






ನಡ:2026-27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಆಗಸ್ಟ್ 4 ರಂದು ಮಹಾತ್ಮಾ ಗಾಂಧಿ ನಡ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆಡಳಿತಾಧಿಕಾರಿ ರಮೇಶ್ ಪಿ.ಕೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಅವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದರು. ಕಾರ್ಯದರ್ಶಿ ಕಿರಣ್ ಎಂ ಅವರು ವಾರ್ಡ್ ಸಭೆಯಲ್ಲಿ ಬಂದ ವರದಿಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು.16 ಲಕ್ಷ ಅನುದಾನ ಬಂದರೂ ಸ್ಮಶಾನ ಕಾಮಗಾರಿ ಅರ್ಧಕ್ಕೆ ನಿಲುಗಡೆಸಭೆಯಲ್ಲಿ ಮಾತನಾಡಿದ ಗ್ರಾಮಸ್ಥ ಪ್ರವೀಣ್ ನಡ, ಕನ್ಯಾಡಿ ಗ್ರಾಮಕ್ಕೆ ಬೇಕಾದ ಸ್ಮಶಾನಕ್ಕೆ ಸರ್ಕಾರದಿಂದ 16 ಲಕ್ಷ ರೂ. ಅನುದಾನ ಬಂದಿದ್ದರೂ ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿ ನಡೆಸಿ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಅದೇ ರೀತಿ ನಡ ಗ್ರಾಮ ಪಂಚಾಯತ್ ಕಟ್ಟಡದ ಕಾಮಗಾರಿಯೂ ಅರ್ಧಕ್ಕೆ ನಿಂತಿದ್ದು, ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದು ದೂರಿದರು.
ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಲಿಖಿತ ದೂರು ನೀಡಲಾಗಿದೆ ಎಂದು ತಿಳಿಸಿದರು.ಇದಕ್ಕೆ ಉತ್ತರಿಸಿದ ಪಿಡಿಒ ತಾರಾನಾಥ್ ನ್ಯಾಕ್, ಗುತ್ತಿಗೆದಾರರಿಗೆ ಒಂದು ತಿಂಗಳ ಕಾಲಾವಕಾಶ ನೀಡಿ ಕಾಮಗಾರಿ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ನಿಗದಿತ ಅವಧಿಯಲ್ಲಿ ಕೆಲಸ ಮುಗಿಸದಿದ್ದರೆ ಗುತ್ತಿಗೆ ರದ್ದು ಮಾಡಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರಸ್ತೆ, ಅಂಗನವಾಡಿ, ತಡೆಗೋಡೆ – ವರ್ಷಗಳಿಂದ ಬಗೆಹರಿಯದ ಸಮಸ್ಯೆ ಕಾಂಕ್ರೀಟ್ ರಸ್ತೆಗೆ ಒತ್ತಾಯ: ಮಾತನಾಡಿದ ಗ್ರಾಮಸ್ಥರು, ಮಳೆ ಬಂದಾಗಲೆಲ್ಲಾ ರಸ್ತೆಗಳು ಹಾಳಾಗುತ್ತಿವೆ. ಆದ್ದರಿಂದ ಡಾಂಬರೀಕರಣ ಮಾಡದೇ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರು.ಕೇಳ್ತಾಜೆ ಅಂಗನವಾಡಿ ಜಲಾವೃತ:ಕೇಳ್ತಾಜೆ ಅಂಗನವಾಡಿಗೆ ಪ್ರತಿ ಮಳೆಗೆ ನೀರು ನುಗ್ಗುತ್ತಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಕ್ಕಳು ಓಡಾಡಲು ತೊಂದರೆಯಾಗುತ್ತಿದೆ. ಚಿಕ್ಕ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದಕ್ಕೆ ಶಾಶ್ವತ ಪರಿಹಾರ ಮಾಡಬೇಕು ಎಂದು ಪೋಷಕರು ಆಗ್ರಹಿಸಿದರು.
ಈ ಸಮಸ್ಯೆಯನ್ನು ಆಲಿಸಿದ ಪಿಡಿಒ ಅವರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಸರಿಪಡಿಸುವುದಾಗಿ ಭರವಸೆ ನೀಡಿದರು.
ಸೂರ್ಯ ಕುಮೇರು ತಡೆಗೋಡೆ 4 ವರ್ಷದಿಂದ ಬಾಕಿ: ಸೂರ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ನೇರವಾಗಿ ರಸ್ತೆಗೆ ಹರಿಯುತ್ತಿದೆ. ಸೂರ್ಯ ಕುಮೇರು ಭಾಗದಲ್ಲಿ ಮಣ್ಣು ಕುಸಿದು ಮನೆಯ ಅಂಗಳಕ್ಕೆ ಬಿದ್ದಿದೆ. ತಡೆಗೋಡೆ ನಿರ್ಮಾಣಕ್ಕೆ 30 ಲಕ್ಷ ರೂ. ಅನುದಾನ ಈಗಾಗಲೇ ಬಿಡುಗಡೆಯಾಗಿದ್ದರೂ 4 ವರ್ಷಗಳಿಂದ ಯಾವುದೇ ಕೆಲಸ ನಡೆದಿಲ್ಲ ಎಂದು ಗ್ರಾಮಸ್ಥ ಅರುಣ್ ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಹಲವು ಬಾರಿ ಪಂಚಾಯತ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಪಿಡಿಒ ಅವರು ತಕ್ಷಣ ಸ್ಥಳ ಪರಿಶೀಲಿಸಿ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು.


ಅಧಿಕಾರಿಗಳ ಗೈರು ಹಾಜರಿಗೆ ಶಾಮ್ ಸುಂದರ್ ಆಕ್ರೋಶಗ್ರಾಮಸ್ಥ ಶಾಮ್ ಸುಂದರ್ ಮಾತನಾಡಿ, ಪ್ರತಿ ಗ್ರಾಮ ಸಭೆಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗೈರು ಹಾಜರಾಗುತ್ತಿದ್ದಾರೆ. ಇಲಾಖೆಯ ಮಾಹಿತಿ ಸರಿಯಾಗಿ ಸಿಗದಿದ್ದರೆ ಗ್ರಾಮ ಸಭೆಯನ್ನು ಮಾಡಿ ಪ್ರಯೋಜನವಿಲ್ಲ ಎಂದು ಕಿಡಿಕಾರಿದರು.ಲಕ್ಷ ಲಕ್ಷ ಸಂಬಳವನ್ನು ತೆಗೆದುಕೊಂಡು ಗ್ರಾಮದ ಸಮಸ್ಯೆ ಬಂದಾಗ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗೆ ಬರುವುದಿಲ್ಲ. ವಿಶೇಷವಾಗಿ ಲೋಕೋಪಯೋಗಿ ಇಲಾಖೆಯಿಂದ ಅನೇಕ ಸಮಸ್ಯೆ ಉಂಟಾಗಿದೆ. ಮುಂದೆ ನಡೆಯುವ ಗ್ರಾಮ ಸಭೆಗೆ ಎಲ್ಲಾ ಅಧಿಕಾರಿಗಳು ಬಾರದಿದ್ದರೆ ಗ್ರಾಮ ಸಭೆಯನ್ನು ನಡೆಸಲು ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಇತರೆ ಪ್ರಮುಖ ವಿಷಯಗಳ ಚರ್ಚೆ ಮತ್ತು ನಿರ್ಣಯಅಪಾಯಕಾರಿ ಮರ ಮತ್ತು ಹಳೆಯ ವಿದ್ಯುತ್ ಕಂಬ: ಗ್ರಾಮದ ಹಲವೆಡೆ ವಿದ್ಯುತ್ ತಂತಿಗೆ ತಾಗಿಕೊಂಡಿರುವ ಅಪಾಯಕಾರಿ ಮರಗಳು ಇವೆ. ಮಳೆಗಾಲದಲ್ಲಿ ಅವಘಡ ಸಂಭವಿಸುವ ಭೀತಿ ಇದೆ. ಅದೇ ರೀತಿ ಹಳೆಯ ಕಬ್ಬಿಣದ ವಿದ್ಯುತ್ ಕಂಬಗಳು ತುಕ್ಕು ಹಿಡಿದಿವೆ. ಇವುಗಳನ್ನು ತಕ್ಷಣ ತೆರವು ಮಾಡಿ ಸಿಮೆಂಟ್ ಕಂಬ ಅಳವಡಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಯನ್ನು ಒತ್ತಾಯಿಸಿದರು.
ಕಸ್ತೂರಿ ರಂಗನ್ ವ್ಯಾಪ್ತಿ ವಿರೋಧ:* ನಡ ಗ್ರಾಮದ ಕೆಲವು ಮನೆಗಳು ಕಸ್ತೂರಿ ರಂಗನ್ ವ್ಯಾಪ್ತಿಗೆ ಸೇರಿವೆ ಎಂಬ ಮಾಹಿತಿ ಇದೆ. ಇದರಿಂದ ರೈತರು ಮತ್ತು ಗ್ರಾಮಸ್ಥರಿಗೆ ತೊಂದರೆಯಾಗಲಿದೆ. ನಡ ಗ್ರಾಮವನ್ನು ಕಸ್ತೂರಿ ರಂಗನ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗಿಡಬೇಕು ಎಂದು ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿ, “ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ” ಎಂದು ಉತ್ತರಿಸಿದರು.
ಗಡಾಯಿಕಲ್ಲು ಶುಲ್ಕ ವಿವಾದ:ನಡ ಗ್ರಾಮದ ಗಡಾಯಿಕಲ್ಲು ಹೋಗುವ ರಸ್ತೆ ಪಂಚಾಯತ್ ವ್ಯಾಪ್ತಿಗೆ ಸೇರಿದೆ ಸಾರ್ವಜನಿಕ ರಸ್ತೆಯಾಗಿದೆ. ಅಲ್ಲಿಗೆ ಹೋಗುವ ಪ್ರವಾಸಿಗರಿಂದ ಅರಣ್ಯ ಇಲಾಖೆ ಹಣ ವಸೂಲಿ ಮಾಡುತ್ತಿದೆ. ಆದರೆ ಇದರಿಂದ ಗ್ರಾಮಕ್ಕೆ ಮತ್ತು ಜನರಿಗೆ ಯಾವುದೇ ಕೊಡುಗೆ ಇಲ್ಲ. ಆದ್ದರಿಂದ ನಡ ಮತ್ತು ಕನ್ಯಾಡಿ ಗ್ರಾಮದ ಜನರಿಗೆ ಉಚಿತವಾಗಿ ಪ್ರವೇಶ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಮಳೆ ಮಾಪನ ದೋಷದಿಂದ ರೈತರಿಗೆ ಅನ್ಯಾಯ: ನಡ ಗ್ರಾಮದಲ್ಲಿ ಮಳೆ ಮಾಪನ ಯಂತ್ರ ಸರಿಯಿಲ್ಲದ ಕಾರಣ ರೈತರಿಗೆ ಬೆಳೆ ವಿಮೆಯಲ್ಲಿ ತಾರತಮ್ಯವಾಗಿದೆ. ಇದರಿಂದ ರೈತರ ಜೀವನದ ಜೊತೆ ಚೆಲ್ಲಾಟ ಆಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆ ಎಂದು ರೈತರು ಆರೋಪಿಸಿದರು. ಆರೋಗ್ಯ ಮತ್ತು ಸಾಮಾಜಿಕ ಭದ್ರತೆ:ಹಾವು ಕಡಿತವಾದಾಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚುಚ್ಚು ಮದ್ದು ಇದೆಯಾ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಆರೋಗ್ಯ ಅಧಿಕಾರಿ, ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ತಾಲೂಕು ಆಸ್ಪತ್ರೆಗೆ ಕಳುಹಿಸುತ್ತೇವೆ ಎಂದು ಉತ್ತರಿಸಿದರು.
ಇದೇ ವೇಳೆ ಗ್ರಾಮಸ್ಥರು ಆಡಳಿತಾಧಿಕಾರಿ ಮತ್ತು ಪಿಡಿಒ ಅವರ ಉತ್ತಮ ಕೆಲಸವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.ನೀಟ್ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಯೊಬ್ಬರಿಗೆ ತುರ್ತಾಗಿ ಜಾತಿ-ಆದಾಯ ಪ್ರಮಾಣ ಪತ್ರ ಅಗತ್ಯವಿತ್ತು. ಈ ಬಗ್ಗೆ ನಡ ಕನ್ಯಾಡಿ ಗ್ರಾಮ ಆಡಳಿತಾಧಿಕಾರಿ ನಿವೇದಿತಾ ಅವರನ್ನು ವಿನಂತಿಸಿದಾಗ ಅವರು ತಕ್ಷಣ ಸ್ಪಂದಿಸಿ ಸರ್ಟಿಫಿಕೇಟ್ ಮಾಡಿಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.
SSLC ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಅನನ್ಯ ವಿದ್ಯಾರ್ಥಿನಿಯನ್ನು ಗ್ರಾಮ ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ನ್ಯಾಕ್ ಸ್ವಾಗತಿಸಿದರು. ಸಿಬ್ಬಂದಿ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಭಾರತಿ ಅವರು ಪಂಚಾಯತ್ ಜಮಾ-ಖರ್ಚಿನ ಲೆಕ್ಕವನ್ನು ಪ್ರಸ್ತಾಪಿಸಿದರು.









