ರಾಷ್ಟ್ರೀಯ ಹೆದ್ದಾರಿ ಪಕ್ಕದ 40 ಮೀ. ಜಾಗ ಉಚಿತ ಸ್ವಾಧೀನವಿಲ್ಲ: ಕಂದಾಯ ಸಚಿವ ಇದು ಸುದ್ದಿ ಬಿಡುಗಡೆ ವರದಿಯ ಫಲಶ್ರುತಿ

0

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ ಪಕ್ಕದ ರೈತರ ಜಮೀನಿನ 40 ಮೀಟರ್ ವ್ಯಾಪ್ತಿಯನ್ನು ಸರ್ಕಾರ ಉಚಿತವಾಗಿ ವಶಪಡಿಸಿಕೊಳ್ಳುತ್ತಿದೆ, ಮೂಡಾದಲ್ಲಿ ಭೂ ಪರಿವರ್ತನೆ ಮಾಡುವಾಗ ಹೆದ್ದಾರಿ ಪಕ್ಕದ 40 ಮೀ ರಸ್ತೆಯನ್ನು ಪರಿತ್ಯಾಜನ ಪತ್ರದ ಮೂಲಕ ಉಚಿತವಾಗಿ ಸ್ಥಳೀಯ ಸಂಸ್ಥೆಗೆ ನೀಡಬೇಕು ಎಂಬ ಅಧಿಸೂಚನೆ ಹೊರಡಿಸಲಾಗಿತ್ತು‌. ಇದರಿಂದ ಪಿತ್ರಾರ್ಜಿತ, ಸ್ವಯಾರ್ಜಿತ ಆಸ್ತಿಯನ್ನು ಕಾಪಾಡಿಕೊಂಡು ಬಂದವರು, ರೈತರು ಆತಂಕಕ್ಕೆ ಗುರಿಯಾಗಿದ್ದರು.

ಈ ಬಗ್ಗೆ ಸುದ್ದಿ ಬಿಡುಗಡೆ ವಿಸ್ತೃತ ವರದಿ ಮಾಡಿತ್ತು‌. ಇದೀಗ ಕಂದಾಯ ಸಚಿವ ಡಾ.ಜಿ ಪರಮೇಶ್ವರ್ ಈ ಆತಂಕವನ್ನು ಬಗೆ ಹರಿಸಿದ್ದಾರೆ.ವಿಧಾನಸಭೆಯಲ್ಲಿ ಶಾಸಕ ಹರೀಶ್ ಪೂಂಜಾ ಅವರು ನಿಯಮ 73ರಡಿ ಗಮನ ಸೆಳೆಯುವ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಉತ್ತರಿಸಿರುವ ಕಂದಾಯ ಸಚಿವರು, ಖಾಸಗಿ ಜಮೀನನ್ನು ಉಚಿತವಾಗಿ ಸ್ವಾಧೀನಪಡಿಸಿಕೊಳ್ಳಲಾಗುವುದಿಲ್ಲ. ಕಾನೂನು ಮತ್ತು ನಿಯಮಗಳಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಸಿ, ನಿಗದಿತ ಪರಿಹಾರ ಪಾವತಿಸಿದ ಬಳಿಕವೇ ಜಮೀನು ವಶಪಡಿಸಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಭೂಸ್ವಾಧೀನ ಕಾಯ್ದೆ–2013ರ ನಿಯಮಗಳನ್ವಯ ಮಾರುಕಟ್ಟೆ ಮೌಲ್ಯ ಹಾಗೂ ಅನ್ವಯವಾಗುವ ಪರಿಹಾರ ಸೇರಿದಂತೆ ಭೂ ಮಾಲೀಕರಿಗೆ ಪರಿಹಾರ ನೀಡಲಾಗುತ್ತದೆ. ಹೆದ್ದಾರಿ ಪಕ್ಕದ ಜಮೀನು ಸರ್ಕಾರಿ ಜಮೀನಾಗಿದ್ದರೆ ಮಾತ್ರ ಉಚಿತವಾಗಿ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಜಮೀನು ಸ್ವಾಧೀನಪಡಿಸಿಕೊಂಡ ಬಳಿಕ ಅದನ್ನು ಸಂಬಂಧಪಟ್ಟ ಸರ್ಕಾರಿ ಯೋಜನೆ ಅನುಷ್ಠಾನ ಸಂಸ್ಥೆಗೆ ಹಸ್ತಾಂತರಿಸಬೇಕಾಗಿರುವುದರಿಂದ, ಅಂತಹ ಜಮೀನನ್ನು ಭೂ ಮಾಲೀಕರ ಹೆಸರಿನಲ್ಲೇ ಉಳಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here