು ಹೇಳಿದ ಅವರು ಮಲೆಕುಡಿಯ ಸಮುದಾಯದ ಪರವಾದ ಹೋರಾಟದಲ್ಲಿ ಕ್ರಿಮಿನಲ್ ಕೇಸ್ ಹಾಕಿಸಿಕೊಂಡವರು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸದಸ್ಯರು ಎಂಬುದು ನೆನಪಿರಲಿ. ಮಲೆಕುಡಿಯ ಸಮುದಾಯಕ್ಕೆ ಎಲ್ಲೇ ಅನ್ಯಾಯ, ದೌರ್ಜನ್ಯ, ಹಿಂಸೆ ನಡೆದರೂ ಅಲ್ಲಿ ಮೊದಲ ಮಧ್ಯಪ್ರವೇಶ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಎಂಬುದು ನೆನಪಿರಲಿ ಎಂದರು.
2004ರಲ್ಲಿ ಮಲವಂತಿಗೆ ಗ್ರಾಮದ ಸಂಜೀವ ಮಲೆಕುಡಿಯ ಅರೆಬೆತ್ತಲೆ ವಿರುದ್ಧ ಧ್ವನಿ ಎತ್ತಿ ಒಂದು ತಿಂಗಳ ನಂತರ ಪ್ರಕರಣ ದಾಖಲಿಸಿzನೆ. ಕುಕ್ಕಳ ಗ್ರಾಮದ ಮಲೆಕುಡಿಯ ಅವರು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದ ಸಂದರ್ಭದಲ್ಲಿ ನಿಷೇಧಿತ ಔಷಧ ನೀಡಿ ಮೃತಪಟ್ಟಾಗ ಮೃತರ ಕುಟುಂಬದ ಪರವಾಗಿ 4.50 ಲಕ್ಷ ರೂಪಾಯಿ ಹಣ ಕಟ್ಟದೆ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿಸಿzನೆ. ಇದೇ ಕಾರಣಕ್ಕಾಗಿ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿರುತ್ತೇನೆ. ಬಾಂಜಾರು ಮಲೆಕುಡಿಯ ಕಾಲೋನಿಯಲ್ಲಿ 1982ರಲ್ಲಿ ಅಂದಿನ ಜಿಲ್ಲಾಧಿಕಾರಿಗಳ ಆಗಮನವನ್ನು ಸ್ವಾಗತಿಸಲು ಡಿಸಿ ಕಟ್ಟೆ ನಿರ್ಮಾಣ ಮಾಡಲಾಗಿತ್ತು. 2014ರಲ್ಲಿ ಅಂದಿನ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂರವರನ್ನು ಇತಿಹಾಸದಲ್ಲಿ ಮೊದಲ ಬಾರಿಗೆ ಕರೆದುಕೊಂಡು ಹೋಗಿ ಡಿಸಿ ಕಟ್ಟೆಯನ್ನು ಉದ್ಘಾಟನೆ ಮಾಡಿಸಿದಲ್ಲದೆ ಕುಂದುಕೊರತೆಗಳನ್ನು ನಿವಾರಿಸಲು ಸಭೆ ನಡೆಸಲಾಯಿತು. ಅವರಿಗೆ ಪ್ರತ್ಯೇಕ ಚುನಾವಣಾ ಬೂತ್ ತೆರೆಯಲಾಯಿತು. ಬಾಂಜಾರಿಗೆ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ತ್ರಿಪುರದ ಲೋಕಸಭಾ ಸದಸ್ಯರೂ ಪ್ರಸ್ತುತ ತ್ರಿಪುರ ವಿಧಾನಸಭಾ ವಿರೋಧ ಪಕ್ಷದ ನಾಯಕರೂ ಆಗಿರುವ ಜಿತೇಂದ್ರ ಚೌಧರಿ ಅವರನ್ನು ಕರೆದುಕೊಂಡು ಹೋಗಿ ಅಲ್ಲಿನ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತುವಂತೆ ಮಾಡಲಾಗಿದೆ. ಅಲ್ಲಿಗೆ 600ಕ್ಕೂ ಹೆಚ್ಚು ವಿದ್ಯುತ್ ಕಂಬಗಳ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ವಿಠ್ಠಲ ಮಲೆಕುಡಿಯ ಪ್ರಕರಣ ಸಂದರ್ಭದಲ್ಲಿ ಮುಂದೆ ನಿಂತು ಪ್ರತಿಭಟನೆ ನಡೆಸಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ಪಾಲಕ್ಕಾಡ್ ಲೋಕಸಭಾ ಸದಸ್ಯ ಎಂ.ಬಿ ರಾಜೇಶ್ ಅವರನ್ನು ಕುತ್ಲೂರು ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಧ್ವನಿ ಎತ್ತುವಂತೆ ಹೋರಾಟ ಮಾಡಲಾಗಿದೆ. ನೆರಿಯ ಗ್ರಾಮದ ಸುಂದರ ಮಲೆಕುಡಿಯ ಕಾಟಾಜೆ ಅವರ ಮೇಲೆ ಕಳೆ ಕೊಚ್ಚುವ ಯಂತ್ರದಲ್ಲಿ ದಾಳಿಯಾದಾಗ ನಿರಂತರವಾಗಿ ಅವರ ಕುಟುಂಬದ ಪರವಾಗಿ ನಿಂತಿರುವುದು ನಾನೇ. ನಿಡ್ಲೆ ಗ್ರಾಮದ ಮಲೆಕುಡಿಯ ಸಮುದಾಯಕ್ಕೆ ಸರ್ಕಾರದ ನೀರಾವರಿ ಸೌಲಭ್ಯವನ್ನು ಮಧ್ಯವರ್ತಿಗಳ ಮೂಲಕ ಒದಗಿಸಿ ಕೆಲಸವನ್ನು ಮಾಡಿಸದೆ ಅನಕ್ಷರಸ್ಥ ವ್ಯಕ್ತಿಗೆ ಸರ್ಕಾರದಿಂದ ಹಣವನ್ನೂ ನೀಡದೆ ಮಧ್ಯವರ್ತಿಗಳು ದುರುಪಯೋಗ ಮಾಡಿಕೊಂಡು ಪ್ರಕರಣದಲ್ಲಿ ಅಧಿಕಾರಿ ಸೇರಿದಂತೆ ಮಧ್ಯವರ್ತಿಗಳ ಮೇಲೆ ಕ್ರಿಮಿನಲ್ ಕೇಸ್ ಮಾಡಿ ಅಧಿಕಾರಿಯನ್ನು ಅಮಾನತು ಮಾಡಲು ಕಾರಣಕರ್ತರಾಗಿದ್ದು ನಾನೇ. ಇಂತಹ ನೂರಾರು ನಾನು ಮಲೆಕುಡಿಯ ಸಮುದಾಯದ ಪರವಾಗಿ ಮಾಡಲು ನನಗೆ ಯಾವ ದೊಣ್ಣೆ ನಾಯಕನೂ ಜಿಪಿಎ ಕೊಟ್ಟಿಲ್ಲ. ಮುಂದೆಯೂ ಬೇಕಾಗಿಲ್ಲ. ಅತ್ಯಂತ ಶೋಷಿತ ಜನರ ಪರವಾಗಿ ಧ್ವನಿ ಎತ್ತುವುದು ನನ್ನ ನಿಜವಾದ ಧರ್ಮ. ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸಾಯುವ ತನಕವೂ ಮಲೆಕುಡಿಯ ಸಮುದಾಯದ ಪರವಾಗಿ ಕೆಲಸ ಮಾಡುತ್ತೇನೆ. ತಾಕತ್ತಿದ್ದರೆ ತಡೆಯಿರಿ ಎಂದು ಶೇಖರ್ ಲಾಯಿಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಆದಿವಾಸಿ ಸಮನ್ವಯ ಸಮಿತಿಯ ಬೆಳ್ತಂಗಡಿ ತಾಲೂಕು ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ಪದಾಧಿಕಾರಿಗಳಾದ ಲೋಕೇಶ್ ನಡ ಮತ್ತು ನವೀನ್ ಉಪಸ್ಥಿತರಿದ್ದರು.









