






ಬೆಳ್ತಂಗಡಿ: ಪೊಲೀಸ್ ಕಾನ್‌ಸ್ಟೇಬಲ್‌ನನ್ನು ದೂಡಿ ಹಾಕಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಿಂದ ಪೋಕ್ಸೋ ಆರೋಪಿ ಪರಾರಿಯಾದ ಘಟನೆ ನಡೆದಿದೆ. ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪೋಕ್ಸೋ ಪ್ರಕರಣದ ವಿಚಾರಣಾಧೀನ ಕೈದಿ ರೋಶನ್ ಫರ್ನಾಂಡೀಸ್(೩೬) ಪರಾರಿಯಾದ ಆರೋಪಿ. ಮೂಡಬಿದ್ರೆ ನಿವಾಸಿಯಾದ ರೋಶನ್‌ಗೆ ಜೈಲಿನಲ್ಲಿದ್ದಾಗ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಸೆಲ್ ವಾರ್ಡ್‌ಗೆ ದಾಖಲಿಸಲಾಗಿತ್ತು. ಆ. ೨ರಂದು ಮುಂಜಾನೆ ಮಂಗಳೂರು ನಗರದ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಕಾನ್‌ಸ್ಟೇಬಲ್ ಶಿವಕುಮಾರ್ ಕೆ.ಎಮ್. ಅವರು ಆಸ್ಪತ್ರೆಯ ಸೆಲ್ ವಾರ್ಡ್‌ನಲ್ಲಿ ಕರ್ತವ್ಯದಲ್ಲಿದ್ದರು. ಮುಂಜಾನೆ ಸುಮಾರು ೯:೧೩ರ ವೇಳೆಗೆ ಆರೋಪಿ ರೋಶನ್ ಸೆಲ್ ಒಳಗಿರುವ ಇನ್ನೊಬ್ಬ ಆರೋಪಿಯ ಬಳಿ ಮೊಬೈಲ್ ಫೋನ್ ಇದೆ ಚೆಕ್ ಮಾಡಿ ಎಂದು ಕಾನ್‌ಸ್ಟೇಬಲ್ ಶಿವಕುಮಾರ್‌ಗೆ ಹೇಳಿದ್ದಾನೆ. ಇದನ್ನು ನಂಬಿದ ಶಿವಕುಮಾರ್ ಅವರು ಸೆಲ್‌ನ ಬೀಗ ತೆಗೆದು ಒಳಗೆ ಪ್ರವೇಶಿಸುತ್ತಿದ್ದಂತೆಯೇ ರೋಶನ್ ಕಾನ್‌ಸ್ಟೇಬಲ್ ಅವರನ್ನು ಬಲವಾಗಿ ತಳ್ಳಿ ಹೊರ ಬಂದು ಸೆಲ್ ಚಿಲಕ ಜಡಿದು ಪರಾರಿಯಾಗಿದ್ದಾನೆ.


ಸೆಲ್ ಒಳಗೆ ಬಂಧಿಯಾಗಿದ್ದ ಕಾನ್‌ಸ್ಟೇಬಲ್ ತಕ್ಷಣವೇ ಇತರೆ ಪೊಲೀಸ್ ಸಿಬ್ಬಂದಿಗೆ ಕರೆ ಮಾಡಿ ಜೋರಾಗಿ ಕೂಗಿಕೊಂಡಿದ್ದಾರೆ. ಆ ಸಮಯದಲ್ಲಿ ಅಲ್ಲಿಗೆ ಬಂದ ಮಹಿಳಾ ಸ್ವೀಪರ್ ಒಬ್ಬರು ಸೆಲ್‌ನ ಚಿಲಕ ತೆಗೆದಿದ್ದಾರೆ. ಬಳಿಕ ಕಾನ್‌ಸ್ಟೇಬಲ್ ಹೊರಬಂದು ಆಕೆಯ ವಶಕ್ಕೆ ಕೀಲಿಕೈ ನೀಡಿ ಆರೋಪಿಯ ಬೆನ್ನಟ್ಟಿ ಓಡಿದರೂ ಆತ ಅಷ್ಟರಲ್ಲೇ ತಲೆಮರೆಸಿಕೊಂಡಿದ್ದ. ಘಟನೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜೈಲು ಅಧಿಕಾರಿಗಳು ಮತ್ತು ಪೊಲೀಸರು ಜಂಟಿಯಾಗಿ ನಗರ ಹಾಗೂ ಜಿಲ್ಲೆಯಾದ್ಯಂತ ನಾಕಾಬಂಧಿ ಹಾಕಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.









