







ಲಾಯಿಲ, ಆಗಸ್ಟ್ 15:“ಪ್ರಯತ್ನಕ್ಕೆ ಪ್ರತಿಫಲ, ಸಾಧನೆಗೆ ಸನ್ಮಾನ!” ಎಂಬ ಸಂದೇಶವನ್ನು ಸಾರುವಂತೆ ಸೈಂಟ್ ಮೇರಿಸ್ ಆಂಗ್ಲಮಾಧ್ಯಮ ಶಾಲೆ, ಲಾಯಿಲದಲ್ಲಿ ಎಸ್.ಎಸ್.ಎಲ್.ಸಿ. 2025–26ನೇ ಸಾಲಿನ ಶೈಕ್ಷಣಿಕ ಸಾಧಕರ ಅಭಿನಂದನಾ ಸಮಾರಂಭವು ಸಂಭ್ರಮದಿಂದ ನಡೆಯಿತು.

ಈ ಅಭಿನಂದನ ಸಮಾರಂಭಕ್ಕೆಬೆಳ್ತಂಗಡಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಪೂಜ್ಯ ಮಾಣಿ ವೆಳುತೇಡತುಪರಂಬಿಲ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. *622 ಅಂಕಗಳ ಅದ್ಭುತ ಸಾಧನೆ! 625ರಲ್ಲಿ 622 ಅಂಕಗಳನ್ನು ಗಳಿಸಿದ ಮಾಸ್ಟರ್ ಚಿರಾಗ್ ನಾಯಕ್ ಅವರು ಶಾಲೆಗೆ ಪ್ರಥಮ, ರಾಜ್ಯಕ್ಕೆ 4ನೇ, ಜಿಲ್ಲೆಗೆ 2ನೇ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದರು. 613 ಅಂಕಗಳನ್ನು ಪಡೆದ ಕು. ಲಿನ್ ಮರಿಯಾ ಮತ್ತು ಕು. ಮನಸ್ವಿ ಎಂ.ಕೆ. ಅವರು ರಾಜ್ಯಕ್ಕೆ 7ನೇ ಹಾಗೂ ಶಾಲೆಗೆ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದರು. ಸಾಧಕರನ್ನು ಅವರ ಪೋಷಕರೊಂದಿಗೆ ಸನ್ಮಾನಿಸಲಾಯಿತು.


ಅಷ್ಟೇ ಅಲ್ಲದೆ A+, A, B+ ಹಾಗೂ B ಶ್ರೇಣಿ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನೂ ಗೌರವಿಸಲಾಯಿತು. ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಶ್ರಮಿಸಿದ ಶಿಕ್ಷಕ ವೃಂದವನ್ನೂ ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳು ಮಾತನಾಡಿ, “ಭಾರತದ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ” ಎಂದು ತಿಳಿಸಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ರೆವ. ಸಿಸ್ಟರ್ ಪ್ರೀತಿ ಜಾರ್ಜ್, ಶಾಲಾ ಸಂಚಾಲಕಿ ರೆವ. ಸಿಸ್ಟರ್ ಎಲ್ಸಿ ಪಾಲೆಟ್, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ರೆಜಿ ಜಾರ್ಜ್, ಶಾಲಾ ಸಿಬ್ಬಂದಿ ಕಾರ್ಯದರ್ಶಿ ಲಾವಣ್ಯ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.ಶಾಲಾ ಸಹ ಶಿಕ್ಷಕಿ ಮಮತಾ ಮತ್ತು ರೇಷ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯೋಪಾಧ್ಯಾಯಿನಿ ರೆವ. ಸಿಸ್ಟರ್ ಪ್ರೀತಿ ಜಾರ್ಜ್ ಗಣ್ಯರನ್ನು ಸ್ವಾಗತಿಸಿದರು. ಸಹ ಶಿಕ್ಷಕಿ ಅನಿತಾ ವಂದಿಸಿದರು.









