







ಪುದುವೆಟ್ಟು: ಶ್ರೀಧ.ಮಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪುದುವೆಟ್ಟು ಇಲ್ಲಿ 2026-27ನೇ ಸಾಲಿನ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಧ್ವಜಾರೋಹಣವನ್ನು ಹಿರಿಯ ಸಹಕಾರಿ ಧುರೀಣರು, ಸಂಘಟಕರು ಹಾಗೂ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ, ಬೆಳ್ತಂಗಡಿ ತಾಲೂಕು ಇದರ ಉಪಾಧ್ಯಕ್ಷ ಅನಂತ್ ಭಟ್ ಮಚ್ಚಿಮಲೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಪುದುವೆಟ್ಟು ಗ್ರಾಮ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷ ಯಶವಂತ್ ಗೌಡ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಶಶಿಧರ ಜಿ., ಪುದುವೆಟ್ಟು ಗ್ರಾಮ ಪಂಚಾಯತ್ನ ನಿಕಟಪೂರ್ವ ಅಧ್ಯಕ್ಷ ಅಬ್ದುಲ್ ಗಫೂರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ಶೀನಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಹಿರಿಯ ಶಿಕ್ಷಕಿ ತೇಜಾವತಿ ಉಪಸ್ಥಿತರಿದ್ದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅನಂತ್ ಭಟ್ ಮಚ್ಚಿಮಲೆ ಅವರು, ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ವಿವಿಧ ಹೋರಾಟಗಳು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿದರು. ಸ್ವಾತಂತ್ರ್ಯಾನಂತರ ಭಾರತವು ಸಾಧಿಸಿರುವ ಪ್ರಗತಿ ಹಾಗೂ ಎದುರಿಸುತ್ತಿರುವ ಸವಾಲುಗಳ ಕುರಿತು ಅವಲೋಕನ ನಡೆಸಿ, ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಬಿತ್ತಿಪತ್ರಿಕೆ “” ಸಂಚಯ “ವನ್ನು ಅನಂತ್ ಭಟ್ ಮಚ್ಚಿಮಲೆ ಅವರು ಬಿಡುಗಡೆಗೊಳಿಸಿದರು. 2026-27ನೇ ಸಾಲಿನ ಶಾಲಾ ಕ್ಯಾಲೆಂಡರ್ ಅನ್ನು ಮುಖ್ಯ ಅತಿಥಿ ಯಶವಂತ್ ಗೌಡ ಬಿಡುಗಡೆಗೊಳಿಸಿದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಯಶವಂತ್ ಗೌಡ ಅವರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿ, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸಿ. ದೇಶದ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ಉತ್ತಮ ನಾಗರಿಕರಾಗಿ ದೇಶದ ಪ್ರಗತಿಗೆ ಕೊಡುಗೆ ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಭಾಧ್ಯಕ್ಷ ಶೀನಪ್ಪ ಗೌಡರವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಪವನ್ ಕುಮಾರ್ ಸ್ವಾಗತಿಸಿದರು. ನಿಶಾಂತ್ ಕಾರ್ಯಕ್ರಮ ನಿರೂಪಿಸಿದರು. ತೇಜಾವತಿ ಧನ್ಯವಾದ ಸಮರ್ಪಿಸಿದರು.ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಕಾರ್ಯಕ್ರಮವು ದೇಶಭಕ್ತಿ, ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಹಾಗೂ ರಾಷ್ಟ್ರದ ಏಕತೆ ಮತ್ತು ಅಭಿವೃದ್ಧಿಯ ಸಂದೇಶವನ್ನು ಸಾರುವ ಮೂಲಕ ಅರ್ಥಪೂರ್ಣವಾಗಿ ನೆರವೇರಿತು.









