







ಬೆಳ್ತಂಗಡಿ: ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಕಾರ್ಮಿಕರಿಗೆ ಸಂಬಂಧಿಸಿದ ವಿವಿಧ ಯೋಜನೆಗಳಲ್ಲಿನ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ, ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಮನವಿ ಸಲ್ಲಿಸಲಾಯಿತು.

ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ಕಾರ್ಮಿಕರಿಗೆ ಅಗತ್ಯವಿಲ್ಲದ ವಿವಿಧ ಟೆಂಡರ್ ಯೋಜನೆಗಳಿಗೆ ಕಡಿವಾಣ ಹಾಕಬೇಕು. ಕಾರ್ಮಿಕರಿಗೆ ದೊರೆಯಬೇಕಾದ ವೃದ್ಧಾಪ್ಯ ಪಿಂಚಣಿ, ಮಕ್ಕಳ ವಿದ್ಯಾರ್ಥಿವೇತನ ಹಾಗೂ ಆಸ್ಪತ್ರೆ ಚಿಕಿತ್ಸಾ ವೆಚ್ಚದ ಸಹಾಯಧನವು ಯಾವುದೇ ವಿಳಂಬವಿಲ್ಲದೆ ಅರ್ಹ ಕಾರ್ಮಿಕರಿಗೆ ಸಮರ್ಪಕವಾಗಿ ಲಭಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.



ಅದೇ ರೀತಿ ನಿರ್ಮಾಣ ಕಾರ್ಮಿಕರಿಗೆ ಪ್ರಮುಖವಾಗಿರುವ ಕೆಂಪುಕಲ್ಲಿನ ದರವನ್ನು ನಿಯಂತ್ರಿಸಬೇಕು. ಮರಳು ಪೂರೈಕೆಯಲ್ಲಿ ದರ ನಿಯಂತ್ರಣ ಜಾರಿಗೊಳಿಸಬೇಕು. ಸ್ಥಳೀಯವಾಗಿ ಲಭ್ಯವಿರುವ ಮರಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲೇ ಅಗತ್ಯ ಪರವಾನಿಗೆ ಪಡೆದು ಬಳಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.
ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಶ್ನಿಸಿ, ಸರ್ಕಾರದ ಗಮನಕ್ಕೆ ತಂದು ಶೀಘ್ರವಾಗಿ ಪರಿಹಾರ ಒದಗಿಸುವಂತೆ ಶಾಸಕರಲ್ಲಿ ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಎ. ಜೈರಾಜ್ ಸಾಲಿಯಾನ್ ಕಾನರ್ಪ, ಬಿಎಂಎಸ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಬಿಎಂಎಸ್ ತಾಲೂಕು ಅಧ್ಯಕ್ಷ ಉದಯ ಬಿ.ಕೆ., ತಾಲೂಕು ಸಂಯೋಜಕ ಸಾಂತಪ್ಪ ಕಲ್ಮಂಜ, ಬಿಎಂಎಸ್ ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಕಾರ್ಯದರ್ಶಿ ಕುಮಾರ್ ನಾಥ್ ಶೆಟ್ಟಿ, ಪ್ರಮುಖರಾದ ಉದಯ ಕುಮಾರ್ ಉಜಿರೆ, ಉಮೇಶ್ ಉಜಿರೆ ಹಾಗೂ ಉದಯ್ ಕುಲಾಲ್ ಉಜಿರೆ ಉಪಸ್ಥಿತರಿದ್ದರು.









