ತುಳು ಶಿವಳ್ಳಿ ಸಭಾ ಅಳದಂಗಡಿ – ನಾರಾವಿ ವಲಯದ ಪದಗ್ರಹಣ, ಆಷಾಢ ಕೂಟ ಸಮಾರಂಭ

0

ತೆಂಕಕಾರಂದೂರು: ತೆಂಕಕಾರಂದೂರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಆಗಸ್ಟ್ 2ರಂದು ತುಳುಶಿವಳ್ಳಿ ಸಭಾ ಅಳದಂಗಡಿ ನಾರಾವಿ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಆಷಾಢ ಕೂಟ ಸಮಾರಂಭ ನೆರವೇರಿತು.

ಕಾರ್ಯಕ್ರಮದ ಅಂಗವಾಗಿ ಲೋಕ ಕಲ್ಯಾಣದ ಪ್ರಯುಕ್ತ ಪ್ರಾತಃಕಾಲ ಶ್ರೀ ಮಹಾವಿಷ್ಣುಯಾಗವನ್ನು ಹಮ್ಮಿಕೊಳ್ಳಲಾಗಿತ್ತು. ‘ಬ್ರಾಹ್ಮಣ್ಯದ ಉಳಿವಿಗೆ ಸಂಘಟನೆಯು ಇಂದು ಅನಿವಾರ್ಯವಾಗಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ನಮ್ಮ ಮನೆಗಳಲ್ಲಿಯೇ ಆರಂಭಿಸಿ ಉಳಿಸಿ ಬೆಳೆಸಬೇಕು. ಆವರಿಸಿರುವ ಜಾಡ್ಯತೆಯನ್ನು ತೊರೆದು ಸದಾ ಕ್ರಿಯಾಶೀಲರಾಗಿರಬೇಕು.

ಸಂಘಟನೆಯ ಆರ್ಥಿಕ, ಸಾಮಾಜಿಕ ಎಲ್ಲಾ ಸ್ತರದ ಕಾರ್ಯಕ್ರಮಗಳು ಪಾರದರ್ಶಕವಾಗಿರಬೇಕು. ಅಡಗಿಸಿಕೊಳ್ಳುವುದರ ಬದಲು ತೊಡಗಿಸಿಕೊಳ್ಳುವುದರ ಮೂಲಕ ಸಂಘಟನೆಯಲ್ಲಿ ಜವಾಬ್ದಾರಿಯುತವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು’ ಎಂದು ಪದಗ್ರಹಣ ಸಮಾರಂಭದ ದಿಕ್ಸೂಚಿ ಭಾಷಣಕಾರ ಮುರಳಿ ಕೃಷ್ಣ ಆಚಾರ್ಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಲಯದ ನೂತನ ಅಧ್ಯಕ್ಷರಾಗಿ ಜಗದೀಶ ಭಟ್ ಕಬ್ಬಿನ ಹಿತ್ತಲು ಮತ್ತು ಕಾರ್ಯದರ್ಶಿಯಾಗಿ ಮಧುಸೂದನ ಭಟ್ ಅಳದಂಗಡಿ, ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ವಿದ್ಯಾ ಜಯರಾಮ ಭಟ್ ಮತ್ತು ಕಾರ್ಯದರ್ಶಿಯಾಗಿ ಶ್ವೇತ ರಘುರಾಮ ಭಟ್ ಪದಗ್ರಹಣ ಸ್ವೀಕರಿಸಿದರು ತಾಲೂಕು ತುಳು ಶಿವಳ್ಳಿ ಸಭಾದ ಮಹಿಳಾ ಘಟಕದ ಅಧ್ಯಕ್ಷೆ ಜಯ ಅರ್ಮುಡುತ್ತಾಯ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ವಲಯದ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ವಿವಿಧ ಮನೋರಂಜನ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು . ವಲಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂ ನಗದು ಬಹುಮಾನದೊಂದಿಗೆ ಪುರಸ್ಕರಿಸಲಾಯಿತು. ವಲಯದ ಹಿರಿಯ ಪುರೋಹಿತರಾದ ಜಯರಾಮ ಭಟ್ ನಾರಾವಿ ಅವರನ್ನು ವೇದವಾಙ್ಮಯ ಪುರೋಹಿತರತ್ನ ಬಿರುದಿನೊಂದಿಗೆ ಸನ್ಮಾನಿಸಲಾಯಿತು.

ಜನಾರ್ಧನ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಗಂಗಾಧರ ರಾವ್ ಕೆವುಡೇಲು, ವಲಯದ ಕಾರ್ಯಕ್ರಮಗಳನ್ನು ಮೆಚ್ಚಿ, ನೂತನ ಪದಾಧಿಕಾರಿಗಳಿಗೆ ಶುಭಾಶಯಗಳನ್ನು ಕೋರಿದರು.

ಶಿಕ್ಷಕರಾದ ರಾಮಕೃಷ್ಣ ಮಡಪುಳಿತ್ತಾಯ ಮತ್ತು ವಸಂತ ಭಟ್ ಸುಲ್ಕೇರಿ ನಿರೂಪಿಸಿದ ಕಾರ್ಯಕ್ರಮದಲ್ಲಿ ವಲಯದ ಗೌರವಾಧ್ಯಕ್ಷರಾದ ಮತ್ತು ಕಾರ್ಯಕ್ರಮದ ಪ್ರಾಯೋಜಕರಾದ ವಿಷ್ಣು ಸಂಪಿಯತ್ತಾಯ ಸ್ವಾಗತಿಸಿದರು.

ನೂತನ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಜಯರಾಮ್ ಭಟ್ ವಂದಿಸಿದರು ಕಾರ್ಯಕ್ರಮದಲ್ಲಿ ತಾಲೂಕಿನ ಮಹಿಳಾ ಘಟಕದ ಕಾರ್ಯದರ್ಶಿ ಅಕ್ಷತಾ ಹೆಬ್ಬಾರ್, ಕುವೆಟ್ಟು ವಲಯದ ಅಧ್ಯಕ್ಷ ಸೂರ್ಯನಾರಾಯಣ ಪುತ್ತೂರಾಯ, ಕೊಯ್ಯೂರಿನ ವ್ಯವಸಾಯ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಅನಂತ್ ಕೃಷ್ಣ ಭಟ್, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here