ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆಸುಹಾಸ್ ಶೆಟ್ಟಿ ಹತ್ಯೆ ಆರೋಪಿಗಳಿಂದ ಕೃತ್ಯ-ಕೇಸ್ ದಾಖಲು

0

ಬೆಳ್ತಂಗಡಿ: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ವಾರ್ಡರ್‌ಗೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಬಜರಂಗದಳದ ಮುಂದಾಳು ಆಗಿದ್ದ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕೇಸು ದಾಖಲಾಗಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾರಿಂಜ ಸಮೀಪದ ಪುಳಿಮಜಲು ನಿವಾಸಿಯಾಗಿದ್ದು, ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದ, ಸುಹಾಸ್ ಶೆಟ್ಟಿ ಅವರನ್ನು ಮಂಗಳೂರಿನ ಬಜ್ಪೆ ಬಳಿಯ ಕಿನ್ನಿಪದವಿನಲ್ಲಿ ೨೦೨೫ರ ಮೇ ೧ರಂದು ರಾತ್ರಿ ಬರ್ಬರವಾಗಿ ಹತ್ಯೆ ಮಾಡಿರುವ ಆರೋಪದಡಿ ಬಂಧಿತರಾಗಿರುವ ಮೊಹಮದ್ ಮುಶಾಮೀರ್, ಅಬ್ದುಲ್ ಶಪ್ಸನ್, ಮೊಹ್ಮದ್ ರಿಜ್ವಾನ್, ನಿಯಾಜ್ ಹಾಗೂ ಖಲಂದರ್ ಅವರು ಸೆ.೨ರಂದು ಬೆಳಿಗ್ಗೆ ಕಾರಾಗೃಹದ ಅನೆಕ್ಸ್ ೧ರಲ್ಲಿ ಸಿಬ್ಬಂದಿ ಮಂಜುನಾಥ್ ಹವೇಲಿ ಅವರು ಕರ್ತವ್ಯದಲ್ಲಿದ್ದಾಗ ಅವರನ್ನು ಬಲವಂತವಾಗಿ ನಾಲ್ಕನೇ ಕೊಠಡಿಗೆ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ. ವಾರ್ಡರ್ ಮಂಜುನಾಥ ಹವೇಲಿ ಅವರ ಮುಖ ಹಾಗೂ ಮೂಗಿಗೆ ಮುಷ್ಠಿಯಿಂದ ಬಲವಾಗಿ ಗುದ್ದಿದ್ದಲ್ಲದೆ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾರೆ. ತಕ್ಷಣವೇ ಇತರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಾರ್ಡನ್ ಅವರನ್ನು ರಕ್ಷಿಸಿದ್ದಾರೆ ಎಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಹಲ್ಲೆಗೆ ಕಾರಣ: ಆ. ೨೨ರಂದು ಆರೋಪಿಗಳು ಜೈಲಿನೊಳಗೆ ಕೆಲವು ನಿಷೇಧಿತ ವಸ್ತುಗಳನ್ನು ತರಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಜಾಗರೂಕರಾಗಿ ಕಾರ್ಯಾಚರಣೆ ನಡೆಸಿದ್ದ ವಾರ್ಡರ್ ಮಂಜುನಾಥ್ ಅವರು ಆ ವಸ್ತುಗಳನ್ನು ತಡೆದು ಜೈಲಿನ ನಿಯಮಗಳನ್ನು ಬಿಗಿಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ಪ್ರತೀಕಾರ ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾರೆ ಎಂದು ಕೇಸ್ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ವಾರ್ಡರ್ ಮಂಜುನಾಥ್ ಹವೇಲಿ ನೀಡಿದ ದೂರಿನನ್ವಯ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸುಹಾಸ್ ಶೆಟ್ಟಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸುತ್ತಿದೆ. ಕೊಲೆ ಕೃತ್ಯಕ್ಕೆ ಸಂಬಂಧಿಸಿ ಈಗಾಗಲೇ ಅಬ್ದುಲ್ ಸಫ್ವಾನ್, ನಿಯಾರh, ಮೊಹಮ್ಮದ್ ಮುಶಾಮಿರ್, ಖಲಂದರ್ ಶಾಫಿ, ಆದಿಲ್ ಮೊಹರೂಫ್, ಮೊಹಮ್ಮದ್ ರಿಝ್ವಾನ್, ನಾಗರಾಜ್, ರಂಜಿತ್, ಅಝರುದ್ದೀನ್, ಅಬ್ದುಲ್ ಖಾದರ್ ಅಲಿಯಾಸ್ ನೌಫಲ್, ನೌಶಾದ್ ಅಲಿಯಾಸ್ ವಾಮಂಜೂರು ನೌಶಾದ್ ಅಲಿಯಾಸ್ ಚೊಟ್ಟೆ ನೌಷಾದ್‌ನನ್ನು ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here