






ಬೆಳ್ತಂಗಡಿ: ತಾಲೂಕಿನ ಉರುವಾಲು ಗ್ರಾಮದ ನೆಕ್ಕಿಲು ದ.ಕ.ಜಿ.ಪಂ.ಕಿ ಪ್ರಾ.ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಸಂಧ್ಯಾರಾಣಿ .ಕೆ ರವರ ಬೀಳ್ಕೊಡುಗೆ ಮತ್ತು ಊರ ದಾನಿಗಳಾದ ಪದ್ಮನಾಭ ಶಿಲ್ಪಿ ಅವರು ನೀಡಿರುವ 50,000 ರೂ ಮೌಲ್ಯದ ಸ್ಮಾರ್ಟ್ ಟಿವಿ ಉದ್ಘಾಟನಾ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್. ಡಿ . ಎಮ್ .ಸಿ ಅಧ್ಯಕ್ಷ ಅಬ್ದುಲ್ ಶರೀಫ್ ವಹಿಸಿದ್ದರು ಸಮಾರಂಭದಲ್ಲಿ ಸುಮಾರು ಏಳು ವರ್ಷಗಳ ಕಾಲ ಶಿಕ್ಷಕರಾಗಿ ಮತ್ತು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸಂಧ್ಯಾರಾಣಿ ಕೆ ಇವರನ್ನು ಸನ್ಮಾನಿಸಲಾಯಿತು.
ಕುಪ್ಪೆಟ್ಟಿ ಶಾಲಾ ಮುಖ್ಯ ಶಿಕ್ಷಕಿ ಶಬಾನ ಬಾನು ಮಾತನಾಡಿ ಸಂಧ್ಯಾ ಮೇಡಂ ತುಂಬಾ ಕ್ರಿಯಾಶೀಲ ವ್ಯಕ್ತಿತ್ವ ಉಳ್ಳವರು ನಮಗೆಲ್ಲ ಮಾದರಿಯಾಗಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹಳೆ ವಿದ್ಯಾರ್ಥಿಗಳು, ಪೋಷಕರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮೇಡಂರವರಿಗೆ ಪ್ರೀತಿಯಿಂದ ಉಡುಗೊರೆಗಳನ್ನು ನೀಡಿ ಗೌರವಿಸಿದರು.


ಊರ ಕೊಡುಗೈ ದಾನಿ ಪದ್ಮನಾಭ ಶಿಲ್ಪಿ ಪಿಲಿಗೂಡು ಇವರು ಶಾಲೆಗೆ 50,000 ಮೌಲ್ಯದ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಿ ಉದ್ಘಾಟಿಸಲಾಯಿತು. ಇದರಿಂದ ಮಕ್ಕಳಿಗೆ ಡಿಜಿಟಲ್ ಕಲಿಕೆ ಸಾಧ್ಯವಾಗುವಂತೆ ಅವಕಾಶ ಕಲ್ಪಿಸಿದ್ದಾರೆ ಎಂದು ಮಕ್ಕಳು, ಶಿಕ್ಷಕರು ಮತ್ತು SDMC ಸದಸ್ಯರು ಅಭಿಪ್ರಾಯ ಹಂಚಿಕೊಂಡರು. ಶಾಲೆಯ ಪರವಾಗಿ ಅವರನ್ನು ಸನ್ಮಾನಿಸಲಾಯಿತು.
ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ವಿನಯ , ಶಾಲೆಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ತನು, ಮನ, ಧನದಿಂದ ಸಹಕಾರ ನೀಡುತ್ತಿರುವ ಸುರೇಶ ಎಚ್ ಎಲ್ ಸಮಾಜ ಸೇವಕರು, ಅಬ್ದುಲ್ ಶುಕುರು ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಮತ್ತು ಬಾಬು ನಾಯ್ಕ ಹಲೇಜಿ ಇವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕುಪೆಟ್ಟಿ ಮತ್ತು ಕರಾಯ ಕ್ಲಸ್ಟರಿನ ಮುಖ್ಯ ಶಿಕ್ಷಕರು, ಸಹಶಿಕ್ಷಕರು,ಅತಿಥಿ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಪೋಷಕರು, ಎಸ್ ಡಿ ಎಂ ಸಿ ಸದಸ್ಯರು ಮತ್ತು ಶಾಲೆಯ ಅಡುಗೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಮುಖ್ಯ ಶಿಕ್ಷಕಿ ಲೀಲಾವತಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಅತಿಥಿ ಶಿಕ್ಷಕರಾದ ಕಾವ್ಯ ಮತ್ತು ಗೌರವ ಶಿಕ್ಷಕಿ ರಕ್ಷಿತಾರವರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ನಡೆಸಿಕೊಟ್ಟರು.









