







ನಿಟ್ಟಡೆ ಗ್ರಾಮದ ಪಂಡಿಜೆವಾಳ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಧ್ವಜಾರೋಹಣವನ್ನು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಕವಿತಾ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮರೋಡಿ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ರತ್ನಾಕರ್ ಬುಣ್ಣನ್, ಎಸ್ ಡಿ ಎಮ್ ಸಿ ಉಪಾಧ್ಯಕ್ಷರು ಸತೀಶ್ ಆಚಾರ್ಯ ಹಾಗೂ ಇತರ ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭವನೀಶ್ ಉಪಸ್ಥಿತರಿದ್ದರು.



ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಮೊಳಗಿತು. ವಿದ್ಯಾರ್ಥಿಗಳ ದೇಶಭಕ್ತಿ ಗೀತೆಗಳು, ಭಾಷಣಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರ ಮನಸೂರೆಗೊಳಿಸಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಫ್ಲೇವಿಯಾ ಡಿ ಸೋಜಾ, “ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸದಾ ಸ್ಮರಿಸುತ್ತಾ, ದೇಶದ ಏಕತೆ, ಶಾಂತಿ ಮತ್ತು ಪ್ರಗತಿಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಜವಾಬ್ದಾರಿಯುತ ನಾಗರಿಕನಾಗಿ ಬೆಳೆಯಬೇಕು. ದೇಶಪ್ರೇಮವು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಮ್ಮ ಜೀವನದ ಪ್ರತಿದಿನದಲ್ಲೂ ಪ್ರತಿಫಲಿಸಬೇಕು,” ಎಂದು ಸಂದೇಶ ನೀಡಿದರು.

ಮುಖ್ಯ ಅತಿಥಿ ರತ್ನಾಕರ್ ಬುಣ್ಣನ್ ಅವರು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿ, ಉತ್ತಮ ಶಿಕ್ಷಣದ ಮೂಲಕ ದೇಶದ ಭವಿಷ್ಯವನ್ನು ಕಟ್ಟುವಂತೆ ಕರೆ ನೀಡಿದರು. ಶ್ರೀ ಭವನೀಶ್ ಅವರು ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಳೆ ವಿದ್ಯಾರ್ಥಿಗಳ ಸಹಕಾರದ ಮಹತ್ವವನ್ನು ತಿಳಿಸಿದರು.ಕಾರ್ಯಕ್ರಮದ ನಿರೂಪಣೆಯನ್ನುಶಿಕ್ಷಕಿ ಶ್ರೀಮತಿ ಸಾವಿತ್ರಿ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಶಿಕ್ಷಕಿ ಪೂರ್ಣಿಮಾ ಅವರು ಸ್ವಾಗತಿಸಿದರು. ಶಿಕ್ಷಕಿ ಪ್ರತೀಕ್ಷಾ ಅವರು ವಂದನಾರ್ಪಣೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ದೇಶಭಕ್ತಿ ಹಾಗೂ ಸಂಭ್ರಮದ ವಾತಾವರಣದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.









