






ಬೆಳ್ತಂಗಡಿ: ಗೇರುಕಟ್ಟೆ ಸಮೀಪದ ಸಂಭೋಳ್ಯದ ಬಾಲಕ ಸುಮಂತ್ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಮುಂದುವರಿದಿದೆ. ಆ.೨೮ರಂದು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸುಮಂತ್ ಸಹೋದರ ಸುದರ್ಶನ್, ಆ.೨೯ರಂದು ಮಾವಂದಿರಾದ ರಾಧಾಕೃಷ್ಣ, ಸೆ.೧ರಂದು ಲಕ್ಷ್ಮಿನಾರಾಯಣರವರ ಬ್ರೈನ್ ಮ್ಯಾಪಿಂಗ್ ನಡೆದಿದೆ. ಸುಮಂತ್ ಸಹೋದರ, ನಿಟ್ಟೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಸುದರ್ಶನ್ರವರನ್ನು ಅಂದಾಜು ನಾಲ್ಕು ಗಂಟೆ ಕಾಲ, ಪೆರ್ಲದವರಾಗಿದ್ದು ಅರ್ಚಕರಾಗಿರುವ ರಾಧಾಕೃಷ್ಣ ಮತ್ತು ಕಾಸರಗೋಡಿನವರಾಗಿದ್ದು ಅಡುಗೆ ವೃತ್ತಿ ಮಾಡುತ್ತಿರುವ ಲಕ್ಷ್ಮೀನಾರಾಯಣ ಅವರನ್ನು ಅಂದಾಜು ೩ ಗಂಟೆ ಕಾಲ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಈ ಮೂವರು ಕೂಡ ಪ್ರಕ್ರಿಯೆ ಮುಗಿಸಿ ಊರಿಗೆ ವಾಪಸ್ ಆಗಿದ್ದಾರೆ.


ಆ.೧೦ ಮತ್ತು ೧೧ರಂದು ನಡೆದಿತ್ತು ಪ್ರಶ್ನೋತ್ತರ: ಆ.೧೦ ಮತ್ತು ೧೧ರಂದು ಸುಮಂತ್ ಅವರ ತಂದೆ ಸುಬ್ರಹ್ಮಣ್ಯ ನಾಯಕ್, ತಾಯಿ ರತ್ನಾವತಿ, ಸಹೋದರ ಸುದರ್ಶನ್, ರತ್ನಾವತಿ ಅವರ ತಮ್ಮ ರಾಧಾಕೃಷ್ಣ ಮತ್ತು ರತ್ನಾವತಿ ಅವರ ದೊಡ್ಡಪ್ಪನ ಮಗ ಲಕ್ಷ್ಮಿನಾರಾಯಣ ಅವರ ಮೊದಲ ಹಂತದ ಪ್ರಶೋತ್ತರ ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆದಿತ್ತು. ಕೃಷಿಕರಾಗಿರುವ ಸುಬ್ರಹ್ಮಣ್ಯ ನಾಯಕ್ ಮತ್ತು ಗೃಹಿಣಿಯಾಗಿರುವ ರತ್ನಾವತಿ ಅವರನ್ನು ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆಗೆ ಒಳಪಡಿಸಿಲ್ಲ.
ಘಟನೆ ಹಿನ್ನಲೆ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ೨೦೨೬ರ ಜ.೧೪ರಂದು ಮುಂಜಾನೆ ಧನುಪೂಜೆಗೆ ತೆರಳಿದ್ದ ಗೇರುಕಟ್ಟೆ ಸಮೀಪದ ಓಡಿಲ್ನಾಳ ಗ್ರಾಮದ ಸಂಭೋಳ್ಯ ನಿವಾಸಿ ಸುಮಂತ್ (೧೫) ಅವರು ಸಂಶಯಾಸ್ಪವಾಗಿ ಸಾವನ್ನಪ್ಪಿ ಮನೆಯ ಸಮೀಪದ ನೆರೆಮನೆಯವರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಸಾವಿನ ಪ್ರಕರಣದ ನಿಗೂಢತೆ ಬಯಲಿಗೆಳೆಯಲು ಪೊಲೀಸ್ ಇಲಾಖೆ ಹರಸಾಹಸ ಪಟ್ಟಿದ್ದರೂ ಈ ಕೇಸ್ ನಿಗೂಢವಾಗಿಯೇ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆಯ ಪ್ರಯೋಗ ನಡೆಸಲಾಗಿದೆ. ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ೯ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಪ್ರತಿಭಾನ್ವಿತ ಬಾಲಕ ಸುಮಂತ್ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂಬ ಸಂಶಯದ ಆಧಾರದಲ್ಲಿ ತಂಡ ರಚಿಸಿ ತನಿಖೆ ನಡೆಸಿದ್ದ ಪೊಲೀಸ್ ಇಲಾಖೆ ಯಾವುದೇ ಫಲಿತಾಂಶ ದೊರಕದೆ ನಿರಾಶೆಗೊಳಗಾಗಿದ್ದು ಇದೀಗ ಕೊನೇಯ ಅಸ್ತ್ರವಾಗಿ ಶಂಕಿತರನ್ನು ಮಂಪರು ಪರೀಕ್ಷೆ ನಡೆಸಲು ಮುಂದಾಗಿದೆ. ಪ್ರಕರಣದ ತನಿಖಾಧಿಕಾರಿಯಾಗಿರುವ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್. ಅವರು ಮಂಪರು ಪರೀಕ್ಷೆಗೆ ಒಳಪಡಿಸಲು ಕೋರ್ಟ್ ಅನುಮತಿ ಪಡೆದು ಪ್ರಕ್ರಿಯೆ ನಡೆಸಿದರು.
ಶಂಕಿತರಿಗೆ ಬಲೆ: ಸುಮಂತ್ ಅವರ ಮನೆಯವರು ಸೇರಿದಂತೆ ಐವರ ಮಂಪರು ಪರೀಕ್ಷೆ ನಡೆಸಿದ ಬಳಿಕ ಶಂಕಿತರ ಬ್ರೈನ್ ಮ್ಯಾಪಿಂಗ್ ನಡೆಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಪೊಲೀಸರ ಕಾರ್ಯಾಚರಣೆಯ ಬಗ್ಗೆ ಸುಮಂತ್ ತಂದೆ ಸುಬ್ರಹ್ಮಣ್ಯ ನಾಯಕ್ ವಿಶ್ವಾಸವಿರಿಸಿದ್ದು ಮನೆಯವರ ಬ್ರೈನ್ ಮ್ಯಾಪಿಂಗ್ ನಂತರ ಶಂಕಿತರನ್ನು ಮಾಡಲೇಬೇಕೆಂದು ಮನವಿ ಮಾಡಿದ್ದಾರೆ.









