ಬುರುಡೆ ಪ್ರಕರಣ: ನ್ಯಾಯಾಲಯದ ಅನುಮತಿ ಪಡೆದು ಸರಕಾರಕ್ಕೆ ವರದಿ ಸಲ್ಲಿಸಲು ಎಸ್‌ಐಟಿ ಸಿದ್ಧತೆ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಕುರಿತು ತನಿಖೆ ನಡೆಸಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಅಂತಿಮ ವರದಿ ಸಿದ್ಧಗೊಳಿಸಿದ್ದು ಬೆಳ್ತಂಗಡಿ ನ್ಯಾಯಾಲಯದಿಂದ ಅನುಮತಿ ಪಡೆದು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸಜ್ಜಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ತನಿಖೆಯ ಸಂದರ್ಭದಲ್ಲಿ ಕಲೆ ಹಾಕಿದ ಮಾಹಿತಿಗಳ ಆಧಾರದಲ್ಲಿ ಹಲವು ಆಯಾಮಗಳಲ್ಲಿ ಅಂತಿಮ ವರದಿ ಸಿದ್ಧಪಡಿಸಲಾಗಿದೆ. ಈಗಾಗಲೇ ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ ತನಿಖೆಯ ಪ್ರಮುಖ ಅಂಶಗಳನ್ನು ವಿವರಿಸಲಾಗಿದೆ. ಅಂತಿಮ ವರದಿಯಲ್ಲಿ ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ಪೂರಕ ಮಾಹಿತಿಗಳು ಇವೆ. ವಿಧಿವಿಜ್ಞಾನ ಪ್ರಯೋಗಾಲಯದಿಂದ ಲಭಿಸಿದ ಮಾಹಿತಿ, ಡಿಜಿಟಲ್ ವಿಧಿವಿಜ್ಞಾನ ಸಾಕ್ಷ್ಯಗಳು, ಹೆಚ್ಚುವರಿ ಸಾಕ್ಷಿಗಳ ಹೇಳಿಕೆಗಳು, ಅಡಿಯೊ ಮತ್ತು ವಿಡಿಯೊ ರೆಕಾರ್ಡಿಂಗ್, ದಾಖಲೆ ಪತ್ರಗಳ ಸ್ಕ್ಯಾನ್ ಮಾಡಿದ ಪ್ರತಿಗಳು ಮತ್ತು ಇತರ ಪೂರಕ ಅಂಶಗಳು ವರದಿಗೆ ಬಲ ತುಂಬಿವೆ ಎಂದು ತಿಳಿದು ಬಂದಿದೆ. ವಿದ್ಯಾರ್ಥಿನಿ ಸೌಜನ್ಯಾ ಪರ ಹೋರಾಟಗಾರರಾದ ಗಿರೀಶ್ ಮಟ್ಟೆಣ್ಣನವರ, ಟಿ.ಜಯಂತ್ ಮತ್ತು ಸಾಕ್ಷಿ ದೂರುದಾರ ಚಿನ್ನಯ್ಯ ಅವರ ಹೇಳಿಕೆಗಳ ಧ್ವನಿಮುದ್ರಣವೂ ವರದಿಯಲ್ಲಿದೆ. ೨೦೨೩ರ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ೩೫(೩) ಸೆಕ್ಷನ್ ಅಡಿಯಲ್ಲಿ ನೋಟಿಸ್ ಜಾರಿ
ಮಾಡಿ ಈ ಮೂವರಿಂದ ಮಾಹಿತಿ ಪಡೆದುಕೊಳ್ಳಲಾಗಿತ್ತು. ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯಾ ಅವರ ಮಾವ ವಿಠಲ ಗೌಡ ಅವರು ಬೇರೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಕಾರಣ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ಮೃತದೇಹದ ಗುರುತು ಪತ್ತೆ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ತನಿಖೆಯ ಸಂದರ್ಭದಲ್ಲಿ ಲಭಿಸಿದ ಅಸ್ಥಿಪಂಜರಗಳ ಪೈಕಿ ಒಬ್ಬ ಯುವಕ ಮತ್ತು ಇಬ್ಬರು ವೃದ್ಧರ ಗುರುತು ಪತ್ತೆಯಾಗಿದೆ ಎಂದು ವಿಶೇಷ ತನಿಖಾ ತಂಡದ ಮೂಲಗಳು ತಿಳಿಸಿವೆ. ಕೊಡಗು ಜಿಲ್ಲೆ ವಿರಾಜಪೇಟೆಯ ಟಿ.ಶೆಟ್ಟಿಗೇರಿ ನಿವಾಸಿ ಯು.ಬಿ ಅಯ್ಯಪ್ಪ (೭೦), ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕು ದಾಸರಕಲ್ಲಹಳ್ಳಿಯ ಆದಿಶೇಷ ನಾರಾಯಣ (೨೭) ಮತ್ತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಮೀಸಗಾನಹಳ್ಳಿಯ ಕೃಷ್ಣಪ್ಪ (೮೫) ಅವರ ಗುರುತು ಡಿಎನ್‌ಎ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಮೂವರ ಅಸ್ಥಿಗಳು ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿದ್ದವು. ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿದ್ದ ಆದಿಶೇಷ ನಾರಾಯಣ ೨೦೧೩ರ ಅಕ್ಟೋಬರ್‌ನಲ್ಲಿ ಮನೆಗೆ ಬಂದು ಅದೇ ದಿನ ಹೊರಗೆ ಹೋಗಿ ನಾಪತ್ತೆಯಾಗಿದ್ದರು. ಪದೇ ಪದೇ ಮನೆ ಬಿಟ್ಟು ಹೋಗಿ ವಾಪಸ್ ಬರುತ್ತಿದ್ದುದರಿಂದ ದೂರು ದಾಖಲಿಸಿರಲಿಲ್ಲ ಎಂದು ಮನೆಮಂದಿ ತಿಳಿಸಿದ್ದರು.

ಚಿಕಿತ್ಸೆಗೆ ಎಂದು ಹೇಳಿ ೨೦೧೭ರಲ್ಲಿ ಮೈಸೂರಿಗೆ ಹೋಗಿದ್ದ ಅಯ್ಯಪ್ಪ ವಾಪಸ್ ಬಂದಿರಲಿಲ್ಲ. ಈ ಬಗ್ಗೆ ಶ್ರೀಮಂಗಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೃಷ್ಣಪ್ಪ ೨೦೨೪ರ ಅಕ್ಟೋಬರ್‌ನಲ್ಲಿ ಮನೆಯಿಂದ ಹೊರ ಹೋದವರು ವಾಪಸ್ ಬಂದಿರಲಿಲ್ಲ ಎಂದು ಶ್ರೀನಿವಾಸಪುರ ಠಾಣೆಯಲ್ಲಿ ದಾಖಲಿಸಲಾದ ದೂರಿನಲ್ಲಿ ಕುಟುಂಬದವರು ತಿಳಿಸಿದ್ದರು. ಅಸ್ಥಿಪಂಜರಗಳು ಪತ್ತೆಯಾದ ಜಾಗದಲ್ಲಿ ಲಭಿಸಿದ್ದ ಗುರುತಿನ ಚೀಟಿಗಳ ಆಧಾರದಲ್ಲಿ ಕುಟುಂಬದವರನ್ನು ಸಂಪರ್ಕಿಸಲಾಗಿತ್ತು ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಕುಟುಂಬಸ್ಥರಿಗೆ ಹಸ್ತಾಂತರಕ್ಕೆ ಅವಕಾಶ: ಎಸ್‌ಐಟಿ ಅಧಿಕಾರಿಗಳು ಜುಲೈ ೧೫ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಂತಿಮ ತನಿಖಾ ವರದಿಯಲ್ಲಿ ಈ ಮೂವರ ಡಿಎನ್‌ಎ ದೃಢಪಟ್ಟಿರುವುದನ್ನು ಅಧಿಕೃತವಾಗಿ ಉಲ್ಲೇಖಿಸಿದ್ದಾರೆ. ಸದ್ಯ ಡಿಎನ್ ವರದಿ ಆಧಾರದ ಮೇಲೆ ಸಂಬಂಧಪಟ್ಟ ಮೂರು ಕುಟುಂಬದವರು ಕಾನೂನಾತ್ಮಕವಾಗಿ ಎಸ್‌ಐಟಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅಸ್ಥಿಪಂಜರಗಳ ಅವಶೇಷವನ್ನು ಪಡೆದು ಅಂತ್ಯಸಂಸ್ಕಾರ ನೆರವೇರಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here