






ಬೆಳ್ತಂಗಡಿ: ಪರವಾನಗಿ ಹೊಂದಿದ ಬಂದೂಕುಗಳನ್ನು ಬಳಸಿ ಕೊಲೆ ಪ್ರಕರಣ ನಡೆದ ಬೆನ್ನಲ್ಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪೊಲೀಸರ ಕಣ್ಣು ಬಂದೂಕಿನ ಮೇಲೆ ಬಿದ್ದಿದೆ. ಆಯುಧಗಳಲ್ಲಿ ಕಾನೂನುಬಾಹಿರ ಮಾರ್ಪಾಡು ಮಾಡುವುದನ್ನು ಮತ್ತು ಪರವಾನಗಿ ನಿಯಮ ಉಲ್ಲಂಘನೆ ಆಗುವುದನ್ನು ತಡೆಯಲು ೧೩ ಸಾವಿರಕ್ಕೂ ಹೆಚ್ಚು ಬಂದೂಕು ಪರವಾನಗಿದಾರರ ವಿವರವಾದ ಮರುಪರಿಶೀಲನಾ ಅಭಿಯಾನ ಆರಂಭಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ೧೦,೧೬೧ ಬಂದೂಕು ಪರವಾನಗಿ ನೀಡಲಾಗಿದೆ. ಇವುಗಳಲ್ಲಿ ೮,೩೬೯ ಪರವಾನಗಿ ಜಿಲ್ಲಾ ಗ್ರಾಮಾಂತರ ಪೊಲೀಸ್ ವ್ಯಾಪ್ತಿಯದ್ದಾದರೆ ೧,೭೯೨ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಒಳಪಟ್ಟಿವೆ. ಇದರಲ್ಲಿ ಸಾವಿರ ಬಂದೂಕು ಸ್ವಯಂರಕ್ಷಣೆ ಉzಶಕ್ಕಾಗಿ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಬೆಳೆ ರಕ್ಷಣೆಗಾಗಿ ೩,೫೦೦ ಮತ್ತು ಆತ್ಮ ರಕ್ಷಣೆಗೆ ೨೫೦ ಬಂದೂಕು ಪರವಾನಗಿಗಳನ್ನು ನೀಡಲಾಗಿದೆ. ಸಾಮಾನ್ಯವಾಗಿ ರಾಜಕಾರಣಿಗಳು, ಮಾಜಿ ಪೊಲೀಸ್ ಸಿಬ್ಬಂದಿ, ಮಾಜಿ ಸೈನಿಕರು ಹಾಗೂ ಜೀವ ಬೆದರಿಕೆ ಇರುವ ವ್ಯಕ್ತಿಗಳಿಗೆ ಸ್ವಯಂರಕ್ಷಣೆಯ ಪರವಾನಗಿ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.೯೦ಕ್ಕೂ ಹೆಚ್ಚು ಪರವಾನಗಿಗಳನ್ನು ರೈತರಿಗೆ ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ನೀಡಲಾಗುತ್ತದೆ.


ಆದರೆ ಇತ್ತೀಚೆಗೆ ಉಡುಪಿಯಲ್ಲಿ ನಡೆದ ಉದ್ಯಮಿ ರಿಚರ್ಡ್ ಮಸ್ಕರೇನ್ಹಸ್ ಕೊಲೆಯಲ್ಲಿ ಆರೋಪಿ ಡೆರಿಕ್ ಕ್ರಾಸ್ತಾ ಬೆಳೆ ರಕ್ಷಣೆಗೆಂದು ಪಡೆದಿದ್ದ ಪರವಾನಗಿ ಬಂದೂಕನ್ನು ಹಣಕಾಸಿನ ವಿವಾದಕ್ಕೆ ಬಳಸಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಕರಣದ ತನಿಖೆ ವೇಳೆ ಆರೋಪಿ ಬಂದೂಕಿನ ಬ್ಯಾರಲ್ ಕಡಿತಗೊಳಿಸಿರುವುದು ತಿಳಿದು ಬಂದಿದೆ. ಆಯುಧ ಕಾಯ್ದೆ ತಿದ್ದುಪಡಿ ೨೦೧೯ರ ಪ್ರಕಾರ ಬಂದೂಕಿನಲ್ಲಿ ಬದಲಾವಣೆ ಮಾಡುವುದು ಅಪರಾಧ. ಈ ಹಿನ್ನೆಲೆಯಲ್ಲಿ ಬಂದೂಕುಗಳನ್ನು ತಿದ್ದುಪಡಿ ಮಾಡಲಾಗಿದೆಯೇ ಅಥವಾ ಪರವಾನಗಿ ಷರತ್ತುಗಳನ್ನು ಉಲ್ಲಂಸಲಾಗಿದೆಯೇ ಎಂಬುದರ ಪತ್ತೆಗೆ ತನಿಖೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇತ್ತೀಚಿನ ವರ್ಷದಲ್ಲಿ ಪರವಾನಗಿ ಹೊಂದಿದ ಬಂದೂಕುಗಳಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಪುತ್ತೂರಿನ ಕೆದಿಲದ ಶ್ಯಾಮ್ ಪ್ರಸಾದ್ ಶಾಸ್ತ್ರಿ ಎಂಬವರು ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಡಬ ತಾಲೂಕಿನ ರಾಮ್ಕುಂಜದಲ್ಲಿ ವಸಂತ ಅಮಿನ್ ಎಂಬವರ ಪುತ್ರ ಕೂಡ ಬಂದೂಕು ಅವಘಡದಲ್ಲಿ ಮೃತರಾಗಿದ್ದಾರೆ. ಅಲ್ಲದೆ ಇತರೆಡೆ ಬಂದೂಕು ಮಾಲೀಕರು ಮೃತಪಟ್ಟ ನಂತರ ಅವರ ಎರಡು ಆಯುಧಗಳು ಕಾಣೆಯಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮಾಲೀಕರ ಸಾವಿನ ನಂತರ ಬಂದೂಕುಗಳ ಸುಪರ್ದಿಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸ್ಪಷ್ಟವಾಗಿದೆ. ಮಂಗಳೂರು ನಗರ ವ್ಯಾಪ್ತಿಯಲ್ಲಿ ಹೊಸ ಬಂದೂಕು ಪರವಾನಗಿ ನೀಡುವಾಗ ಕಟ್ಟುನಿಟ್ಟಾಗಿ ನಿಯಮ ಪಾಲಿಸಲಾಗುತ್ತಿದೆ. ನೈಜ ಜೀವ ಬೆದರಿಕೆ ಇದ್ದು ದುರ್ಬಳಕೆ ಆಗುವುದಿಲ್ಲ ಎಂಬ ಖಚಿತತೆ ಸಿಕ್ಕಿದರೆ ಮಾತ್ರ ಅರ್ಜಿ ಪುರಸ್ಕರಿಸಲಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಎರಡು ಹೊಸ ಪರವಾನಗಿಗಳನ್ನು ಮಾತ್ರ ನೀಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಂದೂಕುಗಳ ಅನಧಿಕೃತ ಬಳಕೆ, ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳ ಹಸ್ತಾಂತರ ಹಾಗೂ ಬಂದೂಕುಗಳ ಸಾಮರ್ಥ್ಯ, ವಿನ್ಯಾಸ ಬದಲಾಯಿಸುವ ಕಾನೂನುಬಾಹಿರ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಸಲಾಗುತ್ತಿದೆ. ಪರವಾನಗಿ ಹೊಂದಿರುವವರು ನಿಯಮಾವಳಿಗಳಿಗೆ ಬದ್ಧವಾಗಿದ್ದಾರೆಯೇ ಎಂಬುದನ್ನು ಭೌತಿಕವಾಗಿ ಪರಿಶೀಲಿಸುವುದು ಉzಶವಾಗಿದೆ ಎಂದು ಇಲಾಖಾ ಮೂಲಗಳು ತಿಳಿಸಿದೆ.








