ವಿದ್ಯಾರ್ಥಿನಿಯ ಅತ್ಯಾಚಾರ ಆರೋಪ: ವೇಣೂರಿನ ಜಮಾಲುದ್ದೀನ್ ಬಂಧನ-ಪೋಕ್ಸೋ ಕಾಯ್ದೆಯ ಎಫ್‌ಐಆರ್ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

0

ಬೆಳ್ತಂಗಡಿ: ದೂರದಲ್ಲಿ ತನಗೆ ಸಂಬಂಧಿಕಳಾಗಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದಡಿ ವೇಣೂರಿನ ರಿಕ್ಷಾ ಚಾಲಕ ಜಮಾಲುದ್ದೀನ್ ಎಂಬಾತನನ್ನು ವೇಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತ ಪ್ರಾಯದ ಸಂತ್ರಸ್ತ ಬಾಲಕಿ (೧೪) ಕೆಲವು ತಿಂಗಳುಗಳಿಂದ ವೇಣೂರು ನಿವಾಸಿ ಜಮಾಲುದ್ದೀನ್ ಎಂಬಾತನ ರಿಕ್ಷಾದಲ್ಲಿ ಶಾಲೆಗೆ ಹೋಗಿ ಬರುತ್ತಿದ್ದಳು. ಈ ವೇಳೆ ಜಮಾಲುದ್ದೀನ್ ಅನುಚಿತವಾಗಿ ವರ್ತಿಸುತ್ತಿದ್ದ. ಈ ಬಗ್ಗೆ ಬಾಲಕಿ ಪ್ರತಿರೋಧಿಸಿದಾಗ ಜಮಾಲುದ್ದೀನ್ ಜೀವ ಬೆದರಿಕೆ ಒಡ್ಡಿದ್ದ. ಇದರಿಂದಾಗಿ ಹೆದರಿದ್ದ ಬಾಲಕಿ ಆತನ ವರ್ತನೆಯ ಬಗ್ಗೆ ಯಾರಿಗೂ ತಿಳಿಸಿಲ್ಲ. ಆ.೧೩ರಂದು ಸಂಜೆ ಬಾಲಕಿ ಆಕೆಯ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ಬಂದ ಜಮಾಲುದ್ದೀನ್ ಆಕೆಯನ್ನು ಬೆದರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಆ. ೧೫ರಂದು ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. ೫೬/೨೦೨೬ರಂತೆ ಕಲಂ ೭೫(೨), ೬೪(೧), ೬೫(೧), ೩೫೧(೩) ಃಓS ೨೦೨೩ ಮತ್ತು ಕಲಂ: ೪(೨), ೮, ೧೨ ಪೋಕ್ಸೋ ಕಾಯಿದೆ ೨೦೧೨ರಡಿ ಪ್ರಕರಣ ದಾಖಲಾಗಿದೆ. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಜಮಾಲುದ್ದೀನನ್ನು ಆ.೧೫ರಂದು ಬಂಧಿಸಿದ್ದಾರೆ.ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಜಾಲತಾಣಗಳಲ್ಲಿ ಎಫ್‌ಐಆರ್ ಪ್ರತಿ ರವಾನೆ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಥಮ ವರ್ತಮಾನ ವರದಿಯ ಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ವಿವಾದಕ್ಕೆ ಕಾರಣವಾಗಿದೆ. ಪೋಕ್ಸೋದಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಗೌಪ್ಯತೆ ಕಾಪಾಡಬೇಕಾದ ಅನಿವಾರ್ಯತೆ ಇರುವಾಗ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ವಿವರ ಇರುವ ಎಫ್‌ಐಆರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಪ್ರಕರಣದ ಗಂಭೀರತೆಯನ್ನು ಪ್ರಶ್ನಿಸುವಂತಾಗಿದೆ. ಎಫ್‌ಐಆರ್ ಪ್ರತಿ ಹರಿದಾಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಆಕ್ರೋಶ ಹೊರ ಹಾಕಿದ್ದಾರೆ. ಬಾಲಕಿಗೆ ನ್ಯಾಯ ಒದಗಿಸಬೇಕಾದ ತುರ್ತು ಇರುವ ಈ ಸಂದರ್ಭದಲ್ಲಿ ಎಫ್‌ಐಆರ್ ಪ್ರತಿಯನ್ನು ಜಾಲತಾಣಗಳಲ್ಲಿ ಹರಿಯಬಿಟ್ಟು ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಘನತೆಗೆ ಧಕ್ಕೆ ತರಲಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ವೈರಲ್ ಮಾಡಿದವರ ವಿರುದ್ಧ ಕ್ರಮ: ಸಂತ್ರಸ್ತೆ ನೀಡಿದ ಹೇಳಿಕೆಯ ಆಧಾರದಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರುದಾರರಿಗೆ ಹೇಳಿಕೆಯ ಪ್ರತಿಯೊಂದನ್ನು ನೀಡಿರುವಾಗ ಸಂತ್ರಸ್ತೆಯ ಹೆಸರು, ವಿಳಾಸ ಹಾಗೂ ಕೆಲ ವೊಂದು ಅಂಶಗಳನ್ನು ತೆಗೆದು ಹಾಕಲಾಗಿದೆ. ಪೋಕ್ಸೋ ಕಾಯಿದೆಯಡಿ ದಾಖಲಾಗಿರುವ ಈ ಪ್ರಕರಣದ ಎಫ್‌ಐಆರ್ ಕಾಪಿಯನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ಪ್ರಕಟ
ಮಾಡುವುದಕ್ಕೆ ಮತ್ತು ಪ್ರಸಾರ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಇಡದ್ದಾರೆ.

LEAVE A REPLY

Please enter your comment!
Please enter your name here