ಹೋಲಿ ರಿಡೀಮರ್ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

0

ಮಕ್ಕಳನ್ನು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರಿಸದೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿದಾಗ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯು ವಿದ್ಯಾರ್ಥಿಗಳಿಗೆ ವಿವಿಧ ಸಂಘಗಳ ಮೂಲಕ ಚಟುವಟಿಕೆಗಳನ್ನು ನಡೆಸಿ ಮಕ್ಕಳನ್ನು ಕ್ರಿಯಾಶೀಲರನ್ನಾಗಿ ತಯಾರುಗೊಳಿಸುವ ಕಾರ್ಯವನ್ನು ನಡೆಸುತ್ತಿದೆ.

ಇದಕ್ಕೆ ಆಗಸ್ಟ್ 7 ರಂದು ನಡೆದ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಸಾಕ್ಷಿಯಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂತ ಅಂತೋನಿ ಪದವಿಪೂರ್ವ ಕಾಲೇಜು ನಾರಾವಿಯ ಉಪನ್ಯಾಸಕ ಫಾ ರೂಪೇಶ್ ತಾವ್ರೋರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲೆಯಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಮಾಡುವ ಪ್ರತಿ ಕೆಲಸದಲ್ಲಿಯೂ ಪ್ರಾಮಾಣಿಕ ಪ್ರಯತ್ನವಿರಲಿ ಎಂದು ಹಿತವಚನವನ್ನು ನೀಡಿ ಶುಭ ಹಾರೈಸಿದರು.

ಶಾಲಾ ಸಂಚಾಲಕರಾದ ಅತೀ ವಂ ಫಾ ವಾಲ್ಟರ್ ಡಿಮೆಲ್ಲೋ ರವರು ವಿದ್ಯಾರ್ಥಿಗಳು ಅತ್ಯುನ್ನತ ಕನಸನ್ನು ಕಂಡು ಅದನ್ನು ಸಾಕಾರಗೊಳಿಸಲು ಶಾಲೆಯಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಭಾಗವಹಿಸಿ, ಪ್ರತಿಭಾವಂತರಾಗಿ ಕನಸನ್ನು ಸಾಕಾರಗೊಳಿಸಿರಿ ಎಂದು ನುಡಿದು ಶುಭ ಹಾರೈಸಿದರು.

ಶಾಲಾ ಕನ್ನಡ ಸಂಘ, ಇಂಗ್ಲೀಷ್ ಸಂಘ, ಹಿಂದಿ ಸಂಘ, ಗಣಿತ ಸಂಘ, ವಿಜ್ಞಾನ ಸಂಘ, ಪರಿಸರ ಸಂಘ, ಕಲಾ ಸಂಘ ಹಾಗೂ ಸ್ಕೌಟ್ ಗೈಡ್ಸ್ ಕಬ್ಸ್ ಬುಲ್ ಬುಲ್ ಸಂಘಗಳ ನಾಯಕರು ತಮ್ಮ ತಮ್ಮ ಸಂಘದ ಧ್ಯೇಯ ಮತ್ತು ಉದ್ದೇಶಗಳನ್ನು ಹೇಳಿದರು. ಪರಿಸರ ಸಂಘದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು, ವಿಜ್ಞಾನ ಸಂಘವು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಬಗ್ಗೆ, ಗಣಿತ ಸಂಘವು ಮೋಜಿನ ಗಣಿತವನ್ನು, ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಸಂಘಗಳು ಭಾಷೆ , ಕಬ್ಸ್ ಬುಲ್ ಬುಲ್ಸ್ ಸ್ಕೌಟ್ ಮತ್ತು ಗೈಡ್ಸ್ ಸಂಘಗಳು ದೇಶಪ್ರೇಮ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಶಾಲಾ ಮುಖ್ಯೋಪಾಧ್ಯಾಯ ಫಾ ಕ್ಲಿಫರ್ಡ್ ಪಿಂಟೋರವರು ಇಂತಹ ಸಂಘ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ದೊರೆಯುವ ಪ್ರಯೋಜನದ ಕುರಿತು ತಿಳಿಸಿ ಶುಭ ಹಾರೈಸಿದರು. ಇಂಗ್ಲೀಷ್ ಸಂಘದ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಪ್ರೀತ ಡಿಸೋಜ ಮತ್ತು ವಿನಿತಾ ಮೋರಸ್ ಸಹಕರಿಸಿದರು.

LEAVE A REPLY

Please enter your comment!
Please enter your name here