








ಬೆಳ್ತಂಗಡಿ: ಪೊಲೀಸ್ ಅಧಿಕಾರಿಗಳು ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ತನಿಖೆಗೆ ಆದೇಶಿಸಿದೆ. ಈ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆ ಸಹಿತ ವಿವಿಧೆಡೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ಅಮಾನತಿನಲ್ಲಿರುವ ಮೂಡುಬಿದಿರೆ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಉನ್ನತಾಧಿಕಾರಿಗಳಿಂದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಆಯೋಗ ನಿರ್ದೇಶನ ನೀಡಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಚೋಳ್ಯಾಡಿ ರಸ್ತೆ ನಿವಾಸಿ ಸುಮತಿ ನಾಯ್ಕ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು. ತಮ್ಮ ಗಮನಕ್ಕೆ ತರದೆ ಆಧಾರ್ ಸಂಖ್ಯೆ, ಮೊಬೈಲ್ ವಿವರ, ಪಾಸ್ಪೋರ್ಟ್ ಸೇರಿದಂತೆ ಅತ್ಯಂತ ಗೌಪ್ಯ ವೈಯಕ್ತಿಕ ದತ್ತಾಂಶಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂದು ಸುಮತಿ ನಾಯ್ಕ ದೂರಿನಲ್ಲಿ ಆರೋಪಿಸಿದ್ದರು. ದೂರು ಪರಿಶೀಲಿಸಿದ ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಅವರು ತನಿಖೆಗೆ ಆದೇಶಿಸಿ ಅಧಿಕೃತ ನಿರ್ದೇಶನ ಹೊರಡಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರು ಹಿರಿಯ ಅಧಿಕಾರಿಯ ಮೂಲಕ ಸಮಗ್ರ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಅಕ್ಟೋಬರ್ ತಿಂಗಳಿನೊಳಗೆ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.









