ಕೊಲ್ಲಿಯಲ್ಲಿ ಬೆಳ್ಳಿ ಹಬ್ಬದ ಸಂಭ್ರಮ: 25ನೇ ವರ್ಷದ ವರಮಹಾಲಕ್ಷ್ಮಿ ಸಾಮೂಹಿಕ ಪೂಜೆ ವಿಜೃಂಭಣೆಯಿಂದ ಸಂಪನ್ನ

0

ಬೆಳ್ತಂಗಡಿ:ಧಾರ್ಮಿಕ ಪರಂಪರೆಗೆ ಸಾಕ್ಷಿಯಾದ ಮಿತ್ತಬಾಗಿಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಮಹಿಳಾ ವಿಭಾಗದ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ 25ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಶ್ರೀ ಸೂಕ್ತ ಮಹಾ ಹವನವು ಆ. 28ರಂದು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ / ದುರ್ಗಾದೇವಿ ದೇವಸ್ಥಾನದಲ್ಲಿ ಅತ್ಯಂತ ವಿಜೃಂಭಣೆ ಮತ್ತು ಭಕ್ತಿ ಭಾವದಿಂದ ನೆರವೇರಿತು.

ಮುಂಜಾನೆಯಿಂದಲೇ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ನೂರಾರು ಮಹಿಳೆಯರು ಸಾಂಪ್ರದಾಯಿಕ ಸೀರೆಯಲ್ಲಿ, ಹೂವು-ಕುಂಕುಮದಿಂದ ಶೃಂಗರಿಸಿಕೊಂಡು ಪೂಜೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ತಾಯಂದಿರು, ಮಕ್ಕಳು, ಯುವತಿಯರು ಸೇರಿದಂತೆ ಹೆಚ್ಚು ಮಹಿಳೆಯರು ಒಂದೇ ಮಂಟಪದಲ್ಲಿ ಕುಳಿತು ಸಾಮೂಹಿಕವಾಗಿ ವರಮಹಾಲಕ್ಷ್ಮಿ ವ್ರತವನ್ನು ಆಚರಿಸಿ ದೇವಿಯ ಕೃಪೆಗೆ ಪಾತ್ರರಾದರು.ಪೂಜೆಯ ಬಳಿಕ ನಡೆದ ಧಾರ್ಮಿಕ ಸಭೆಯು ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಬೆಂಗಳೂರಿನ ಪ್ರತಿಷ್ಠಿತ ಕ್ಷೇಮವನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರದ್ಧಾ ಅಮಿತ್ ಅವರು ವಹಿಸಿದ್ದಾರು.

ಮುಂಡಾಜೆಯ ಖ್ಯಾತ ಧಾರ್ಮಿಕ ಚಿಂತಕಿ ಅಶ್ವಿನಿ ಅರವಿಂದ್ ಹೆಬ್ಬಾರ್ ಅವರು ಮಾತನಾಡಿ, “ಇಂದು ಜೀವನದಲ್ಲಿ ಕೇವಲ ಸಂಪತ್ತು ಇದ್ದರೆ ಸಾಲದು. ಸಂಸ್ಕಾರ ಮತ್ತು ಧಾರ್ಮಿಕ ಮೌಲ್ಯಗಳು ಇರಬೇಕು. ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳ ವ್ಯಸನದಲ್ಲಿ ಸಿಲುಕಿ ನಮ್ಮ ಪುರಾತನ ಧಾರ್ಮಿಕ ಪರಂಪರೆ, ಆಚರಣೆಗಳನ್ನು ಮರೆಯುತ್ತಿದೆ. ದೇವಸ್ಥಾನಕ್ಕೆ ಹೋದಾಗ ಹೇಗೆ ನಡೆದುಕೊಳ್ಳಬೇಕು, ಯಾವ ರೀತಿ ಪ್ರಾರ್ಥನೆ ಮಾಡಬೇಕು ಎಂಬುದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ” ಎಂದು ಮನಮುಟ್ಟುವಂತೆ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ವರಮಹಾಲಕ್ಷ್ಮಿ ಪೂಜೆ ಸಲ್ಲಿಸಿ, ಸಮಿತಿಯ 25 ವರ್ಷಗಳ ಸೇವೆಯನ್ನು ಶ್ಲಾಘಿಸಿ ತೆರಳಿದರು. ಧರ್ಮಸ್ಥಳ ಎಸ್.ಕೆ.ಡಿ.ಆರ್.ಡಿ.ಪಿ.ಯ ಸಿಇಒ ಅನಿಲ್ ಕುಮಾರ್ ಎಸ್.ಎಸ್. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಕೊಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ದಾಸಪ್ಪ ಗೌಡ ಕಾಂಜಾನು, ಬಂಗಾಡಿ ಯಶೋಧರ ಬಳ್ಳಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಕಾಮತ್, ಮಿತ್ತಬಾಗಿಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ. ಮೋಹನ್ ಬಂಗೇರ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೇಶವ ಪಡಕೆ, ಮಹಿಳಾ ವಿಭಾಗದ ಅಧ್ಯಕ್ಷೆ ವನಿತಾ ಉಮೇಶ್, ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಮತ್ತು ಊರಿನ ನೂರಾರು ಭಕ್ತರು ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಾರಂಭದಲ್ಲಿ ಜ್ಯೋತಿ ಲಕ್ಷ್ಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.

LEAVE A REPLY

Please enter your comment!
Please enter your name here