







ಬೆಳ್ತಂಗಡಿ, ಆ.10: ಕೃಷಿ ಕ್ಷೇತ್ರದಲ್ಲಿ ಯಾಂತ್ರೀಕರಣಕ್ಕೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ರೈತರ ಸಮಯ, ಶ್ರಮ ಮತ್ತು ವೆಚ್ಚವನ್ನು ಕಡಿತಗೊಳಿಸುವ ಪ್ರಮುಖ ಹೆಜ್ಜೆಯಾಗಿ, ಬೆಳ್ತಂಗಡಿಯ ಕರ್ನೋಡಿಯಲ್ಲಿ ಯಾಂತ್ರೀಕೃತ ಭತ್ತದ ನಾಟಿಗೆ ಚಾಲನೆ ನೀಡಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು, ರೋಟರಿ ಕ್ಲಬ್ ಬೆಳ್ತಂಗಡಿ, ಆನ್ಸ್ ಕ್ಲಬ್ ಬೆಳ್ತಂಗಡಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರ್ನೋಡಿಯ ಸಹಯೋಗದೊಂದಿಗೆ ಹರಿದ್ವಾರದ ರೋ. ಬಿ.ಕೆ. ಧನಂಜಯ್ ರಾವ್ ಅವರ ಗದ್ದೆಯಲ್ಲಿ ಈ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಧರ್ಮಸ್ಥಳ ಕೇಂದ್ರ ಕಚೇರಿಯ ಕೃಷಿ ಮತ್ತು ಸಿಎಚ್ಎಸ್ಸಿ (CHSC) ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್, “ಬೆಳೆಸುವುದಕ್ಕಾಗಿ ಯಂತ್ರಶ್ರೀ, ಉಳಿಸುವುದಕ್ಕಾಗಿ ಜಲ ಸಂಜೀವಿನಿ” ಎಂಬ ಸಂದೇಶದೊಂದಿಗೆ ಮಾತನಾಡಿದರು. ಪದ್ಮಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಗೆ ಒತ್ತು ನೀಡಲಾಗುತ್ತಿದೆ. ಭತ್ತದ ಕೃಷಿಯಲ್ಲಿ ಕಾರ್ಮಿಕರ ಕೊರತೆ ಹಾಗೂ ಹೆಚ್ಚುತ್ತಿರುವ ಕೂಲಿ ವೆಚ್ಚದ ಸಂದರ್ಭದಲ್ಲಿ ಯಾಂತ್ರೀಕೃತ ನಾಟಿಯು ರೈತರಿಗೆ ಅತ್ಯುತ್ತಮ ಪರ್ಯಾಯವಾಗಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರದೇಶದಲ್ಲಿ ನಾಟಿ ಕಾರ್ಯ ಪೂರ್ಣಗೊಳಿಸಲು ಸಹಕಾರಿಯಾಗಿದೆ ಎಂದರು.



ಅತಿಥಿಗಳ ಮಾತು: ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಭತ್ತ ಕೃಷಿಯನ್ನು ಉಳಿಸುವಲ್ಲಿ ‘ಯಂತ್ರಶ್ರೀ’ ಯೋಜನೆಯು ಪ್ರಮುಖ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದರು. ಇಂದಿನ ಮಕ್ಕಳು ಮನೆಯಲ್ಲಿರುವ ಭತ್ತ ಕೃಷಿಯನ್ನು ಉಳಿಸಿ ಬೆಳೆಸುವ ಮೂಲಕ ಮಾದರಿಯಾಗಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ರೋ. ಶ್ರೀಧರ್ ಕೆ.ವಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಭತ್ತದ ಗದ್ದೆಗಳಲ್ಲಿ ನೀರನ್ನು ನಿಲ್ಲಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ ಎಂದು ತಿಳಿಸಿದರು. ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ರಮೇಶ್ ಕೆ.ಸಿ. ಅವರು ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸನ್ಮಾನ ಹಾಗೂ ವಿತರಣೆ: ಲಾಯಿಲ ಪ್ರದೇಶದ ಪಟ್ಟಣ ಭಾಗದಲ್ಲೂ ಗದ್ದೆಯನ್ನು ಉಳಿಸಿಕೊಂಡು ಭತ್ತ ಕೃಷಿ ಮಾಡುತ್ತಿರುವ ಫ್ರಾನ್ಸಿಸ್ ಮಿರಂದ ಹಾಗೂ ಜೂಲಿಯನ್ ಲೋಬೊ ಅವರನ್ನು ಸನ್ಮಾನಿಸಲಾಯಿತು. ಶ್ರೇಷ್ಠ ಭತ್ತ ಕೃಷಿಕರಾದ ಪ್ರವೀಣ್ ಮಲೆಬೆಟ್ಟು ಹಾಗೂ ಹೊನ್ನಪ್ಪ ಪೂಜಾರಿ ಮಲೆಬೆಟ್ಟು ಅವರಿಗೆ ಸಸಿಮಡಿ ವಿತರಿಸಲಾಯಿತು.
ವಕೀಲ ಬಿ.ಕೆ. ಧನಂಜಯ್ ರಾವ್ ಸ್ವಾಗತಿಸಿ, ಕೃಷಿ ಮೇಲ್ವಿಚಾರಕ ರಾಮ್ ಕುಮಾರ್ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದ ಬಳಿಕ ಯಂತ್ರ ನಾಟಿ ಪ್ರಾತ್ಯಕ್ಷಿಕೆಯ ಮೂಲಕ ಗದ್ದೆಯಲ್ಲಿ ನಾಟಿ ಮಾಡಲಾಗಿದ್ದು, ಶಾಲಾ ಮಕ್ಕಳಿಗೆ ಯಂತ್ರ ನಾಟಿಯ ಬಗ್ಗೆ ಪರಿಚಯಿಸಲಾಯಿತು.









