ಶಿಶಿಲದಲ್ಲಿ ನೂತನ ಮಳೆ ಮಾಪನ ಯಂತ್ರ ಅಳವಡಿಕೆ: ರೈತರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಕೃಷಿ ಇಲಾಖೆ

0

ಶಿಶಿಲ, ಆ. 4: ಕಳೆದ ಎರಡು ವರ್ಷಗಳಿಂದ ಶಿಶಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಮಾಪನ ಯಂತ್ರ ಕಾರ್ಯನಿರ್ವಹಿಸದೇ ರೈತರು ಎದುರಿಸುತ್ತಿದ್ದ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆತಿದೆ. ಕೃಷಿ ಇಲಾಖೆಯು ಸೋಮವಾರ ನೂತನ ಮಳೆ ಮಾಪನ ಯಂತ್ರವನ್ನು ಅಳವಡಿಸುವ ಮೂಲಕ ರೈತರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದೆ.

ಮಳೆ ಮಾಪನ ಯಂತ್ರ ಕಾರ್ಯನಿರ್ವಹಿಸದ ಕಾರಣ ಈ ಭಾಗದಲ್ಲಿ ಸುರಿದ ಮಳೆಯ ಅಧಿಕೃತ ದಾಖಲೆ ಲಭ್ಯವಾಗುತ್ತಿರಲಿಲ್ಲ. ಇದರ ಪರಿಣಾಮವಾಗಿ ಬೆಳೆ ವಿಮೆ ಯೋಜನೆಯಡಿ ರೈತರಿಗೆ ದೊರಕಬೇಕಿದ್ದ ಪರಿಹಾರದ ಮೊತ್ತ ಕಡಿಮೆಯಾಗುತ್ತಿದೆ ಎಂದು ರೈತರು ಹಲವು ಬಾರಿ ಆರೋಪಿಸಿದ್ದರು. ಈ ಸಮಸ್ಯೆಯಿಂದ ನೂರಾರು ರೈತರು ಆರ್ಥಿಕ ನಷ್ಟ ಅನುಭವಿಸಿದ್ದು, ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನವೂ ವ್ಯಕ್ತವಾಗಿತ್ತು.

ಈ ಕುರಿತು ಸುದ್ದಿ ಬಿಡುಗಡೆ ವರದಿ ಪ್ರಕಟಿಸಿದ್ದು ರೈತರ ಸಂಕಷ್ಟವನ್ನು ಬೆಳಕಿಗೆ ತಂದಿತ್ತು ಅಲ್ಲದೆ, ಇತ್ತೀಚೆಗೆ ನಡೆದ ಶಿಶಿಲ ಗ್ರಾಮಸಭೆಯಲ್ಲಿಯೂ ಕಳೆದ ಎರಡು ವರ್ಷಗಳಿಂದ ಮಳೆ ಮಾಪನ ಯಂತ್ರ ಕಾರ್ಯನಿರ್ವಹಿಸದಿರುವ ವಿಚಾರ ಪ್ರಮುಖವಾಗಿ ಚರ್ಚೆಯಾಗಿತ್ತು.

ಇದೀಗ ಕೃಷಿ ಇಲಾಖೆ ನೂತನ ಮಳೆ ಮಾಪನ ಯಂತ್ರವನ್ನು ಅಳವಡಿಸಿರುವುದರಿಂದ ಮಳೆಯ ನಿಖರ ದಾಖಲೆ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಬೆಳೆ ವಿಮೆ ಪರಿಹಾರ ವಿತರಣೆಯಲ್ಲೂ ರೈತರಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here