






ಬೆಳ್ತಂಗಡಿ; ಮಹಿಳೆಯ ಅತ್ಯಾಚಾರ, ಚಿನ್ನಾಭರಣ ಹಾಗೂ ಹಣ ಲೂಟಿ ಪ್ರಕರಣದ ಆರೋಪಿಗೆ ಮಡಿಕೇರಿಯ ೩ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ೧೦ ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಒಟ್ಟು ೫೦ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ನ್ಯಾಯಾಧೀಶ ಸುರೇಂದ್ರ ಜಿ. ಅವರು ಆ.೧೮ರಂದು ಈ ತೀರ್ಪು ಪ್ರಕಟಿಸಿದ್ದು ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಸರಕಾರಿ ಅಭಿಯೋಜಕರಾಗಿರುವ ಬೆಳ್ತಂಗಡಿಯ ಮುಹಮ್ಮದ್ ಶೌಕತ್ಯು. ವಾದ ಮಂಡಿಸಿದ್ದರು. ಎಲ್ಲಾ ಸಾಕ್ಷಿದಾರರನ್ನು ವಿಚಾರಣೆ ನಡೆಸಿ ಸಮರ್ಥ ವಾದ ಮಂಡಿಸಿದ್ದ ಮುಹಮ್ಮದ್ ಶೌಕತ್ ಅವರು ಪ್ರಕರಣದಲ್ಲಿ ಆರೋಪಿಯಾಗಿದ್ದ ಭಾಗಮಂಡಲ ಠಾಣಾ ವ್ಯಾಪ್ತಿಯ ತೋಟ್ಲುಕುಂಞ ಚೇರಂಬಾಣೆ ನಿವಾಸಿ ಸುದರ್ಶನ್(೨೯) ಎಂಬಾತನಿಗೆ ಶಿಕ್ಷೆ ವಿಧಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.


ಪ್ರಕರಣದ ವಿವರ: ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ತೋಟ್ಲುಕುಂಞ ಚೇರಂಬಾಣೆಯಲ್ಲಿ ೨೦೨೪ರ ಆ.೨೨ರಂದು ಸಂತ್ರಸ್ತೆಯ ಮನೆಯ ಅಡುಗೆ ಕೋಣೆಯ ಬಾಗಿಲಿನ ಬಳಿ ಬೆಳಗ್ಗೆ ೧೧-೩೦ರ ವೇಳೆಗೆ ಬಂದು ಸುದರ್ಶನ್ ಹೊಂಚುಹಾಕಿ ನಿಂತಿದ್ದ. ನೀನೇಕೆ ಇಲ್ಲಿ ನಿಂತಿದ್ದೀಯಾ ಎಂದು ಸಂತ್ರಸ್ತೆ ಕೇಳಿದಾಗ ಸುದರ್ಶನ್ ಸಂತ್ರಸ್ತ ಮಹಿಳೆಯ ಕುತ್ತಿಗೆ ಹಿಡಿದು ಆಕೆಯನ್ನು ಬೆಡ್ರೂಮ್ಗೆ ಎಳೆದುಕೊಂಡು ಹೋಗಿ ಕುತ್ತಿಗೆ ಹಿಸುಕಿ ಕುತ್ತಿಗೆಯಲ್ಲಿದ್ದ ಒಂದು ಚಿನ್ನದ ಸರವನ್ನು ಕಿತ್ತುಕೊಂಡು ಚಾಕು ತೋರಿಸಿ ದುಡ್ಡು ಮತ್ತು ಚಿನ್ನ ಕೊಡು ಇಲ್ಲದಿದ್ದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ.
ನಂತರ ಸುದರ್ಶನ್ ಬಲವಂತದಿಂದ ಮಹಿಳೆಯ ಮೈ, ಕೈ ಮುಟ್ಟಿ ಬಟ್ಟೆಗಳನ್ನು ಬಿಚ್ಚಿ ಅತ್ಯಾಚಾರ ಮಾಡಿ ಪರ್ಸ್ಲ್ಲಿದ್ದ ೧೫೦೦ ರೂ ಹಣವನ್ನು ಮತ್ತು ಗೋಡ್ರೆಜ್ ಬೀರುವಿನಲ್ಲಿದ್ದ ಎರಡು ಚಿನ್ನದ ಚೈನ್, ಒಂದು ಚಿನ್ನದ ಉಂಗುರ, ಒಂದು ಜೊತೆ ಚಿನ್ನದ ಕಿವಿ ಓಲೆ ಸಹಿತ ಒಟ್ಟು ೬೨ ಗ್ರಾಂ ಚಿನ್ನಾಭರಣಗಳನ್ನು ಮತ್ತು ಮನೆಯಲ್ಲಿದ್ದ ಸಂತ್ರಸ್ತೆಯ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದ. ಈ ವೇಳೆ ಚಾಕು ತೋರಿಸಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಎಲ್ಲಾ ಪ್ರಕರಣಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಆಪರಾಧಿಗೆ ಕಠಿಣ ಶಿಕ್ಷೆ ವಿಧಿಸಿದೆ.
ಮೂರು ಪ್ರತ್ಯೇಕ ಸೆಕ್ಷನ್ಗಳಡಿ ಶಿಕ್ಷೆ ಪ್ರಕಟ: ಪ್ರಕರಣದ ಬಗ್ಗೆ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಪ್ರೇಮ್ ಕುಮಾರ್ ಎಸ್. ಜಿ ಕರ್ತವ್ಯ ನಿರ್ವಹಿಸಿದ್ದರು. ಸಾಕ್ಷಿದಾರರ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿ ಸುದರ್ಶನ್ಗೆ ಕಲಂ:೬೪(೧) ಬಿ.ಎನ್.ಎಸ್.ರಲ್ಲಿ ೧೦ ವರ್ಷ ಕಠಿಣ ಶಿಕ್ಷೆ ಮತ್ತು ರೂ.೨೫,೦೦೦ ದಂಡ, ದಂಡ ತೆರಲು ತಪ್ಪಿದ್ದಲ್ಲಿ ೬ ತಿಂಗಳ ಸಜೆ, ಕಲಂ ೩೧೧ ಜೊತೆಗೆ ೩೦೯(೩) ಬಿ.ಎನ್.ಎಸ್.ರಲ್ಲಿ ೭ ವರ್ಷ ಕಠಿಣ ಶಿಕ್ಷೆ ಮತ್ತು ರೂ.೧೫,೦೦೦ ದಂಡ, ತಪ್ಪಿದ್ದಲ್ಲಿ ೪ ತಿಂಗಳ ಸಜೆ, ಕಲಂ ೩೫೧ (೩) ಬಿ.ಎನ್.ಎಸ್.ಗೆ ೫ ವರ್ಷಗಳ ಕಠಿಣ ಸಜೆ ಮತು ರೂ.೧೦,೦೦೦ ದಂಡ, ತಪ್ಪಿದ್ದಲ್ಲಿ ೩ ತಿಂಗಳ ಸಜೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.









