ಕುವೆಟ್ಟು , ಮಡಂತ್ಯಾರು, ಉಜಿರೆ ಮತ್ತು ಲಾಲ ಗ್ರಾ.ಪಂ. ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ-ಕಡತ ಪರಿಶೀಲನೆ

0

ಬೆಳ್ತಂಗಡಿ: ಕುವೆಟ್ಟು ಮತ್ತು ಮಡಂತ್ಯಾರು ಗ್ರಾಮ ಪಂಚಾಯತ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಸೆ.೮ರಂದು ಮತ್ತು ಲಾಲ ಹಾಗೂ ಉಜಿರೆ ಗ್ರಾಮ ಪಂಚಾಯತ್ ಕಚೇರಿಗೆ ಸೆ. ೯ರಂದು ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ. ಬೆಳಗ್ಗೆ ೧೦ ಗಂಟೆ ವೇಳೆಗೆ ಗ್ರಾಮ ಪಂಚಾಯತ್ ಕಚೇರಿಗೆ ದಿಢೀರ್ ಭೇಟಿದ ಲೋಕಾಯುಕ್ತ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ನಡೆಸಿ ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಕಡತ ವಿಲೇವಾರಿಯಲ್ಲಿ ವಿಳಂಬವಾಗುತ್ತಿರುವ ಕುರಿತು ಸಾರ್ವಜನಿಕರಿಂದ ಲೋಕಾಯುಕ್ತ ಕೇಂದ್ರ ಕಚೇರಿಗೆ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವ ಅಧಿಕಾರಿಗಳು ಹಲವು ಸರಕಾರಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಸೆ.೮ ಮತ್ತು ೯ರಂದು ಗ್ರಾಮ ಪಂಚಾಯತ್ ಕಚೇರಿಗಳಿಗೂ ದಾಳಿ ಮಾಡಿದ್ದಾರೆ. ಕಾರವಾರ, ಉಡುಪಿ ಮತ್ತು ಮಂಗಳೂರಿನ ಲೋಕಾಯುಕ್ತ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ದಿಢೀರ್ ದಾಳಿ ಸಂಘಟಿಸಿತ್ತು.

ಲೋಕಾಯುಕ್ತ ಕೇಂದ್ರ ಕಚೇರಿಗೆ ವರದಿ ಸಲ್ಲಿಕೆ: ಲೋಕಾಯುಕ್ತ ಕೇಂದ್ರ ಕಚೇರಿಯಲ್ಲಿ ದಾಖಲಾಗಿರುವ ಸುಮೊಟೋ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ಕಚೇರಿಗಳಿಗೆ ಮಂಗಳೂರು ಲೋಕಾಯುಕ್ತ ವಿಭಾಗದ ಎಸ್ಪಿ ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಘಟಕದ ಪೊಲೀಸ್ ಉಪಾಧಿಕ್ಷಕರಾದ ಡಾ.ಗಾನ ಪಿ. ಕುಮಾರ್, ಸುರೇಶ್ ಕುಮಾರ್, ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಕಾರವಾರ ಲೋಕಾಯುಕ್ತ ಘಟಕದ ಪೊಲೀಸ್ ಉಪಾಧೀಕ್ಷಕರಾದ ಧನ್ಯ ನಾಯಕ್, ಪೊಲೀಸ್ ನಿರೀಕ್ಷಕರಾದ ರವಿ ಎನ್‌ಎನ್, ಉಡುಪಿ ಲೋಕಾಯುಕ್ತ ಘಟಕದ ಪೊಲೀಸ್ ಉಪಾಧೀಕ್ಷಕರಾದ ಹಾಲಮೂರ್ತಿ ರಾವ್ ವಿ.ಎಸ್, ಪೊಲೀಸ್ ನಿರೀಕ್ಷಕರಾದ ಮಂಜುನಾಥ ಅವರು ಸಿಬ್ಬಂದಿಯವರೊಂದಿಗೆ ದಿಢೀರ್ ಭೇಟಿ ನೀಡಿದ್ದು ಅಲ್ಲಿನ ನ್ಯೂನ್ಯತೆಯ ಬಗ್ಗೆ ಲೋಕಾಯುಕ್ತ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಲೋಕಾಯುಕ್ತ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here